ಉಡುಪಿ : ಪ್ರಧಾನ ಮಂತ್ರಿ ಕಾರ್ಯಾಲಯದ ಸಂಸದೀಯ ಪ್ರಧಾನ ಕಾರ್ಯದರ್ಶಿಯ ಸೋಗಿನಲ್ಲಿ ಶ್ರೀಕೃಷ್ಣ ಮಠಕ್ಕೆ ಕರೆ ಮಾಡಿ, ವಿಶೇಷ ದರ್ಶನಗೈದ ವ್ಯಕ್ತಿಯ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಕ್ಟೋಬರ್ 9ರಂದು ಉದಯ್ ಎನ್ನುವಾತ ಶ್ರೀಕೃಷ್ಣ ಮಠದ ಪರ್ಯಾಯ ಪುತ್ತಿಗೆ ಮಠದ ದಿವಾನ ನಾಗರಾಜ್ ಆಚಾರ್ಯ ಅವರಿಗೆ ಕರೆ ಮಾಡಿದ್ದು, ತಾನು ಪ್ರಧಾನಮಂತ್ರಿ ಕಾರ್ಯಾಲಯದ ಸಂಸದೀಯ ಪ್ರಧಾನ ಕಾರ್ಯದರ್ಶಿ ಎಂದು ಪರಿಚಯಿಸಿಕೊಂಡು ನಾವು ಕುಟುಂಬ ಸಮೇತರಾಗಿ ಮಠಕ್ಕೆ ಆಗಮಿಸುತ್ತಿದ್ದು, ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದ್ದರು.
ಅನುಮಾನ ವ್ಯಕ್ತವಾಯಿತು
ಅದರಂತೆ ಅಕ್ಟೋಬರ್ 9ರಂದು ಭಾರತ ಸರಕಾರ ಎಂದು ಬರೆದ ವಾಹನದಲ್ಲಿ ಆಗಮಿಸಿದ ಡಾ|ಉದಯ್ ಹಾಗು ಕುಟುಂಬಸ್ಥರಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿ ಬೆಳಗ್ಗೆ ವಿಶೇಷ ದರ್ಶನ ಮಾಡಿಸಿದ್ದೇವೆ. ಆದರೆ ಅವರ ಚಲನವಲನದಿಂದ ಅನುಮಾನ ವ್ಯಕ್ತವಾಗಿ ಅವರನ್ನು ವಿಚಾರಿಸಿದಾಗ ಸೂಕ್ತ ಉತ್ತರವನ್ನು ನೀಡದೇ ತೆರಳಿದ್ದಾರೆ. ಪ್ರಧಾನ ಮಂತ್ರಿಗಳ ವೆಬ್ಸೈಟ್ ಅನ್ನು ಪರಿಶೀಲಿಸಿದಾಗ ಇವರ ಬಗ್ಗೆ ಸಮರ್ಪಕವಾದ ಮಾಹಿತಿ ದೊರೆತಿಲ್ಲ. ಕೇಂದ್ರ ಸರಕಾರದ ಅಧಿಕಾರಿ ಎಂದು ಸುಳ್ಳು ಹೇಳಿಕೊಂಡು ಶ್ರೀ ಮಠಕ್ಕೆ ಆಗಮಿಸಿ ನಂಬಿಸಿ ಮೋಸ ಮಾಡಿದ್ದಾರೆ ಎಂದು ಮಠದ ಮ್ಯಾನೇಜರ್ ನಂದನ್ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.