ಉಡುಪಿ : ಕಾದಂಬರಿಕಾರ, ಲೇಖಕ ಹಾಗೂ ಚಿಂತಕರಾಗಿದ್ದ ಪ್ರೊ. ಯು.ಆರ್. ಅನಂತಮೂರ್ತಿ ಅವರ ‘ಶೈಕ್ಷಣಿಕ ತತ್ವಜ್ಞಾನ’ದ (ಪಿಲಾಸಫಿ ಆಫ್ ಎಜ್ಯುಕೇಷನ್)ಕುರಿತು ಮಂಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಮಣಿಪಾಲದ ಪ್ರೊ.ವರದೇಶ ಹಿರೇಗಂಗೆ ಅವರಿಗೆ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್(ಮಾಹೆ) ವಿಶ್ವವಿದ್ಯಾಲಯವು ಪಿಎಚ್ಡಿ ಪದವಿ ನೀಡಿ ಗೌರವಿಸಿದೆ.
ಪ್ರಸ್ತುತ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆಂಡ್ ಸೈನ್ಸಸ್ನ (ಜಿಸಿಪಿಎಎಸ್) ಮುಖ್ಯಸ್ಥರಾಗಿರುವ ಪ್ರೊ. ವರದೇಶ್ ಹಿರೇಗಂಗೆ ಇವರು, ಸದ್ಯ ಆಂಧ್ರಪ್ರದೇಶದ ಅಪೋಲೋ ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಡಾ. ಎಚ್. ವಿನೋದ್ ಭಟ್ ಮಾರ್ಗದರ್ಶನದಲ್ಲಿ ಸಂಶೋಧನಾ ಮಹಾಪ್ರಬಂಧವನ್ನು ಮಂಡಿಸಿದ್ದರು.
ಜ್ಞಾನಪೀಠ ಪ್ರಶಸ್ತಿ ಪಡೆದ ಲೇಖಕರಾಗಿರುವ ಪ್ರೊ.ಅನಂತಮೂರ್ತಿ ತಮ್ಮ ವೃತ್ತಿಜೀವನದಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿ ಹಾಗೂ ನಾಲ್ಕು ವರ್ಷ ಕೇರಳದ ಮಹಾತ್ಮಾಗಾಂಧಿ ವಿಶ್ವವಿದ್ಯಾಲಯದ ಕುಲಪತಿಗಳಾಗಿಯೂ ಕಾರ್ಯನಿರ್ವಹಿಸಿದ್ದರು.
ಪ್ರೊ. ಹಿರೇಗಂಗೆ ಅವರು ತನ್ನ ಸಂಶೋಧನಾ ಪ್ರಬಂಧವನ್ನು ಪೌರಾತ್ಯ ಹಾಗೂ ಪಾಶ್ಚಿಮಾತ್ಯ ದೃಷ್ಟಿಕೋನಗಳ ಹಿನ್ನೆಲೆಯೊಂದಿಗೆ ಪ್ರೊ.ಯುಆರ್ಎ ಅವರ ಆತ್ಮಕಥೆ, ಶಿಕ್ಷಣದ ಕುರಿತ ಅವರ ಮಾತು ಮತ್ತು ಲೇಖನಗಳು, ಘಟಿಕೋತ್ಸವ ಭಾಷಣಗಳು, ತರಗತಿಯಲ್ಲಿನ ಅವರ ಉಪನ್ಯಾಸಗಳು ಮತ್ತು ಸಂದರ್ಶನಗಳನ್ನು ಆಧರಿಸಿ ಸಿದ್ಧಪಡಿಸಿದ್ದಾರೆ.