ಉಡುಪಿ : ಸಂವಿಧಾನ ಕುರಿತು ಪೇಜಾವರ ಶ್ರೀಗಳು ನೀಡಿದ್ದಾರೆ ಎನ್ನಲಾದ ಹೇಳಿಕೆ ರಾಜ್ಯದಲ್ಲಿ ತೀವ್ರ ಸಂಚಲನ ಉಂಟು ಮಾಡಿದೆ. ಇದಕ್ಕೆ ತೀವ್ರ ವಿರೋಧಗಳೂ ವ್ತಕ್ತವಾಗುತ್ತಿವೆ. ಈ ಕುರಿತು ಮೌನ ಮುರಿದಿರುವ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು, ಸಂವಿಧಾನ ಬದಲಿಸಬೇಕು ಎನ್ನುವ ಮಾತನ್ನು ನಾನು ಆಡಿಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಂತ ಸಮಾವೇಶ ನಡೆದಿತ್ತು. ಸಂತರು ಸೇರಿ ಲಿಖಿತ ರೂಪದ ನಿರ್ಣಯ ಕೈಗೊಂಡಿದ್ದೆವು. ರಾಜ್ಯಪಾಲರಿಗೆ ಕೊಟ್ಟ ಪ್ರತಿಯಲ್ಲಿ ಸಂವಿಧಾನ ಕುರಿತ ಯಾವುದೇ ಮಾತು ಉಲ್ಲೇಖ ಇರಲಿಲ್ಲ ಎಂದು ಹೇಳಿದ್ದಾರೆ.
ಆಡದೆ ಇರುವ ಮಾತಿಗೆ ಸಮಾಜದಲ್ಲಿ ಜನ ದಂಗೆ ಎದ್ದ ರೀತಿ ವರ್ತಿಸುತ್ತಿದ್ದಾರೆ. ಸುಳ್ಳು ಆರೋಪ ಹೊರಿಸಿ ಹೇಳಿಕೆ ನೀಡುತ್ತಿದ್ದಾರೆ.
ನಮ್ಮನ್ನು ಪ್ರತಿಭಟಿಸುವ ಮತ್ತು ಖಂಡಿಸುವ ಕೆಲಸವಾಗುತ್ತಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳ ಹೇಳಿಕೆಯಿಂದ ಇಷ್ಟೆಲ್ಲ ಆಗಿದೆ. ನಿರಾಧಾರ ಆರೋಪ ಯುಕ್ತವಲ್ಲ. ಈ ಕುರಿತ ವಿಡಿಯೋ ಕ್ಲಿಪ್ಪಿಂಗ್ ಹಾಗೂ ಲಿಖಿತ ರೂಪದ ಪತ್ರವನ್ನು ಪರಿಶೀಲಿಸಬಹುದು.
ಸಿಎಂ ಸಿದ್ದರಾಮಯ್ಯ ಈ ಕುರಿತು ಪರಿಶೀಲಿಸಿ ಮಾತನಾಡಬೇಕಿತ್ತು ಎಂದಿರುವ ಶ್ರೀಗಳು, ವರದಿಗಾರರಿಗೆ ನಾನು ಆಡದೆ ಇರುವ ಮಾತು ಎಲ್ಲಿ ಸಿಕ್ಕಿತೋ ಗೊತ್ತಿಲ್ಲ. ಸಮಾಜ ಒಡೆಯುವ ಮತ್ತು ಕಲಹ ಸೃಷ್ಟಿಸುವ ಕೆಲಸ ಯಾರೂ ಮಾಡಬಾರದು. ನಾನು ಪ್ರತಿ ಚುನಾವಣೆಯಲ್ಲೂ ಮತದಾನ ಮಾಡುತ್ತೇನೆ. ನಾನು ಈವರೆಗೆ ಯಾವುದೇ ಸಂವಿಧಾನ ವಿರೋಧಿ ಕೃತ್ಯ ಮಾಡಿಲ್ಲ, ಸಮಾಜದ ಎಲ್ಲಾ ವರ್ಗದ ಜೊತೆ ಪ್ರೀತಿ ಸಹಬಾಳ್ವೆಯಿಂದ ಇದ್ದೇನೆ ಎಂದು ಹೇಳಿದ್ದಾರೆ.
ನನ್ನನ್ನು ಯಾಕೆ ಟಾರ್ಗೆಟ್ ಮಾಡುತ್ತಾರೋ ಗೊತ್ತಿಲ್ಲ. ನನ್ನನ್ನು ಹಣಿದರೆ ಹಿಂದೂ ಸಮಾಜಕ್ಕೆ ಮುಖವಾಣಿ ಇಲ್ಲ ಎಂದು ಅವರು ಅಂದುಕೊಂಡಿರಬಹುದು, ಆದರೆ ಹಿಂದೂ ಸಮಾಜಕ್ಕೆ ಹಲವು ಮುಖಗಳಿವೆ. ಹಿಂದೂ ಸಮಾಜವನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ. ಆಡಿದ ಮಾತಿಗೆ ವಿರೋಧಿಸಿ ಆಡದೇ ಇರುವ ಮಾತಿಗೆ ವಿರೋಧ ಯಾಕೆ? ನಾನು ಕಾನೂನು ಹೋರಾಟ ಮಾಡಬಹುದು. ಆದರೆ ಕಾನೂನು ಹೋರಾಟದ ಹೊರತಾಗಿ ನನಗೆ ಮಾಡಲು ಬೇರೆ ಸಾಕಷ್ಟು ಕೆಲಸಗಳಿವೆ, ದೇವರೇ ಎಲ್ಲರಿಗೂ ಒಳ್ಳೆಯ ಬುದ್ದಿ ಕೊಡಲಿ ಎಂದು ಹೇಳಿದ್ದಾರೆ.
“ನಮಗೆ ಬೇಕಿರುವ ಸಂವಿಧಾನ ಬರಬೇಕು” ಎಂದು ಶ್ರೀಗಳು ಹೇಳಿದ್ದಾರೆ ಎಂದು ಮಾಧ್ಯಮಗಳಲ್ಲಿ ಇತ್ತೀಚೆಗೆ ವರದಿಯಾಗಿತ್ತು. ಇದಕ್ಕೆ ತೀವ್ರ ವಿರೋಧಗಳು ವ್ಯಕ್ತವಾಗಿದ್ದವು.