ಉಡುಪಿ : ಸುಶ್ಮಿತಾ ಆಚಾರ್ಯ ಅವರು ಈ ವರ್ಷದ ಮಿಸ್ ಕೋಸ್ಟಲ್ – 2024 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಉಡುಪಿಯಲ್ಲಿ ಇತ್ತೀಚೆಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರತಿಭಾವಂತೆಯಾಗಿರುವ ಸುಶ್ಮಿತಾ ಆಚಾರ್ಯ, ಭರತನಾಟ್ಯ ಕಲಾವಿದೆಯೂ ಆಗಿದ್ದಾರೆ. ಈ ಮೊದಲು ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಸದ್ಯ ಸಾಫ್ಟ್ವೇರ್ ಇಂಜಿನಿಯರ್ ಆಗಿ ವೃತ್ತಿ ಮಾಡುತ್ತಿದ್ದಾರೆ. ‘ಸುಜಾಸ್’ನ ಜಯಲಕ್ಷ್ಮೀ ಇವರಿಗೆ ಮಾರ್ಗದರ್ಶನ ಮಾಡಿದ್ದರು. ಇವರು ಮುಲ್ಕಿಯ ಕೆ.ಸತೀಶ್ ಆಚಾರ್ಯ, ಸ್ವಾತಿ ಆಚಾರ್ಯ ದಂಪತಿ ಪುತ್ರಿ.
Mulki
ಹೋಟೆಲ್, ವಸತಿ ಸಂಕೀರ್ಣಗಳ ತ್ಯಾಜ್ಯ ನೀರು ವಿಲೇವಾರಿಗೆ ಶಾಶ್ವತ ಘನ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಒತ್ತಾಯ
ಮುಲ್ಕಿ : ಕಿನ್ನಿಗೋಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಬಹು ಮಹಡಿ ಕಟ್ಟಡ, ಮನೆ, ವಾಣಿಜ್ಯ ವಸತಿ ಸಮುಚ್ಚಯದ ತ್ಯಾಜ್ಯ ನೀರನ್ನು ದ್ರವ ತ್ಯಾಜ್ಯ ಘಟಕಕ್ಕೆ ಅನಧಿಕೃತವಾಗಿ ಬಿಡುತ್ತಿರುವುದರಿದ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಿತ್ತುಲ್ ಪರಿಸರದಲ್ಲಿ ತ್ಯಾಜ್ಯ ನೀರು ಸರಿಯಾಗಿ ಹರಿದು ಹೋಗದೆ ಸ್ಥಳೀಯ ನಿವಾಸಿಗಳಿಗೆ ತೀವ್ರ ತೊಂದರೆಯಾಗುತ್ತಿದ್ದು ಶಾಶ್ವತ ವ್ಯವಸ್ಥೆ ಕಲ್ಪಿಸಲು ಶಾಸಕ ಉಮಾನಾಥ ಕೋಟ್ಯಾನ್ ನೇತೃತ್ವದಲ್ಲಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ವಾಣಿಜ್ಯ ವಸತಿ ಸಮುಚ್ಚಯ, ಹೋಟೆಲ್ ಮಾಲೀಕರ, ಸಾರ್ವಜನಿಕರ ಸಭೆ ನಡೆಯಿತು. ಸಭೆಯಲ್ಲಿ ಉದ್ಯಮಿ ಪ್ರಮೋದ್ ಕುಮಾರ್ ಮಾತನಾಡಿ ಹೋಟೆಲ್, ವಸತಿ ಸಂಕೀರ್ಣಗಳ ತ್ಯಾಜ್ಯ ನೀರು ಸರಿಯಾದ ರೀತಿಯಲ್ಲಿ ಹರಿದು ಹೋಗಲು ಶಾಶ್ವತ ವ್ಯವಸ್ಥೆ ಕಲ್ಪಿಸಲು ಒತ್ತಾಯಿಸಿದರು.
