ಉಡುಪಿ : ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ರಜತ ಮಹೋತ್ಸವದ ಪ್ರಯುಕ್ತ ‘ರಜತ ಕ್ರೀಡಾ ಸಂಭ್ರಮ’ ವಾರ್ಷಿಕ ಕ್ರೀಡಾಕೂಟವನ್ನು ಅ.22ರಂದು ಅಜ್ಜರಕಾಡುವಿನಲ್ಲಿರುವ ಉಡುಪಿ ಜಿಲ್ಲಾ ಕ್ರೀಡಾಂಗಣ ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ತಿಳಿಸಿದ್ದಾರೆ.
ಉಡುಪಿ ಪತ್ರಿಕಾ ಭವನದಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘವು ರಜತ ಸಂಭ್ರಮದ ಹಿನ್ನೆಲೆಯಲ್ಲಿ ಈ ಬಾರಿಯ ಕ್ರೀಡಾಕೂಟವನ್ನು ಅದ್ದೂರಿ ಹಾಗೂ ವಿಶಿಷ್ಟ ರೀತಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಬೆಳಗ್ಗೆ 9ಗಂಟೆಗೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಸಂಘದ ಧ್ವಜಾರೋಹಣವನ್ನು ನೆರವೇರಿಸಲಿರುವರು. ಇದೇ ಸಂದರ್ಭದಲ್ಲಿ ಕ್ರೀಡಾ ಕೂಟಕ್ಕೆ ಉಡುಪಿ ಜಿಲ್ಲಾ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಚಾಲನೆ ನೀಡಲಿರುವರು.
ಬೆಳಗ್ಗೆ 10.30ಕ್ಕೆ ಕ್ರೀಡಾಕೂಟವನ್ನು ಮಣಿಪಾಲ ಮಾಹೆಯ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಉದ್ಘಾಟಿಸಲಿರುವರು. ಇದೇ ಸಂದರ್ಭದಲ್ಲಿ ಪತ್ರಕರ್ತರಾ ದೀಪಕ್ ಜೈನ್ ನೇತೃತ್ವದಲ್ಲಿ ವಿವಿಧ ತಾಲೂಕು ಸಂಘಗಳ ಸದಸ್ಯರಿಂದ ಪಥ ಸಂಚಲನ ನಡೆಯಲಿದ್ದು, ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಗೌರವ ವಂದನೆ ಸ್ವೀಕರಿಸಲಿದ್ದಾರೆ. ಪತ್ರಕರ್ತ ರಾಜು ಖಾರ್ವಿ ನೇತೃತ್ವದಲ್ಲಿ ಪ್ರಜ್ವಲ್ ಅಮೀನ್ ಹಾಗೂ ಅನಿಲ್ ಕೈರಂಗಳ ಕ್ರೀಡಾ ಜ್ಯೋತಿ ಬೆಳಗಿಸಲಿದ್ದು, ಕ್ರೀಡಾಜ್ಯೋತಿಯನ್ನು ಉಡುಪಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಶನ್ ಅಧ್ಯಕ್ಷ ಹರಿಪ್ರಸಾದ್ ರೈ ಹಸ್ತಾಂತರಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ರಾಜೇಶ್ ಶೆಟ್ಟಿ ಅಲೆವೂರು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಅವಿನಾಶ್ ಶೆಟ್ಟಿ, ಉದ್ಯಾವರ ಕುತ್ಪಾಡಿ ಯಶಸ್ವಿ ಫಿಶ್ಮಿಲ್ ನಿರ್ದೇಶಕರಾದ ಉದಯ ಕುಮಾರ್, ಉಡುಪಿ ನಗರಸಭೆ ಪೌರಾಯುಕ್ತರಾದ ರಾಯಪ್ಪ ಭಾಗವಹಿಸಲಿದ್ದಾರೆ. ಸಂಘದ ರಜತ ಮಹೋತ್ಸವ ಸಮಿತಿಯ ಸಂಚಾಲಕ ಶರೀಫ್ ಕಾರ್ಕಳ, ಸಂಘದ ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು, ರಾಷ್ಟ್ರೀಯ ಸಮಿತಿ ಸದಸ್ಯ ಅರುಣ್ ಕುಮಾರ್ ಶಿರೂರು ಗೌರವ ಉಪಸ್ಥಿತರಿರುವರು.
ಕ್ರೀಡಾಕೂಟದಲ್ಲಿ ಓಟ, ಉದ್ದ ಜಿಗಿತ, ರಿಲೇ, ಹಗ್ಗಜಗ್ಗಾಟ, ಮಡಕೆ ಒಡೆಯುವ ಸ್ಪರ್ಧೆ, ಸ್ಲೋ ಬೈಕ್ ರೇಸ್, ಈಜು ಸೇರಿದಂತೆ ವಿವಿಧ ಮನರಂಜನಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. 40ವರ್ಷ ಕೆಳಗಿನ, 40ವರ್ಷ ಮೇಲ್ಪಟ್ಟ ಹಾಗೂ 50ವರ್ಷ ಮೇಲ್ಪಟ್ಟ ಒಟ್ಟು ಮೂರು ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ.
ಸ್ಪರ್ಧೆಯ ವಿಜೇತರಿಗೆ ವಿಶಿಷ್ಟ ರೀತಿಯಲ್ಲಿ ಸಿದ್ಧಪಡಿಸಿದ ವೇದಿಕೆಯಲ್ಲಿ ಪದಕ ನೀಡುವ ಮೂಲಕ ಗೌರವ ಸಲ್ಲಿಸಲಾಗುವುದು. ಅದೇ ರೀತಿ ನವೆಂಬರ್ ತಿಂಗಳಲ್ಲಿ ನಡೆಯುವ ರಜತ ಮಹೋತ್ಸವ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ, ರಾಜ್ಯ ಸಮಿತಿ ಸಮಿತಿ ಸದಸ್ಯ ಕಿರಣ್ ಮಂಜನಬೈಲು ಉಪಸ್ಥಿತರಿದ್ದರು.