Public Administration
ಉಡುಪಿ : ಉಡುಪಿ ಜಿಲ್ಲೆಯ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳು ತಮ್ಮ ಹಲವು ಬೇಡಿಕೆಗಳನ್ನು ಮುಂದಿರಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಸುತ್ತಿರುವ ಧರಣಿ ಸ್ಥಳಕ್ಕೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭಾಗವಹಿಸಿ ಧರಣಿ ನಿರತರ ಮನವಿ ಸ್ವೀಕರಿಸಿದರು.

ಸಮಸ್ಯೆಗಳನ್ನು ಹೇಳಿಕೊಂಡ ಗ್ರಾಮ ಆಡಳಿತ ಅಧಿಕಾರಿಗಳು, 15ಕ್ಕೂ ಹೆಚ್ಚು APPಗಳ ಮೂಲಕ ಇಲಾಖೆಯ ಕಾರ್ಯಕ್ರಮಗಳು ನಡೆಯುತ್ತಿದ್ದು ನಮಗೆ ಇಲ್ಲಿಯವರೆಗೆ ಯಾವುದೇ ಮೊಬೈಲ್ ಫೋನ್ಗಳ ಸರಬರಾಜು ಮಾಡಿಲ್ಲ ಎಂದು ದೂರಿದರು. ತಮ್ಮಿಂದ ಇಲಾಖೆಯು ರಜಾ ದಿನಗಳಲ್ಲಿಯೂ ಕೆಲಸ ಮಾಡಿಸಿಕೊಳ್ಳುತ್ತಿದ್ದು ಹೆಚ್ಚುವರಿ ಸೌಲಭ್ಯ ನೀಡುತ್ತಿಲ್ಲ. ಅಂತರ್ ಜಿಲ್ಲಾ ವರ್ಗಾವಣೆ ನಿಲುಗಡೆ ಮಾಡಿದ್ದು ನಾವು ಕೆಲವರಂತೂ 15-20 ವರ್ಷಗಳಿಂದ ತವರು ಜಿಲ್ಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ನಮ್ಮ ಸಮಸ್ಯೆಗಳಿಗೆ ಪರಿಹಾರ ನೀಡಲು ತಾವು ಸರ್ಕಾರದ ಮೇಲೆ ಒತ್ತಡ ತರಬೇಕೆಂದು ವಿನಂತಿಸಿದರು. ಮನವಿ ಸ್ವೀಕರಿಸಿದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಸಂಬಂಧಪಟ್ಟ ಕಂದಾಯ ಸಚಿವರ ಜೊತೆ ಗ್ರಾಮ ಆಡಳಿತ ಅಧಿಕಾರಿಗಳ ಕೋರಿಕೆ ಸಲ್ಲಿಸುತ್ತೇನೆಂದು ಎಂದು ಹೇಳಿದರು.
ಕಾಪು ತಾಲೂಕು ಮಟ್ಟದ ತ್ರೈಮಾಸಿಕ ಕೆ.ಡಿ.ಪಿ ಸಭೆ – ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭಾಗಿ
ಕಾಪು : ತಾಲೂಕು ಮಟ್ಟದ ತ್ರೈಮಾಸಿಕ ಕೆ.ಡಿ.ಪಿ ಸಭೆ ಕಾಪು ಪುರಸಭೆಯ ಸಭಾಂಗಣದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆಯಿತು.

