ಉಡುಪಿ : ಬಾಂಗ್ಲಾದೇಶದಲ್ಲಿ ಕೆಲವು ದಿನಗಳಿಂದ ಹಿಂದೂ ಶ್ರದ್ಧಾ ಕೇಂದ್ರಗಳ ದ್ವಂಸ, ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸಾಚಾರ, ಕೊಲೆ, ದೌರ್ಜನ್ಯಗಳ ವಿರುದ್ಧ ತಕ್ಷಣ ಮಧ್ಯ ಪ್ರವೇಶ ಮಾಡುವಂತೆ ಸನಾತನ ಹಿಂದೂ ಧರ್ಮರಕ್ಷಣಾ ವೇದಿಕೆ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರಿಗೆ ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.
ಬಾಂಗ್ಲಾದೇಶದಲ್ಲಿ ಕೆಲವು ದಿನಗಳಿಂದ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಜೊತೆಗೆ ಹಿಂದೂ ದೇವಾಲಯಗಳ ಮೇಲೆ ನಡೆಯುತ್ತಿರುವ ದಾಳಿಯನ್ನು ತಡೆಗಟ್ಟುವ ಸಲುವಾಗಿ ಕೇಂದ್ರ ಸರ್ಕಾರವು ಆದಷ್ಟು ಬೇಗ ಮಧ್ಯಪ್ರವೇಶಿಸಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ಹಾಗೆಯೇ ಪೌರತ್ವ ಕಾಯ್ದೆಯಲ್ಲಿ ಮಾಡಿದ ತಿದ್ದುಪಡಿಯಂತೆ ಅಲ್ಪ ಸಂಖ್ಯಾತ ಹಾಗೂ ಅಸಹಾಯಕ ಬಾಂಗ್ಲಾ ದೇಶದ ಹಿಂದೂಗಳನ್ನು ಆದಷ್ಟು ಶೀಘ್ರ ಭಾರತಕ್ಕೆ ಕರೆತಂದು ಅವರಿಗೆ ಪುನರ್ವಸತಿ ಕಲ್ಪಿಸಬೇಕು. ಈ ದೇಶದ ಪೌರತ್ವವನ್ನು ನೀಡಲು ತಕ್ಷಣ ಕ್ರಮ ಕೈಗೊಳ್ಳಬೇಕು, ಇದಕ್ಕೆ ಸಂಬಂಧಿಸಿದಂತೆ ದೇಶಕ್ಕೆ ನಿರಂತರ ಅಕ್ರಮವಾಗಿ ನುಸುಳುತ್ತಿರುವ ರೋಹಿಂಗ್ಯ ಮುಸ್ಲಿಮರನ್ನು ತಡೆಯಬೇಕು ಎಂದು ಹಿಂದೂ ಸಂಘಟನೆ ಮನವಿಯಲ್ಲಿ ತಿಳಿಸಿದೆ.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಮೋಹನ್ ಭಟ್, ಜಿತೇಶ್ ಉಡುಪಿ, ಶ್ರೀಧರ್ ಬಿಜೂರು ಬೈಂದೂರು ಮತ್ತಿತರರಿದ್ದರು.