ಉಡುಪಿ : ಈ ವರ್ಷ ಭಾರೀ ಮಳೆಯಾಗಿದ್ದು ಅನೇಕ ಅವಾಂತರ ಸೃಷ್ಟಿ ಮಾಡಿದೆ. ಮಳೆಯ ರಭಸಕ್ಕೆ ಸಣ್ಣ ಪುಟ್ಟ ಸೇತುವೆಗಳು ಕುಸಿದು ರಸ್ತೆ ಸಂಚಾರ ಬಂದ್ ಆಗಿದ್ದವು. ಉಡುಪಿ ನಗರಕ್ಕೆ ಬರುವ ಒಳದಾರಿಯ ಪೈಕಿ ಸಗ್ರಿ ನೊಳೆಯ ಹತ್ತಿರದ ಕಿರು ಸೇತುವೆ ಕುಸಿದಿದ್ದು ಸಂಚಾರಕ್ಕೆ ತೊಡಕುಂಟಾಗಿದೆ.
ದೊಡ್ಡಣಗುಡ್ಡೆಯಿಂದ ಒಳದಾರಿಯಾಗಿ ಎಂಜಿಎಂ ಕಾಲೇಜು ಸಂಪರ್ಕಿಸುವ ರಸ್ತೆಯ ಚಕ್ರತೀರ್ಥ ಎಂಬಲ್ಲಿನ ಕಿರುಸೇತುವೆ ಇತ್ತೀಚಿಗೆ ಕುಸಿದು ಇದೀಗ ರಸ್ತೆ ಸಂಚಾರ ಬಂದ್ ಆಗಿದೆ. ಇದೇಹೊತ್ತಿಗೆ ಪೆರಂಪಳ್ಳಿ- ಸಗ್ರಿಯಿಂದ ಇಂದ್ರಾಳಿ , ಉಡುಪಿಗೆ ಸಂಪರ್ಕಿಸುವ ರಸ್ತೆ ಮಧ್ಯೆ ಇರುವ ಕಿರುಸೇತುವೆ ಕುಸಿದಿದ್ದು ಈಗಾಗಲೇ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಹೀಗಿದ್ದರೂ ರಿಕ್ಷಾ, ದ್ವಿಚಕ್ರ ವಾಹನ ಸವಾರರು ಕುಸಿದಿರುವ ಕಿರು ಸೇತುವೆ ಮೂಲಕ ಸಾಗುತ್ತಿರುವುದರಿಂದ ಮತ್ತಷ್ಟು ರಸ್ತೆ ಕುಸಿದಿದೆ. ಮಾತ್ರವಲ್ಲ, ಅಪಾಯವನ್ನು ಆಹ್ವಾನಿಸುತ್ತಿದೆ. ಸುತ್ತ ಮುತ್ತ ನೂರಾರು ಮನೆಗಳಿದ್ದು ಸಂಪರ್ಕ ರಸ್ತೆ ಇಲ್ಲದಿರುವುದರಿಂದ ಸಮಸ್ಯೆ ಆಗಿದೆ. ಇಂದ್ರಾಳಿ ಶಾಲೆ , ಎಂಜಿಎಂ ಕಾಲೇಜಿಗೆ ಹೋಗಲು ಮಕ್ಕಳಿಗೆ ಹಾಗೂ ಕಚೇರಿಗೆ ತೆರಳುವ ಸಿಬ್ಬಂದಿಗಳಿಗೆ ಭಾರೀ ಸಮಸ್ಯೆ ಆಗಿದ್ದು ಒಂದು ಸುತ್ತು ಹೊಡೆದು ಉಡುಪಿಗೆ ಬರಬೇಕಾಗಿದೆ. ಆದ್ದರಿಂದ ಆದಷ್ಟು ಬೇಗ ಈ ಕಿರು ಸೇತುವೆ ದುರಸ್ತಿ ಗೊಳಿಸಿ ಸಂಚಾರಕ್ಕೆ ಅನುವು ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.