ಉಡುಪಿ : ಶತಮಾನಗಳ ಹಿಂದೆ ಸಮಪಾಲು-ಸಮಬಾಳ್ವೆಗಾಗಿ ಧ್ವನಿ ಎತ್ತಿದ ನಾರಾಯಣ ಗುರುಗಳು ಯಾವುದೇ ರಕ್ತ ಕ್ರಾಂತಿಗಳಿಲ್ಲದೆ ತಮ್ಮ ಮಾತು ಹಾಗೂ ಬದ್ಧತೆಗಳ ಮೂಲಕ ಸಮಾಜದಲ್ಲಿದ್ದ ಮೇಲು-ಕೀಳು ಎಂಬ ಅಂಧಕಾರವನ್ನು ಹೋಗಲಾಡಿಸಿ, ಸಮಾನತೆಗಾಗಿ ಹೋರಾಡಿದ ಮಹಾನ್ ಸಂತ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಮಂಗಳವಾರ ಮಲ್ಪೆಯ ಸರಕಾರಿ ಪದವಿ ಪೂರ್ವ ಕಾಲೇಜಿನ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬಿಲ್ಲವ ಸಮಾಜ ಸೇವಾ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ನಾರಾಯಣ ಗುರುಗಳು ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಧೈಯವಾಕ್ಯವನ್ನು ಹೊಂದಿ ಪ್ರತಿಯೊಬ್ಬರು ಸಮಾನತೆಯಿಂದ ಬದುಕಬೇಕು ಎಂಬ ಉದ್ದೇಶದಿಂದ ಸಮಾನತೆಯ ಪರಿಕಲ್ಪನೆಯನ್ನು ಜನರಲ್ಲಿ ಬಿತ್ತುವುದರೊಂದಿಗೆ ಮಾನವರೆಲ್ಲರೂ ಒಂದೇ ಎಂಬ ತತ್ವವನ್ನು ವಿಶ್ವಕ್ಕೆ ಸಾರಿದರು. ದೇಶದ ಹಿಂದುಳಿದ ವರ್ಗಗಳ ಏಳಿಗೆಯಲ್ಲಿ ಗುರುಗಳ ಪಾತ್ರ ಮಹತ್ವದ್ದಾಗಿದೆ ಎಂದರು.