ಬಂಟ್ವಾಳ : ಭ್ರಷ್ಟ, ಜನ ವಿರೋಧಿ, ಹಿಂದೂ ವಿರೋಧಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಬುದ್ದಿ ಕಲಿಸಬೇಕಾದ ಅಗತ್ಯವಿದೆ. ಆದ್ದರಿಂದ ರಾಜ್ಯ ಸರಕಾರದ ವಿರುದ್ಧ ರಾಷ್ಟ್ರಪತಿಗಳಿಗೆ ದೂರು ನೀಡಿ, ಸರ್ಕಾರವನ್ನು ವಜಾಗೊಳಿಸಲು ಮನವಿ ಸಲ್ಲಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಬಂಟ್ವಾಳದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ಪರಿಣಾಮ ಸರ್ಕಾರ ಒಂದೂವರೆ ವರ್ಷದಲ್ಲೇ ಜನರ ಹಿಡಿಶಾಪಕ್ಕೆ ಒಳಗಾಗಿದೆ. ವಾಲ್ಮೀಕಿ ಹಗರಣದ ಹಗರಣದ ಬಗ್ಗೆ ಸಿಎಂ ಸದನದಲ್ಲೇ ಒಪ್ಪಿದ್ದಾರೆ. ಮೈಸೂರಿನ ಮುಡಾ ಹಗರಣದಲ್ಲೂ ಸಿದ್ದರಾಮಯ್ಯ ಅದೇ ರೀತಿ ಹೇಳಿದ್ದಾರೆ. ಪರಿಹಾರ ನಿರೀಕ್ಷಿಸದೆ ನಿವೇಶನ ಹಿಂದೆ ಕೊಟ್ಟಿದ್ದಾರೆ. ಮೊದಲು ಪರಿಹಾರ ಕೊಡಿ ಎಂದಿದ್ದ ಸಿದ್ದರಾಮಯ್ಯ ಈಗ ಪರಿಹಾರ ಕೇಳದೇ ಹಿಂದಿರುಗಿಸಿದ್ದಾರೆ. ಈ ಮೂಲಕ ತಪ್ಪು ಮಾಡಿರೋದನ್ನು ಒಪ್ಪಿಕೊಂಡಿದ್ದಾರೆ ಎಂದರು.
ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಗೆ ಹಣ ನೀಡುತ್ತಿಲ್ಲ. ಮೊನ್ನೆ ರಾಜು ಕಾಗೆ ಸ್ವತಃ ಅನುದಾನ ಸಿಗುತ್ತಿಲ್ಲವೆಂದು ಹೇಳಿ ಕ್ಷೇತ್ರದಲ್ಲಿ ತಲೆ ಎತ್ತಿನಡೆಯಲಾಗದೇ ಆತ್ಮಹತ್ಯೆ ಮಾಡುವ ಪರಿಸ್ಥಿತಿಯಿದೆ ಅಂದಿದ್ದಾರೆ.
ಕ್ಯಾಬಿನೆಟ್ನಲ್ಲಿ ಹುಬ್ಬಳ್ಳಿ ಗಲಭೆಯ ಆರೋಪಿಗಳ ಕೇಸು ವಾಪಾಸ್ ಪಡೆಯಲಾಗಿದೆ. ದೇಶದ್ರೋಹಿಗಳ ಕೇಸುಗಳನ್ನು ವಾಪಸ್ ಪಡೆಯಲಾಗಿದೆ. ಎನ್ಐಎ ಸೇರಿ ಕರ್ನಾಟಕ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಹೀಗಿರುವಾಗ ಕೇಸು ವಾಪಸ್ ಪಡೆದಿರೋದು ಅಕ್ಷಮ್ಯ ಅಪರಾಧ. ಈ ಹಿನ್ನೆಲೆಯಲ್ಲಿ ಅ.25ರಂದು ಹುಬ್ಬಳ್ಳಿಯಲ್ಲಿ ಬೃಹತ್ ಹೋರಾಟ ಮಾಡ್ತೇವೆ ಎಂದರು.
ಚೆನ್ನಪಟ್ಟಣ, ಸಂಡೂರು ಉಪಚುನಾವಣೆ ಅಭ್ಯರ್ಥಿ ಘೋಷಣೆ ವಿಚಾರ ರಾಷ್ಟ್ರೀಯ ನಾಯಕರ ಮುಂದಿದೆ. ಹಲವು ಬಾರಿ ರಾಷ್ಟ್ರೀಯ ಅಧ್ಯಕ್ಷರ ಜೊತೆ ಚರ್ಚೆ ಆಗಿದೆ. ಆದರೆ ಈವರೆಗೆ ಯಾರು ಅಭ್ಯರ್ಥಿ ಅನ್ನೋದು ಚರ್ಚೆಯಾಗಿಲ್ಲ. ಡಿಕೆಶಿ ಬೆಂಗಳೂರು ಗ್ರಾಮಾಂತರದಲ್ಲೂ ನಾನೇ ಅಭ್ಯರ್ಥಿ ಅಂದಿದ್ದರು. ಆದರೆ ಅಲ್ಲಿನ ಜನ ಅವರಿಗೆ ಅಲ್ಲಿ ಪಾಠ ಕಲಿಸಿದ್ದಾರೆ. ಹೀಗಾಗಿ ಚನ್ನಪಟ್ಟಣದಲ್ಲೂ ಜನರು ಅವರಿಗೆ ಪಾಠ ಕಲಿಸ್ತಾರೆ. ನಾವು ತಕ್ಷಣ ಸೂಕ್ತ ಅಭ್ಯರ್ಥಿಗಳ ಆಯ್ಕೆ ಮಾಡ್ತೇವೆ ಎಂದರು.