ಮಂಗಳೂರು : ಕಳೆದ ನಾಲ್ಕೈದು ದಿನಗಳಿಂದ ಮಂಗಳೂರು ಮನಪಾದಿಂದ ಟೈಗರ್ ಕಾರ್ಯಾಚರಣೆ ನಡೆಯುತ್ತಿದೆ. ಇದೀಗ ಗೂಡಂಗಡಿ ತೆರವು ಕಾರ್ಯಾಚರಣೆ ವಿರುದ್ಧ ತಿರುಗಿಬಿದ್ದಿರುವ ಬೀದಿಬದಿ ವ್ಯಾಪಾರಿಗಳು ನಗರದ ಸರ್ವೀಸ್ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದ್ದಾರೆ.
ನೂರಾರು ಸಂಖ್ಯೆಯಲ್ಲಿ ಸರ್ವೀಸ್ ಬಸ್ ನಿಲ್ದಾಣದ ಬಳಿ ಜಮಾಯಿಸಿ ಮನಪಾ ಟೈಗರ್ ಕಾರ್ಯಾಚರಣೆಯನ್ನು ವಿರೋಧಿಸಿದರು. ಮಹಿಳೆಯರು, ಅಂಗವಿಕಲರು ಎಂದು ನೋಡದೆ ಕಾರ್ಯಾಚರಣೆ ನಡೆಸಿ ಅಂಗಡಿಗಳನ್ನು ಕೊಂಡೊಯ್ದಿದ್ದಾರೆ. ಹೊಟ್ಟೆಪಾಡಿಗೆ ದುಡಿಯುವ ಬೀದಿಬದಿ ವ್ಯಾಪಾರಿಗಳ ಮೇಲೆ ಈ ದೌರ್ಜನ್ಯ ಸರಿಯಲ್ಲ. ಮೊನ್ನೆ ಪ್ರತಿಭಟನೆ ಬಳಿಕ ಮನಪಾ ಆಯುಕ್ತರು ಮತ್ತೆ ಕಾರ್ಯಾಚರಣೆ ನಡೆಸೋಲ್ಲ ಎಂದು ಪೊಲೀಸರ ಎದುರೇ ಹೇಳಿದ್ದರು. ಆದರೆ ಆ ಬಳಿಕವೂ ಟೈಗರ್ ಕಾರ್ಯಾಚರಣೆ ನಡೆಸಿರುವುದು ಎಷ್ಟು ಸರಿ. ಆದರೆ ಅವರಿಗೆ ಬೇಕಾದ ಅಂಗಡಿಗಳು, ನಂದಿನಿ ಮಿಲ್ಕ್ ಬೂತ್ಗಳನ್ನು ತೆರವುಗೊಳಿಸಿಲ್ಲ. ಬುಲ್ಡೋಜರ್ ನುಗ್ಗಿಸಿ ಹುಡಿ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಳಿಕ ಮನಪಾ ಅಧಿಕಾರಿಯೊಬ್ಬರು ಪ್ರತಿಭಟನೆ ನಿಲ್ಲಿಸುವಂತೆ ಹೇಳಿದರೂ, ಪ್ರತಿಭಟನಾಕಾರರು ಜಗ್ಗಲಿಲ್ಲ. ನಮ್ಮ ಅಂಗಡಿಗಳು ಮಾತ್ರವಲ್ಲ ಸರ್ವೀಸ್ ಬಸ್ ತಂಗುದಾಣದ ಬಳಿಯಿರುವ ಗೂಡಂಗಡಿ, ನಂದಿನಿ ಮಿಲ್ಕ್ ಪಾರ್ಲರ್ಗಳನ್ನು ತೆರವುಗೊಳಿಸಿ ಎಂದು ಪಟ್ಟುಹಿಡಿದರು. ಆಕ್ರೋಶಕ್ಕೆ ಮಣಿದ ಮನಪಾ ಅಧಿಕಾರಿಗಳು ಅಲ್ಲಿನ ಗೂಡಂಗಡಿಗಳ ಮೇಲೆಯೂ ಕಾರ್ಯಾಚರಣೆ ನಡೆಸಿದರು. ಈ ವೇಳೆ ಕೆಲ ಅಂಗಡಿಗಳ ಅನಧಿಕೃತ ಸರಕುಗಳನ್ನು ಸೀಝ್ ಮಾಡಲಾಯಿತು.
ಈ ವೇಳೆ ಸುನೀಲ್ ಕುಮಾರ್ ಬಜಾಲ್ ಮಾತನಾಡಿ, ಈ ರೀತಿ ಮಾಡಿದರೆ ನಮ್ಮ ಬೀದಿಬದಿ ವ್ಯಾಪಾರಿ ಮಹಿಳೆಯರ ಶಾಪ ನಿಮಗೆ ತಟ್ಟಿಯೇ ತಟ್ಟುತ್ತದೆ. ಅಧಿಕಾರಿಗಳನ್ನು ಛೂ ಬಿಟ್ಟು ಮೇಯರ್ ಚಕ್ಕಂದ ಆಡಲು ಜಾಲಿ ಟ್ರಿಪ್ ಹೋಗಿದ್ದಾರೆ. ಶಾಸಕ ವೇದವ್ಯಾಸ ಕಾಮತ್ ಗುಡ್ಡಕುಸಿತದ ಮಣ್ಣಿನಡಿ ಹುದುಗಿ ಹೋಗಿದ್ದಾರೆ. ಬಡಪಾಯಿಗಳ ಬೀದಿಬದಿ ಅಂಗಡಿಗಳನ್ನು ಎತ್ತಂಗಡಿ ಮಾಡಿಸಿ, ನಿಮ್ಮವರಿಗೆ ಕೊಡುತ್ತೀರಾ? ನಿಮ್ಮ ಪೊಲೀಸ್ ಬಲಕ್ಕೆ ನಾವು ಬಗ್ಗುವುದಿಲ್ಲ. ಮನಪಾ ಆಯುಕ್ತರು ನಾಲಾಯಕ್, ಅಯೋಗ್ಯ ಕಮಿಷನರ್. ನಮ್ಮ ಮೇಲೆ ಕೈಮಾಡಿದರೆ ನಿಮ್ಮ ವಂಶ ನಿರ್ವಂಶವಾಗುತ್ತದೆ. ಮಣ್ಣು ತಿಂದು ಹೋಗುತ್ತೀರಿ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದರು.