ಉಡುಪಿ : ಉಡುಪಿಯ ಅಲೆವೂರಿನಲ್ಲಿರುವ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮನೆ ಮುಂದೆ ರಸ್ತೆ ದುರಸ್ಥಿಗೆ ಅಗ್ರಹಿಸಿ ಸ್ಥಳೀಯರು ವಿಚಿತ್ರ ರೀತಿಯಲ್ಲಿ ಪ್ರತಿಭಟನೆ ದಾಖಲಿಸಿದ್ದಾರೆ. ಹೊಂಡ-ಗುಂಡಿ ತುಂಬಿದ ರಸ್ತೆ ದುಸ್ಥಿತಿ ನೋಡಿ ಬೇಸತ್ತ ಸ್ಥಳೀಯರು, “ಈ ರಸ್ತೆಯ ಅವಸ್ಥೆಯನ್ನು ಕಾಣದಷ್ಟು ಕುರುಡರಾದರೆ ರಾಜಕಾರಣಿಗಳು…!!?” ಎಂದು ರಸ್ತೆ ಮೇಲೆ ಬರೆದಿದ್ದಾರೆ.
ಉಡುಪಿ ಅಲೆವೂರಿನ ರಸ್ತೆಯಲ್ಲಿ ಬರುವ ಕುಕ್ಕಿಕಟ್ಟೆಯಲ್ಲಿ ಸಿಂಪಲ್ ಸ್ಟಾರ್ ಮನೆ ಇದೆ. ಈ ಮನೆಯ ಮುಂಭಾಗದ ರಸ್ತೆಯಲ್ಲೇ ಜನರು ಈ ಬರಹ ಬರೆದು ಅಸಮಾಧಾನ ಹೊರಹಾಕಿದ್ದಾರೆ.
ಕಳೆದ ಮಳೆಗಾಲದಲ್ಲಿ ತೀವ್ರ ಹದಗೆಟ್ಟಿರುವ ಉಡುಪಿ – ಡಯಾನಾ – ಅಲೆವೂರು ರಸ್ತೆ ಸಂಚಾರಕ್ಕೆ ಅಯೋಗ್ಯವಾಗಿದ್ದು ಸವಾರರು ಬಹುಸಮಯದಿಂದ ಹಿಡಿಶಾಪ ಹಾಕುತ್ತಿದ್ದಾರೆ. ಈ ಹಿಂದೆ ರಸ್ತೆ ದುರಸ್ತಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದ ಸ್ಥಳೀಯರು, ಈಗ ರಸ್ತೆಯಲ್ಲೇ ಬರೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.