ಉಡುಪಿ : ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಪಡು ಗ್ರಾಮದ ತವಕ್ಕಲ್ ಫಿಷ್ ಫ್ಯಾಕ್ಟರಿ ಹಲವು ವರ್ಷಗಳಿಂದ ಪರಿಸರ ಮಾಲಿನ್ಯ ಉಂಟು ಮಾಡುತ್ತಿತ್ತು. ಆ ಕಾರ್ಖಾನೆಯನ್ನು ಮುಟ್ಟುಗೋಲು ಹಾಕಿಕೊಂಡು ನೆಲ ಜಲದ ರಕ್ಷಣೆ ಮಾಡಿ ತಹಶಿಲ್ದಾರ್ ಪ್ರತಿಭಾ ತಮ್ಮ ಪರಿಸರ ಪ್ರೇಮ ಮೆರೆದಿದ್ದಾರೆ.
ಪರಿಸರ ಮಾಲಿನ್ಯ ತಡೆಗಟ್ಟಲು ಕೈಗೊಳ್ಳಬೇಕಾದ ಯಾವುದೇ ಕ್ರಮಗಳನ್ನು ಕೈಗೊಳ್ಳದೆ ಫಿಷ್ ಕಟಿಂಗ್ ಕಾರ್ಯವನ್ನು ಇಲ್ಲಿ ಕೈಗೊಳ್ಳಲಾಗುತ್ತಿತ್ತು. ಜೊತೆಗೆ ಅತಿ ದುರ್ನಾತ ಬೀರುತ್ತಿತ್ತು. ಜನರು ಈ ದುರ್ವಾಸನೆಗೆ ಬೇಸತ್ತು ಹೋಗಿದ್ದರು. ಇದನ್ನು ಮುಚ್ಚಿಸಲು ಹಲವು ಪ್ರಯತ್ನ ಮಾಡಿದ್ದರೂ ಅದು ಸಾಧ್ಯವಾಗಿರಲಿಲ್ಲ.
ಪರಿಸರ ಮಾಲಿನ್ಯ ಇಲಾಖೆಯಿಂದ ಮುಟ್ಟುಗೋಲು ಹಾಕಿಕೊಳ್ಳಲು ಶಿಫಾರಸು ಈ ಕಾರ್ಖಾನೆಯನ್ನು ಪರಿಶೀಲಿಸಿ ಅಲ್ಲಿಯ ಅವ್ಯವಸ್ಥೆಯನ್ನು ಮನಗಂಡ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಇದು ಪರಿಸರಕ್ಕೆ ಮಾರಕವಾದ ತ್ಯಾಜ್ಯಗಳನ್ನು ಹೊರಕ್ಕೆ ಬಿಡುತ್ತಿದೆ ಆದ್ದರಿಂದ ತಕ್ಷಣವೇ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಬಹಳ ವರ್ಷಗಳ ಹಿಂದೆಯೇ ಶಿಫಾರಸು ಮಾಡಿತ್ತು.
ಜಿಲ್ಲಾಧಿಕಾರಿಯವರು ಈ ವರದಿಯ ಆಧಾರದ ಮೇಲೆ ಈ ತವಕ್ಕಲ್ ಫಿಷ್ ಫ್ಯಾಕ್ಟರಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ತಹಶಿಲ್ದಾರ್ ಗೆ ಆದೇಶ ಮಾಡಿರುತ್ತಾರೆ. ಮಾನ್ಯ ಜಿಲ್ಲಾಧಿಕಾರಿಯವರ ಆದೇಶದಂತೆ 3-12-24 ರಂದು ತಹಶಿಲ್ದಾರ್ ಪ್ರತಿಭಾ ಆರ್ ಕಾರ್ಖಾನೆಯನ್ನು ಮುಚ್ಚಿಸಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ.
Tawakkal Fish Traders ಸ. ನಂ. 88/1E1P2 ಪಡು ಗ್ರಾಮ ಇವರು CLOSURE DIRECTIONS UNDER SECTION 33(A) of the water (Prevention and Control of Pollution) Act 1974 read with the Rule 34 of the Karnataka Board for the prevention and control of water pollution) Rules 1976 ರಡಿಯಲ್ಲಿ ಜಲ ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯಿದೆ, 1974 ಅನುಸರಿಸದೆ ಉದ್ಯಮವನ್ನು ನಡೆಸುತ್ತಿದ್ದುದು ಕಂಡು ಬಂದಿದೆ. ಆದ್ದರಿಂದ ಸದ್ರಿ ಉದ್ಯಮವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ತಹಶಿಲ್ದಾರ್ ಪ್ರತಿಭಾ ಆರ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾನವೀಯ ಕಾರ್ಯಗಳಿಗೆ ಹೆಸರಾಗಿದ್ದ ತಹಶಿಲ್ದಾರ್ ಪ್ರತಿಭಾ ಆರ್ ಈ ದಿಟ್ಟ ನಡೆಯ ಮೂಲಕ ಖಡಕ್ ಅಧಿಕಾರಿ ಎಂಬುದನ್ನೂ ಸಹ ಸಾಬೀತು ಪಡಿಸಿದ್ದಾರೆ.