ಈ ಬಾರಿ ಸುರಿದ ಮಳೆಯಿಂದ ಹಾನಿಗೀಡಾದ ಕೃಷಿ ಬೆಳೆಗಳಿಗೆ ಹೆಕ್ಟೇರ್ವಾರು ಪರಿಹಾರವನ್ನು ನೀಡಿದ ವರದಿಯನ್ನು ನೀಡುವಂತೆ ಮತ್ತು ರೈತರಿಗೆ ಕೃಷಿ ಇಲಾಖೆಯಿಂದ ಸಬ್ಸಿಡಿ ದರದಲ್ಲಿ ಪೂರೈಕೆಯಾಗುವಂತಹ ಸಲಕರಣೆಗಳ ಮಾಹಿತಿಯನ್ನು ಪಂಚಾಯತ್ ಮಟ್ಟದಲ್ಲಿ ವ್ಯಾಪಕ ಪ್ರಚಾರ ಕೈಗೊಂಡು ಅರ್ಹ ಫಲಾನುಭವಿಗಳಿಗೆ ಕೃಷಿ ಇಲಾಖೆಯ ಬೇಡಿಕೆ ಆಧಾರಿತ ಸಲಕರಣೆಗಳನ್ನು ಒದಗಿಸಲು ಕ್ರಮ ವಹಿಸಬೇಕು. ಎಪ್ರಿಲ್, ಮೇ ಹಾಗೂ ಜೂನ್ ಮಾಹೆಯಲ್ಲಿ ಜಲಾಯನ ಅಭಿವೃದ್ಧಿ ಕಾರ್ಯಕ್ರಮಗಳು ಗುರಿಗಳು ಶೂನ್ಯವಾಗಿದ್ದು, ನೀರು ಸಂಗ್ರಹಣ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತನ್ನು ನೀಡಲು ಕ್ರಮ ವಹಿಸಬೇಕು. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ತೋಟಗಾರಿಕಾ ಇಲಾಖೆಯಲ್ಲಿ ಕೈಗೆತ್ತಿಕೊಳ್ಳಬಹುದಾದ ಕಾಮಗಾರಿಗಳನ್ನು ಗ್ರಾಮ ಪಂಚಾಯತ್ ಗಳ ಮಟ್ಟದಲ್ಲಿ ಬೇಡಿಕೆಗೆ ಅನುಗುಣವಾಗಿ ಕ್ರಿಯಾ ಯೋಜನೆಯನ್ನು ತಯಾರಿಸಿ ಅನುಷ್ಠಾನಗೊಳಿಸಲು ಕ್ರಮ ವಹಿಸಬೇಕು. ಮೀನುಗಾರ ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯದ ಯೋಜನೆಯ ಬಗ್ಗೆ ವಿವರಣೆ ನೀಡಬೇಕು ಮತ್ತು ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ಕೊರತೆಗಳು ಉಂಟಾದಲ್ಲಿ ಅತಿಥಿ ಶಿಕ್ಷಕರನ್ನು ನೇಮಕಾತಿಗೊಳಿಸುವ ಬಗ್ಗೆ ಅಗತ್ಯ ಕ್ರಮವಹಿಸಬೇಕು ಎಂದು ಶಾಸಕರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕಾಪು ತಾಲೂಕು ಪಂಚಾಯತ್ ಆಡಳಿತಾಧಿಕಾರಿಗಳಾದ ಪೂರ್ಣಿಮಾ, ಕಾಪು ತಹಶೀಲ್ದಾರರಾದ ಪ್ರತೀಭಾ ಆರ್, ಕಾಪು ತಾಲೂಕು ಕಾರ್ಯನಿರ್ವಹಣಾಧಿಕಾರಿಗಳಾದ ಜೇಮ್ಸ್ ಡಿಸಿಲ್ವ ಹಾಗೂ ಕಾಪು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಉಡುಪಿ ನಗರಸಭೆಯ ನೂತನ ಅಧ್ಯಕ್ಷರಾಗಿ ಪ್ರಭಾಕರ ಪೂಜಾರಿ, ಉಪಾಧ್ಯಕ್ಷರಾಗಿ ರಜನಿ ಹೆಬ್ಬಾರ್ ಆಯ್ಕೆ
ಉಡುಪಿ : ಉಡುಪಿ ನಗರಸಭೆ ನೂತನ ಅಧ್ಯಕ್ಷರಾಗಿ ಬಿಜೆಪಿಯ ಪ್ರಭಾಕರ ಪೂಜಾರಿ ಹಾಗೂ ಉಪಾಧ್ಯಕ್ಷೆಯಾಗಿ ರಜನಿ ಹೆಬ್ಬಾರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಂದು ಉಡುಪಿ ನಗರಸಭೆಯ ಸತ್ಯಮೂರ್ತಿ ಸಭಾಭವನದಲ್ಲಿ ಚುನಾವಣಾಧಿಕಾರಿ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಮಹೇಶ್ ಚಂದ್ರ ಅವರು ಈ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲು ನಿಗದಿಪಡಿಸಲಾಗಿತ್ತು. ಈ ಎರಡು ಸ್ಥಾನಗಳಿಗೆ ಕ್ರಮವಾಗಿ ಗುಂಡಿಬೈಲು ವಾರ್ಡ್ನ ಪ್ರಭಾಕರ ಪೂಜಾರಿ ಹಾಗೂ ಒಳಕಾಡು ವಾರ್ಡ್ನ ರಜನಿ ಹೆಬ್ಬಾರ್ ನಾಮಪತ್ರ ಸಲ್ಲಿಸಿದ್ದರು.
ಯಾವುದೇ ಪ್ರತಿಸ್ಪರ್ಧಿ ಇಲ್ಲದ ಕಾರಣ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಿ ಚುನಾವಣಾಧಿಕಾರಿ ಘೋಷಿಸಿದರು.
