ಉಡುಪಿ : ಶಿವಾನಂದ ಶೆಟ್ಟಿ ಮತ್ತು ಸುಜಾತ ಶೆಟ್ಟಿ ಹೆಬ್ರಿ ಇವರ ಪುತ್ರಿ, ವಿದ್ಯೋದಯ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆ ಉಡುಪಿ ಇದರ ಏಳನೇ ತರಗತಿ ವಿಧ್ಯಾರ್ಥಿನಿ ಹಾಗೂ ರಾಷ್ಟ್ರ ಮತ್ತು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಗಳಿಸಿದ, ಬಹುಮುಖ ಪ್ರತಿಭೆಯ ಕುಮಾರಿ ಶಿವಾನಿ ಶೆಟ್ಟಿ ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಎಸ್ಜಿಎಸ್ ಅಂತರ್ ರಾಷ್ಟ್ರೀಯ ಯೋಗ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಜರುಗಿದ ಅಂತರ್ ರಾಜ್ಯ ಯೋಗಾಸನ ಸ್ಪರ್ಧೆಯಲ್ಲಿ ಉತ್ಕೃಷ್ಟ ಪ್ರದರ್ಶನ ನೀಡಿ ಅಂತರ್ ರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ಆಯ್ಕೆ ಆಗಿದ್ದಾಳೆ. ಇವಳಿಗೆ ಯೋಗ ತರಬೇತಿಯನ್ನು ಕೆ. ನರೇಂದ್ರ ಕಾಮತ್ ಕಾರ್ಕಳ ಇವರು ನೀಡಿದ್ದಾರೆ.
National Level
ಸ.ಪ್ರೌ.ಶಾಲೆ ಮೂಡುಮಾರ್ನಾಡು ಇಲ್ಲಿನ ವಿದ್ಯಾರ್ಥಿ ಸುಮಂತ್ ಎಸ್ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ
ಮೂಡುಬಿದಿರೆ : ತಾಲೂಕಿನ ಮೂಡುಮಾರ್ನಾಡು ಸರಕಾರಿ ಫ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಸುಮಂತ್ ಎಸ್ ಆಂಧ್ರ ಪ್ರದೇಶದ ಗುಂಟೂರಿನ ಆಚಾರ್ಯ ನಾಗಾರ್ಜುನ ವಿವಿಯಲ್ಲಿ ನಡೆದ ದಕ್ಷಿಣ ಭಾರತ ವಲಯ ಚಾಂಪಿಯನ್ಶಿಪ್ನಲ್ಲಿ 600ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ಹಿಂದೆ ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಗಳಿಸಿದ್ದರು. ಬೆಂಗಳೂರಿನ ಹೆಚ್ಸಿಎಲ್ ಫೌಂಡೇಶನ್ ಈ ಕ್ರೀಡಾಕೂಟಗಳನ್ನು ಆಯೋಜಿಸಿತ್ತು.
ಸುಮಂತ್ ಎಸ್. ಅವರು ಕೆಲ್ಲಪುತ್ತಿಗೆಯ ಶೇಖರ ಪೂಜಾರಿ ಮತ್ತು ಮೋಹಿನಿಯವರ ಪುತ್ರರಾಗಿದ್ದಾರೆ
ಮೂಡುಮಾರ್ನಾಡು ಶಾಲೆಯ ವಿದ್ಯಾರ್ಥಿಯ ಈ ಸಾಧನೆಗೆ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಭಾಸ್ಕರ ಎಸ್. ಕೋಟ್ಯಾನ್ ಮತ್ತು ಸಮಿತಿಯ ಸದಸ್ಯರು, ಶಾಲಾ ಮುಖ್ಯೋಪಾಧ್ಯಾಯಿನಿ ಡಾ. ರಾಜಶ್ರೀ ಹಾಗೂ ಅಧ್ಯಾಪಕ ವೃಂದ ಅಭಿನಂದಿಸಿದ್ದಾರೆ.
ಕುಂದಾಪುರ : ಜುಲೈ 23ರಿಂದ 25ರ ತನಕ ತಮಿಳುನಾಡಿನ ಚೆನ್ನೈಯಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಆಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿನ ವಿದ್ಯಾರ್ಥಿ ನಿತೇಶ್ ಜೆ ಭಾಗವಹಿಸಲಿದ್ದಾನೆ.
ನಿತೇಶ್ ಜೆ ಶಾಲಾ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ಎಚ್.ಸಿ.ಎಲ್. ಫೌಂಡೇಶನ್ ವತಿಯಿಂದ ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದ ದಕ್ಷಿಣ ಭಾರತ ರಾಜ್ಯಗಳ ಕ್ರೀಡಾಕೂಟದಲ್ಲಿ ಟ್ರಯಥ್ಲಾನ್ (60 ಮೀಟರ್ ಓಟ, ಉದ್ದ ಜಿಗಿತ, ಬಾಲ್ ಥ್ರೋ) ವಿಭಾಗದಲ್ಲಿ ವಿಜೇತರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಈತ ಜನಾರ್ದನ ಪೂಜಾರಿ ಮತ್ತು ಸಿಂಗಾರಿ ಗುಂಡೂರು ಇವರ ಪುತ್ರ. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ವೀರೇಂದ್ರ ಜೋಗಿ ತರಬೇತಿ ನೀಡುತ್ತಿದ್ದಾರೆ.