ಜನವಸತಿ ಇರುವ ಪುರಸಭಾ ವ್ಯಾಪ್ತಿಯ ಪಡು ಗ್ರಾಮದ ಜನತೆ ಅಕ್ಷರಶಃ ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ಇತ್ತು. ಮೀನಿನ ದುರ್ನಾತ ಬಹಳ ದೂರದವರೆಗೂ ಹಬ್ಬುತ್ತಿತ್ತು. ಹಲವು ದೂರು ನೀಡಿದರೂ ಅದು ಪ್ರಯೋಜನಕಾರಿಯಾಗಿರಲಿಲ್ಲಆದರೆ ಇಂದು ತಹಶಿಲ್ದಾರ್ ಪ್ರತಿಭಾ ರವರು ಈ ದುರ್ನಾತ ಬೀರುತ್ತಿದ್ದ ಫ್ಯಾಕ್ಟರಿ ಮುಚ್ಚಿಸಿ ಜನಗಳಿಗೆ ರಿಲೀಫ್ ನೀಡಿದ್ದಾರೆ. ಅಧಿಕಾರಿಯ ದಿಟ್ಟ ನಡೆಗೆ ಜನರು ಸಂತಸ ವ್ಯಕ್ತಪಡಿಸಿದ್ದಾರೆ.
“ನಮ್ಮ ತಾಲ್ಲೂಕಿನಲ್ಲಿ ಯಾವುದೇ ಫ್ಯಾಕ್ಟರಿ ಪರಿಸರ ಮಾಲಿನ್ಯ ಉಂಟು ಮಾಡಿಕೊಂಡು ಕಾರ್ಯ ನಿರ್ವಹಿಸುತ್ತಿದ್ದರೆ ಅದನ್ನು ತಕ್ಷಣವೇ ಮುಚ್ಚಲು ಶಿಫಾರಸು ಮಾಡಲಾಗುವುದು. ಉದ್ಯಮ-ಅಭಿವೃದ್ದಿ ಎಷ್ಟು ಮುಖ್ಯವೋ ಪರಿಸರ ರಕ್ಷಣೆಯೂ ಅಷ್ಟೇ ಮುಖ್ಯ. ಕಾರ್ಖಾನೆಗಳವರು ಸೂಕ್ತ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯೊಂದಿಗೆ ಉದ್ಯಮ ನಡೆಸಿದರೆ ನಮ್ಮ ಅಭ್ಯಂತರವೇನಿಲ್ಲ. ತಾಲ್ಲೂಕಿನ ನೆಲ-ಜಲದ ರಕ್ಷಣೆ ನನ್ನ ಆದ್ಯತೆ. ಇವತ್ತಿನ ಈ ಸೀಝ್ ಉಳಿದ ಫ್ಯಾಕ್ಟರಿ ಮಾಲೀಕರುಗಳಿಗೆ ಎಚ್ಚರಿಕೆಯ ಗಂಟೆಯಾಗಬೇಕು” ಎಂದು ತಹಶಿಲ್ದಾರ್ ಹೇಳಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಕೀರ್ತಿಕುಮಾರ್ ರವರಿಗೆ ಸೀಝ್ ಮಾಡಿದ ಫ್ಯಾಕ್ಟರಿಯ ಬೀಗದ ಕೀ ಹಸ್ತಾಂತರಿಸಲಾಯಿತು.
ಈ ಕಾರ್ಯದಲ್ಲಿ ರೆವಿನ್ಯೂ ಇನ್ಸ್ಪೆಕ್ಟರ್ ಇಜ್ಜಾರ್ ಸಾಬಿರ್, ಗ್ರಾಮಾಡಳಿತಾಧಿಕಾರಿ ವೆಂಕಟೇಶ್, ಪೋಲೀಸ್ ಇನ್ಸ್ಪೆಕ್ಟರ್, MESCOm SO ಅಜಯ್, ಪುರಸಭಾ ಅಧಿಕಾರಿ ಉಪಸ್ಥಿತರಿದ್ದರು.