ಪ್ರಭಾಕರ ಪೂಜಾರಿ ಗುಂಡಿಬೈಲು ವಾರ್ಡ್ನಿಂದ ಮೂರು ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದು, ರಜಿನಿ ಹೆಬ್ಬಾರ್ ಒಳಕಾಡು ವಾರ್ಡ್ನಿಂದ ಮೊದಲ ಬಾರಿಗೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 35 ಸಂಖ್ಯಾಬಲ ಇರುವ ನಗರಸಭೆಯಲ್ಲಿ ಬಿಜೆಪಿ 32 ಹಾಗೂ ಕಾಂಗ್ರೆಸ್ 3 ಸದಸ್ಯರನ್ನು ಹೊಂದಿದೆ.
ಉಡುಪಿ ಜಿಲ್ಲಾ ಧಾರ್ಮಿಕ ಪರಿಷತ್ತಿನ ಪ್ರಥಮ ಸಭೆ : ಪ್ರವರ್ಗ ಬಿ ಮತ್ತು ಸಿ ದರ್ಜೆಯ 42 ದೇವಾಲಯಗಳಿಗೆ ವ್ಯವಸ್ಥಾಪನಾ ಸಮಿತಿ ರಚನೆಗೆ ತೀರ್ಮಾನ
ಉಡುಪಿ : ಜಿಲ್ಲಾ ಧಾರ್ಮಿಕ ಪರಿಷತ್ತಿನ ಪ್ರಥಮ ಸಭೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನೆರವೇರಿತು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಡುಪಿ ಜಿಲ್ಲೆಯ ಪ್ರವರ್ಗ ಬಿ ಮತ್ತು ಪ್ರವರ್ಗ ಸಿ ದರ್ಜೆಯ ದೇವಸ್ಥಾನಗಳಲ್ಲಿ ಕನ್ನಡ ನಾಮಫಲಕ ಕಡ್ಡಾಯ ಮತ್ತು ಈ ದೇವಸ್ಥಾನವು ಹಿಂ.ದಾ.ದ ಇಲಾಖೆಗೆ ಸೇರಿದೆ ಎಂಬ ಸ್ಪಷ್ಟ ಉಲ್ಲೇಖ ಮಾಡುವುದು, ಪ್ರವರ್ಗ ಬಿ ಯ 4 ದೇವಾಲಯಗಳು ಮತ್ತು ಪ್ರವರ್ಗ ಸಿ ಯ 38 ಸೇರಿದಂತೆ ಒಟ್ಟು 42 ದೇವಾಲಯಗಳಿಗೆ ನೂತನ ವ್ಯವಸ್ಥಾಪನಾ ಸಮಿತಿ ರಚಿಸಲು ಅನುಮೋದನೆ ಪಡೆಯಲಾಯಿತು. ಈ ಬಾರಿ ವ್ಯವಸ್ಥಾಪನಾ ಸಮಿತಿ ರಚನೆಗೆ ಅರ್ಜಿಗಳನ್ನು ಸ್ವೀಕರಿಸಿ ಆಯ್ಕೆ ಪ್ರಕ್ರಿಯೆ ನಡೆಸುವ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.

ಸಭೆಯಲ್ಲಿ ಸಹಾಯಕ ಆಯುಕ್ತ ಪ್ರಶಾಂತ ಕುಮಾರ ಶೆಟ್ಟಿ,
ಶ್ರೀ ವೆಂಕಟೇಶ ಅಡಿಗ ಉಳ್ತೂರು(ವೇದ),
ಶ್ರೀ ರಾಜೇಶ ನಡ್ಯತಿಲ್ಲಾಯ(ಆಗಮ),
ಶ್ರೀ ಶಶಿಧರ ಶೆಟ್ಟಿ (ಕಾನೂನು),
ಶ್ರೀ ನಾಗಪ್ಪ ಕೊಠಾರಿ (ಹಿಂದುಳಿದ ವರ್ಗ),
ಶ್ರೀ ಶ್ರೀನಿವಾಸ ಹೆಬ್ಬಾರ್ (ಸಾಮಾನ್ಯ),
ಶ್ರೀ ಪದ್ಮನಾಭ ಬಂಗೇರ(ಸಾಮಾನ್ಯ),
ಶ್ರೀ ಸದಾನಂದ ಹೇರೂರು(ಸಾಮಾನ್ಯ),
ಶ್ರೀ ಆಶಾ ಚಂದ್ರಶೇಖರ್ (ಮಹಿಳಾ) ಮುಂತಾದವರು ಭಾಗವಹಿಸಿದ್ದರು.
