ಮಂಗಳೂರು : ಇಂದು ಮುಂಜಾನೆಯಿಂದ ನಾಪತ್ತೆಯಾಗಿರುವ ಮಾಜಿ ಶಾಸಕ ಮೊಯ್ದಿನ್ ಬಾವಾ ಅವರ ಸೋದರ, ಉದ್ಯಮಿ ಮುಮ್ತಾಜ್ ಆಲಿಯವರಿಗಾಗಿ ಹುಡುಕಾಟ ಮುಂದುವರೆದಿದೆ. ಕೂಳೂರು ಸೇತುವೆಯ ಮೇಲೆ ಕಾರು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೂಳೂರು ಸೇತುವೆ ಬಳಿ ನದಿಯಲ್ಲಿ ಶೋಧ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.
ಮಾಜಿ ಶಾಸಕ ಮೊಯ್ದಿನ್ ಬಾವಾ ಕೂಡ ಸ್ಥಳದಲ್ಲಿದ್ದು ಮುಳುಗುತಜ್ಞ ಈಶ್ವರ್ ಮಲ್ಪೆ ತಂಡ ಸಹಿತ ಹಲವು ರಕ್ಷಣಾ ತಂಡಗಳು ಶೋಧ ಕಾರ್ಯದಲ್ಲಿ ನಿರತವಾಗಿವೆ. ಒಂದು ಹಂತದ ಹುಡುಕಾಟದ ನಡೆಸಿದ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರು ನಾವು ಏಳು ಜನ ನದಿಯ ಆಳದಲ್ಲಿ ಮುಳುಗಿ ಕಾರ್ಯಾಚರಣೆ ನಡೆಸಿದ್ದೇವೆ, ಆದರೆ ಎಲ್ಲೂ ಕೂಡ ಅಲಿಯವರು ಪತ್ತೆಯಾಗಿಲ್ಲ ಎಂದರು.
ಸದ್ಯಕ್ಕೆ 100 ಮೀಟರ್ ಸುತ್ತುತ್ತಾ ಹುಡುಕಾಟ ನಡೆಸಲಾಗಿದೆ. ಸೇತುವೆ ಆಳಕ್ಕೆ ಇಳಿದು ಹುಡುಕಾಟ ನಡೆಸಿದ್ದೇವೆ. ಸೇತುವೆ ಕಾಮಗಾರಿ ನಡೆಯುತ್ತಿದ್ದು ಕೆಳಗೆ ಕಬ್ಬಿಣದ ಸರಳು, ಸಿಮೆಂಟ್ ಚೀಲಗಳಿವೆ. ನದಿಯ ಕೆಳಭಾಗದಲ್ಲಿ ಕತ್ತಲೆ ಇರುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ಹೇಳಿದರು. ಇಲ್ಲಿ ಬಿದ್ದಿದ್ದರೆ ಇಲ್ಲೇ ಸಿಗಬೇಕು, ಇಷ್ಟು ಬೇಗ ಸಮುದ್ರ ಸೇರುವುದಿಲ್ಲ. ಎಲ್ಲಾ ತಂಡಗಳು ಕಾರ್ಯಾಚರಣೆಯನ್ನು ಮತ್ತೆ ಮುಂದುವರೆಸಿದ್ದೇವೆ. ಅವರು ಜೀವಂತವಾಗಿ ಇರಲಿ ಎಂದು ಆಶೀಸುತ್ತೇವೆ ಎಂದರು.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಅಲಿ ಅವರ ಸಹೋದರ ಬಿ.ಎಂ ಫಾರೂಕ್, ಐವನ್ ಡಿಸೋಜ ಭೇಟಿ ನೀಡಿದ್ದಾರೆ.