ಬಂಟ್ವಾಳ : ಬಿ.ಸಿ.ರೋಡ್ನಲ್ಲಿ ನಿನ್ನೆ ನಡೆದಿದ್ದ ಪ್ರತಿಭಟನೆಯಲ್ಲಿ ಬಹಿರಂಗವಾಗಿ ಮುಸ್ಲಿಂ ಧರ್ಮವನ್ನು ಅವಹೇಳನ ಮಾಡಿ ಕೊಲೆ ಬೆದರಿಕೆ ಹಾಕಿರುವ ಆರೋಪದಲ್ಲಿ ವಿಎಚ್ಪಿ ಮುಖಂಡ ಶರಣ್ ಪಂಪ್ವೆಲ್ ಸೇರಿದಂತೆ ಮೂವರು ಹಿಂದೂ ಮುಖಂಡರ ವಿರುದ್ಧ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ವಿಎಚ್ಪಿ ಮುಖಂಡ ಶರಣ್ ಪಂಪ್ವೆಲ್, ಬಜರಂಗದಳದ ಮುಖಂಡ ಭರತ್ ಕುಮ್ಡೇಲು ಹಾಗೂ ಹಿಂದೂ ಕಾರ್ಯಕರ್ತ ಯಶೋಧರ ಕರ್ಬೆಟ್ಟು ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಮುಸ್ಲಿಂ ಸಮುದಾಯದ ಭಾವನೆ ಹಾಗೂ ಧರ್ಮದ ಘನತೆಗೆ ಧಕ್ಕೆ ತಂದಿದ್ದಾರೆ ಎಂದು ಬಂಟ್ವಾಳದ ಕೆಳಗಿನಪೇಟೆ ನಿವಾಸಿ ಮಹಮ್ಮದ್ ರಫೀಕ್ ನೀಡಿರುವ ದೂರಿನಂತೆ ಶರಣ್ ಪಂಪ್ವೆಲ್ ಹಾಗೂ ಭರತ್ ಕುಮ್ಡೇಲು ವಿರುದ್ಧ ದೂರು ದಾಖಲಿಸಿದ್ದರು. ಅದೇ ರೀತಿ ಬಂಟ್ವಾಳದ ಮಹಮ್ಮದ್ ಸಫ್ನಾಜ್ ನವಾಜ್ ನೀಡಿದ ದೂರಿನಂತೆ ಯಶೋಧರ ಕರ್ಬೆಟ್ಟು ವಿರುದ್ಧ ದಾಖಲಾಗಿತ್ತು. ಎರಡೂ ದೂರಿನಲ್ಲೂ ಮುಸ್ಲಿಂ ಸಮುದಾಯದ ಭಾವನೆಗೆ, ಧರ್ಮದ ಘನತೆಗೆ ಧಕ್ಕೆತರಲಾಗಿದೆ. ಅಲ್ಲದೆ ಪುರಸಭಾ ಸದಸ್ಯ ಶರೀಫ್ ವಿರುದ್ಧ ಕೊಲೆ ಬೆದರಿಕೆ ಹಾಕಿ ಪ್ರಚೋದನಾಕಾರಿ ಭಾಷಣ ಮಾಡಿ ಎರಡು ಕೋಮುಗಳ ನಡುವೆ ಸಂಘರ್ಷ ನಡೆಸಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಸದ್ಯ ಕೋಮುಸೂಕ್ಷ್ಮ ಪ್ರದೇಶ ಬಿ.ಸಿ.ರೋಡ್ ಸೇರಿದಂತೆ ಜಿಲ್ಲಾದ್ಯಂತ ಭಾರೀ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಆರ್ಎಎಫ್ ಪಡೆ ಜಿಲ್ಲೆಯಲ್ಲಿ ಬೀಡುಬಿಟ್ಟಿದೆ. ಗಲಭೆ ನಡೆಯದಂತೆ ಜಿಲ್ಲಾದ್ಯಂತ ಶಾಂತಿಸಭೆಗೆ ಜಿಲ್ಲಾಡಳಿತ ಪ್ಲಾನ್ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.