ಮಂಗಳೂರು : ನಗರದ ನಂತೂರು ಪದವು – ಜಂಕ್ಷನ್ ನಡುವಿನ ಎನ್ಎಚ್66ನಲ್ಲಿ ಟ್ಯಾಂಕರ್ ಹರಿದು ಸ್ಕೂಟರಿನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಮಂಗಳೂರು ನಗರದ ಅಡ್ಯಾರು ಕಣ್ಣಗುಡ್ಡೆ ನಿವಾಸಿ ಶಿವಾನಂದ ಶೆಟ್ಟಿ(42) ಮೃತಪಟ್ಟವರು.
ಶಿವಾನಂದ ಶೆಟ್ಟಿ ಅಡ್ಯಾರ್ ಕಣ್ಣೂರಿನಲ್ಲಿ ವಾಚ್ಗಳ ಬಿಡಿ ಭಾಗಗಳ ಫ್ಯಾಕ್ಟರಿಯಲ್ಲಿ ಉದ್ಯೋಗಿಯಾಗಿದ್ದರು. ಇವರು ಕಾರ್ಯ ನಿಮಿತ್ತ ನಂತೂರು ವೃತ್ತದ ಮೂಲಕ ಕದ್ರಿ ಪದವು ಕಡೆಗೆ ಸ್ಕೂಟರಿನಲ್ಲಿ ಆಗಮಿಸುತ್ತಿದ್ದರು. ಈ ವೇಳೆ ಹಿಂಭಾಗದಿಂದ ಬರುತ್ತಿದ್ದ ಟ್ಯಾಂಕರ್ ಲಾರಿ ಇವರ ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟರ್ ಸವಾರ ಶಿವಾನಂದ ಶೆಟ್ಟಿ ರಸ್ತೆಗೆಸೆಯಲ್ಪಟ್ಟಿದ್ದಾರೆ. ಆದರೆ ಟ್ಯಾಂಕರ್ ನಿಲ್ಲದೆ ಚಕ್ರ ಅವರ ತಲೆಯ ಮೇಲೆಯೇ ಹರಿದ ಪರಿಣಾಮ ಶಿವಾನಂದ ಶೆಟ್ಟಿಯವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ.
ಕದ್ರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಟ್ಯಾಂಕರ್ ಹಾಗೂ ಚಾಲಕನನ್ನು ವಶಪಡಿಸಿಕೊಂಡಿದ್ದಾರೆ. ಸ್ಕೂಟರ್ ಸ್ಕಿಡ್ ಆಗಿ ಬೀಳಲು ರಸ್ತೆ ಗುಂಡಿ ಕಾರಣವೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆ ಸ್ಥಳದಲ್ಲಿ ಅಂಥಹ ಗುಂಡಿ ಇರಲಿಲ್ಲ ಎಂದು ಸ್ಥಳದಲ್ಲಿದ್ದ ಪೊಲೀಸರು ತಿಳಿಸಿದ್ದಾರೆ.


