ಉಡುಪಿ : ಶಿರೂರು ಗುಡ್ಡ ಕುಸಿತದಲ್ಲಿ ಮೃತಪಟ್ಟ ಲಾರಿ ಚಾಲಕ ಅರ್ಜುನ್ ಅವರ ಮೃತದೇಹವನ್ನು ಉಡುಪಿಗೆ ಕರೆತರಲಾಯಿತು. ನಗರದ ಚಿತ್ತರಂಜನ್ ಸರ್ಕಲ್ನಲ್ಲಿ ಆಯೋಜಿಸಲಾದ ಅಂತಿಮ ದರ್ಶನ ಕಾರ್ಯಕ್ರಮದಲ್ಲಿ ಜನಸ್ತೋಮ ಸೇರಿದ್ದು, ಕೇರಳ ಸಮಾಜದ ಬಾಂಧವರು ಹಾಗೂ ಸಾರ್ವಜನಿಕರು ಮೃತದೇಹದ ಅಂತಿಮ ದರ್ಶನ ಪಡೆದರು.
ಅರ್ಜುನ್ ಅವರ ಮೃತದೇಹವನ್ನು ಉಡುಪಿಯಿಂದ ಮಂಗಳೂರು ಮೂಲಕ ಕೇರಳದ ಕೋಝಿಕ್ಕೋಡ್ನಲ್ಲಿರುವ ಅವರ ಊರಿಗೆ ರವಾನೆ ಮಾಡಲಾಯಿತು.
ಮೃತಪಟ್ಟ ಬಳಿಕ ಎರಡು ದಿನಗಳ ಹಿಂದೆ ಗಂಗಾವಳಿಯಲ್ಲಿ ಅರ್ಜುನ್ ಅವರ ದೇಹ ಪತ್ತೆಯಾದ ಬಳಿಕ, ಸರಿಯಾದ ವ್ಯವಸ್ಥೆಗಳಿಲ್ಲದೆ, ಶವಪೆಟ್ಟಿಗೆಯಿಲ್ಲದೆಯೇ, ಬಟ್ಟೆಯಲ್ಲಿ ಬಿಡಿ ಬಿಡಿಯಾಗಿ ಕಟ್ಟಿ, ಮೃತದೇಹವನ್ನು ಸಾಗಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಉತ್ತರ ಕನ್ನಡ ಜಿಲ್ಲಾಡಳಿತದ ನಿರ್ಲಕ್ಷ್ಯ ಹಾಗೂ ಸೂಕ್ತ ವ್ಯವಸ್ಥೆಗಳ ಕೊರತೆಯನ್ನು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.
ಆದಾಗ್ಯೂ, ಉಡುಪಿಯ ಸಮಾಜಸೇವಕರ ಸಹಕಾರದಿಂದ ಮೃತದೇಹ ಕೊಂಡೊಯ್ಯಲು ಸೂಕ್ತ ಶವಪೆಟ್ಟಿಗೆಯನ್ನು ವ್ಯವಸ್ಥೆ ಮಾಡಲಾಗಿದೆ. ಈಶ್ವರ್ ಮಲ್ಪೆ ಮತ್ತು ನಿತ್ಯಾನಂದ ಒಳಕಾಡು ಅವರು ತಮ್ಮ ಸಹಕಾರ ನೀಡಿ, ಅರ್ಥಪೂರ್ಣ ಅಂತಿಮ ವ್ಯವಸ್ಥೆಗಳನ್ನು ಕೈಗೊಂಡಿದ್ದಾರೆ.
ಅರ್ಜುನ್ ಅವರ ತವರೂರು ಕೋಝಿಕ್ಕೋಡ್ಗೆ ಮೃತದೇಹವನ್ನು ಕರೆದೊಯ್ಯುವ ವ್ಯವಸ್ಥೆ ಕೈಗೊಳ್ಳಲಾಗಿದೆ.