ಉಡುಪಿ : ಜಿಲ್ಲೆಯಲ್ಲಿ ಸದ್ಯ 196 ಬಿಎಸ್ಎನ್ಎಲ್ ಟವರ್ಗಳು ಕಾರ್ಯ ನಿರ್ವಹಿಸುತ್ತಿದ್ದು 41ಟವರ್ಗಳಿಗೆ 4ಜಿ ಸಂಪರ್ಕ ನೀಡಲಾಗಿದೆ. 180 ಹೊಸ ಟವರ್ಗಳ ನಿರ್ಮಾಣಕ್ಕೆ ಈಗಾಗಲೇ ಬೇಡಿಕೆ ಇದ್ದು, 30ಕ್ಕೆ ಅನುಮೋದನೆ ಸಿಕ್ಕಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನೆಟ್ವರ್ಕ್ ಹಾಗೂ ಟವರ್ ಸಮಸ್ಯೆಗಳ ಕುರಿತಂತೆ ಬಿಎಸ್ಎನ್ಎಲ್ ಅಧಿಕಾರಿಗಳೊಂದಿಗೆ ಚರ್ಚಿಸಲು ಕರೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಮಂಜೂರಾದ ಟವರ್ಗಳ ನಿರ್ಮಾಣವನ್ನು ತ್ವರಿತವಾಗಿ ಮಾಡಬೇಕು ಎಂದ ಅವರು, ಹಾಲಿ ಚಾಲ್ತಿಯಲ್ಲಿರುವ 196 ಟವರ್ಗಳ ಪೈಕಿ 75 ಟವರ್ಗಳಲ್ಲಿ ಬ್ಯಾಟರಿ ಸಮಸ್ಯೆಗಳಿವೆ. ಇವುಗಳಿಗೆ ಬ್ಯಾಟರಿಗಳ ಅಳವಡಿಕೆಯನ್ನು ಆದ್ಯತೆಯ ಮೇಲೆ ಮಾಡಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶ ವ್ಯಾಪ್ತಿಗಳಲ್ಲಿರುವ ಬಿಎಸ್ಎನ್ಎಲ್ ಟವರ್ಗಳ ನಿರ್ವಹಣೆಯನ್ನು ವ್ಯವಸ್ಥಿತವಾಗಿ ಮಾಡಿ ಸಾರ್ವಜನಿಕರಿಗೆ ಉತ್ತಮ ರೀತಿಯಲ್ಲಿ ಸೇವೆ ನೀಡಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದರು.
ಗ್ರಾಮೀಣ ಭಾಗಗಳಲ್ಲಿ ಟವರ್ಗಳ ಸೇವೆ ಲಭ್ಯತೆ ಇದ್ದರೂ ಪೂರ್ಣ ಪ್ರಮಾಣದಲ್ಲಿ ಅವುಗಳ ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲವೆಂದು ಸಾರ್ವಜನಿಕ ದೂರುಗಳು ಕೇಳಿ ಬರುತ್ತಿವೆ. ಗ್ರಾಮೀಣ ಭಾಗದಲ್ಲಿರುವ ಬಿಎಸ್ಎನ್ಎಲ್ ಟವರ್ಗಳ ನಿರ್ವಹಣೆಯನ್ನು ವ್ಯವಸ್ಥಿತವಾಗಿ ಮಾಡುವು ದರೊಂದಿಗೆ ಈಗಿರುವ ನೆಟ್ವರ್ಕ್ ಸಮಸ್ಯೆ ಬಗೆಹರಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.