ಕುಂದಾಪುರ : ಕರ್ತವ್ಯ ಲೋಪದ ಆಧಾರದಲ್ಲಿ ಕುಂದಾಪುರ ಉಪವಿಭಾಗದ ಉಪವಿಭಾಗಾಧಿಕಾರಿಯಾಗಿದ್ದ ಕೆ.ಎ.ಎಸ್. ಕಿರಿಯ ಶ್ರೇಣಿ ಅಧಿಕಾರಿ ಕೆ. ಮಹೇಶ್ಚಂದ್ರ ಅವರನ್ನು ಅಮಾನತುಗೊಳಿಸಲಾಗಿದೆ.
ಉಪವಿಭಾಗಾಧಿಕಾರಿಯವರ ಕರ್ತವ್ಯ ಲೋಪದ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳು ಉಡುಪಿ ಜಿಲ್ಲೆ ಇವರು ಸರ್ಕಾರಕ್ಕೆ ವಿಸ್ತೃತ ವರದಿ ಸಲ್ಲಿಸಿದ್ದು, ಡಿಸಿಯವರ ವರದಿ ಆಧಾರದ ಮೇಲೆ ಸರ್ಕಾರದ ಅಧೀನ ಕಾರ್ಯದರ್ಶಿ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದ್ದಾರೆ.
ಅಲ್ಲದೆ ಮುಂದಿನ ಆದೇಶದವರೆಗೆ ಕುಂದಾಪುರ ಉಪವಿಭಾಗ ಹುದ್ದೆಯ ಪ್ರಭಾರವನ್ನು ಬ್ರಹ್ಮಾವರ ತಹಶೀಲ್ದಾರ್ ಶ್ರೀ ಶ್ರೀಕಾಂತ್ ಹೆಗ್ಡೆ ಅವರಿಗೆ ನಿರ್ವಹಿಸುವಂತೆ ಆದೇಶಿಸಲಾಗಿದೆ.
ಮಾಜಿ ಶಾಸಕರೋರ್ವರ ಸಂಪೂರ್ಣ ಕೃಪೆಯಿಂದ ಸಾಕಷ್ಟು ಕಪ್ಪವನ್ನು ಸಲ್ಲಿಸಿಯೇ ಕುಂದಾಪುರ ಏಸಿ ಹುದ್ದೆಯನ್ನು ಏರಿದ ಇವರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನವು ಹೊಗೆಯಾಡಿತ್ತು. ಆದಾಗ ಕುಂದಾಪುರ ಉಪವಿಭಾಗಾಧಿಕಾರಿಯಾಗಿ ಸಾರ್ವಜನಿಕರ ಮೆಚ್ಚುಗೆ ಗಳಿಸಿದ ರಶ್ಮಿ ಅವರ ದಿಡೀರ್ ವರ್ಗಾವಣೆಯು ಕೂಡಾ ಕಾರಣವಾಗಿತ್ತು. ಇಲ್ಲಿ ಉಪವಿಭಾಗಾಧಿಕಾರಿ ಅಧಿಕಾರ ವಹಿಸಿಕೊಂಡ ಕೂಡಲೇ ಪಟ್ಟಾಗಿ ಭೋಜನಕ್ಕೆ ಕುಂತ ಏಸಿ ಮಹೇಶ್ಚಂದ್ರ ಅವರ ಮೇಲೆ ಸಾಕಷ್ಟು ಭ್ರಷ್ಟಾಚಾರದ ಆರೋಪಗಳು ಸದ್ದು ಮಾಡಿದ್ದವು. ಇನ್ನೇನು ನಿವೃತ್ತಿ ಹೊಂದಲು ಬೆರಳೆಣಿಕೆಯಷ್ಟು ತಿಂಗಳುಗಳ ಕಾಲ ಬಾಕಿ ಇರುವಾಗಲೇ ಮಹೇಶ್ ಚಂದ್ರ ಸಸ್ಪೆಂಡ್ ಆಗಿದ್ದಾರೆ.