ಸಾಮಾಜಿಕ ಕಾರ್ಯಕರ್ತ ಸ್ಟ್ಯಾನಿ ಪಿಂಟೋ ಮಾತನಾಡಿ ಹಿಂದಿನ ಕಿನ್ನಿಗೋಳಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿರ್ಲಕ್ಷದಿಂದ ತ್ಯಾಜ್ಯ ಬಿಡುವ ಅವೈಜ್ಞಾನಿಕ ಕಾಮಗಾರಿ ನಡೆದಿದ್ದು ಈಗಲೂ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಇದೇ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ಇಲ್ಲಿನ ಅಧಿಕಾರಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ, ಇದರಿಂದ ಅಭಿವೃದ್ಧಿಗೆ ತೀವ್ರ ಹಿನ್ನಡೆಯಾಗಿದೆ, ಅಭಿವೃದ್ಧಿ ಬಗ್ಗೆ ಮಾತನಾಡಿದರೆ ನಮ್ಮ ಮೇಲೆ ಕೇಸ್ ಹಾಕುವ ಬೆದರಿಕೆ ಒಡ್ಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತ್ಯಾಜ್ಯ ನಿರ್ವಹಣೆ ಅವ್ಯವಸ್ಥೆಯಿಂದ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಿತುಲ್ ಪರಿಸರದ ಜನ ಹೈರಾಣಾಗಿದ್ದಾರೆ ಇದಕ್ಕೆ ಪೂರ್ಣ ಪ್ರಮಾಣದ ಪರಿಹಾರ ಬೇಕು ಎಂದು ಒತ್ತಾಯಿಸಿದರು.
ಸ್ಥಳೀಯರಾದ ಐವನ್ ಮಾತನಾಡಿ ತ್ಯಾಜ್ಯ ನೀರು ಬಿಡುವ ಪ್ಲಾಂಟ್ ಶುರುವಾಗುವ ಮೊದಲೇ ನಾವು ಆಕ್ಷೇಪ ವ್ಯಕ್ತಪಡಿಸಿದ್ದೇವೆ. ಆದರೂ ಹಿಂದಿನ ಪಂಚಾಯತ್ ಆಡಳಿತ ಕ್ಯಾರೇ ಎನ್ನದೆ ಅರ್ಧಂಬರ್ಧ ಕಾಮಗಾರಿ ನಡೆಸಿ ಈಗ ಜನಸಾಮಾನ್ಯರಿಗೆ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು
ಮಾಜೀ ಜಿ.ಪಂ. ಉಪಾಧ್ಯಕ್ಷೆ ಶಾಲೆಟ್ ಪಿಂಟೋ ಮಾತನಾಡಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ನಲ್ಲಿ ಚುನಾಯಿತ ಸದಸ್ಯರು ಇಲ್ಲದೆ ಆಡಳಿತಾಧಿಕಾರಿಗಳು ತಮ್ಮದೇ ಆಟ ಆಡುತ್ತಿದ್ದು ಅವ್ಯವಸ್ಥೆಗಳ ಬಗ್ಗೆ ಶಾಸಕರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ ಮಾತನಾಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ವಾಹನ ಪ್ರತೀ ಮನೆಗೆ ಹೋಗದಿದ್ದರೂ ಮನೆಯವರಿಂದ ತ್ಯಾಜ್ಯ ವಿಲೇವಾರಿ ಹಣ ವಸೂಲು ಮಾಡಲಾಗುತ್ತಿದೆ ಇದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಶಾಸಕ ಉಮಾನಾಥ ಕೋಟ್ಯಾನ್ ನಾಗರಿಕರನ್ನು ಸಮಾಧಾನಪಡಿಸಿ ಮಾತನಾಡಿ ತ್ಯಾಜ್ಯ ನೀರಿನ ಘಟಕದಲ್ಲಿರುವ ಅನಧಿಕೃತ ಕನೆಕ್ಷನ್ ಕೂಡಲೇ ತೆಗೆಯಬೇಕು, ದ್ರವ ತ್ಯಾಜ್ಯ ಮಾತ್ರ ಬಿಡಬೇಕು, ನಾಗರಿಕರ ಹಾಗೂ ಹೋಟೆಲ್ ವಸತಿ ಸಮುಚ್ಚಯ ಮಾಲಕರ ಸಮಿತಿ ರಚನೆ ಮಾಡಿ ಘಟಕವನ್ನು ಶುದ್ಧೀಕರಣ ಗೊಳಿಸಬೇಕು ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯತ್ ಮೂಲಕ ಜಾಗ ಗುರುತಿಸಿ 10 ಕೋಟಿ ವೆಚ್ಚದಲ್ಲಿ ನೂತನ ಘನತ್ಯಾಜ್ಯ ಘಟಕ ನಿರ್ಮಾಣ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನಾಗರಾಜ್, ಜೂನಿಯರ್ ಇಂಜಿನಿಯರ್ ನಾಗರಾಜ್ ಎಚ್ ಉಪಸ್ಥಿತರಿದ್ದರು.