ಮಂಗಳೂರು : ಹಲವಾರು ವರ್ಷಗಳ ಹಿಂದೆಯೇ ತಮ್ಮ ಮನೆ ಬಿಟ್ಟು ಮಾನಸಿಕ ಅಸ್ವಸ್ಥರಾಗಿ ಬಳಿಕ ಪುನರ್ವಸತಿ ಕೇಂದ್ರದವರಿಂದ ರಕ್ಷಿಸಲ್ಪಟ್ಟಿರುವ 36 ಮಂದಿ ತಮ್ಮ ಮನೆ ತಲುಪಲು ಆಧಾರ್ ನೆರವಾಗಿದೆ.
ಮಂಜೇಶ್ವರದಲ್ಲಿರುವ ಸ್ನೇಹಾಲಯ ಮಾನಸಿಕ ಸಾಮಾಜಿಕ ಪುನರ್ವಸತಿ ಕೇಂದ್ರದಲ್ಲಿ 350 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಅವರ ವಿಳಾಸ ತಿಳಿದಿರಲಿಲ್ಲ. ಇತ್ತೀಚೆಗೆ ಸ್ನೇಹಾಲಯ ಮತ್ತು ಮಂಗಳೂರಿನ ಆಧಾರ್ ಸೇವಾ ಕೇಂದ್ರದ ಜಂಟಿ ಸಹಯೋಗದಲ್ಲಿ ಸ್ನೇಹಾಲಯದಲ್ಲಿ ಆಧಾರ್ ಶಿಬಿರ ಏರ್ಪಡಿಸಲಾಗಿತ್ತು. ಆ ವೇಳೆ ಬೆರಳಚ್ಚು ಪರಿಶೀಲಿಸುವಾಗ 36 ಮಂದಿ ಈ ಹಿಂದೆ ಆಧಾರ್ ಕಾರ್ಡ್ ಮಾಡಿರುವುದು ಪತ್ತೆಯಾಗಿದೆ. ಆ ಮೂಲಕ ವಿಳಾಸ ಪತ್ತೆ ಹಚ್ಚಿ ಮನೆಯವರನ್ನು ಸಂಪರ್ಕಿಸಲಾಗಿದ್ದು, ಎಲ್ಲರನ್ನೂ ಅವರವರ ಮನೆಗಳಿಗೆ ತಲುಪಿಸಲಾಗಿದೆ. ಇದೇ ರೀತಿ ಆಧಾರ್ನಿಂದಾಗಿ ಇತ್ತೀಚೆಗೆ ಸ್ನೇಹಾಲಯದಿಂದ ಬಳ್ಳಾರಿಯ ಓರ್ವ ವ್ಯಕ್ತಿ ಮನೆ ಸೇರಿದ್ದಾರೆ.
ಗಾಂಜಾ ಸೇವಿಸಿ ಮಾನಸಿಕ ಅಸ್ವಸ್ಥನಾಗಿದ್ದ!
ಬಿಹಾರದ ಮಂಟು ಸಿಂಗ್ ಎಂಬಾತ 2020ರಲ್ಲಿ ಫರಂಗಿಪೇಟೆ ಬಳಿ ಬಸ್ ನಿಲ್ದಾಣದಲ್ಲಿ ಮಲಗಿದ್ದಾಗ ಅತನನ್ನು ರಕ್ಷಿಸಿ ಸ್ನೇಹಾಲಯಕ್ಕೆ ದಾಖಲಿಸಲಾಗಿತ್ತು. ಆತ ಕಿವುಡ ಮತ್ತು ಮೂಕನಾಗಿದ್ದ. ಆತನ ಹೆಸರು ಕೂಡ ತಿಳಿದಿರಲಿಲ್ಲ. ಇತ್ತೀಚೆಗೆ ಆಧಾರ್ ಶಿಬಿರ ನಡೆಸುವಾಗ ಆತನ ವಿಳಾಸ ಪತ್ತೆಯಾಗಿತ್ತು. ಆತ ಬಿಹಾರದ ಸಿಮಾರಿಯಾದವನಾಗಿದ್ದು, ಕೃಷಿಕರ ಮನೆಯವನಾಗಿದ್ದ. ಜೆಸಿಬಿ ಚಾಲಕನಾಗಿಯೂ ಕೆಲಸ ಮಾಡುತ್ತಿದ್ದ. ಗಾಂಜಾ ಸೇವನೆ ಪರಿಣಾಮವಾಗಿ ಮಾನಸಿಕವಾಗಿ ಅಸ್ವಸ್ಥನಾಗಿ ಒಂದು ದಿನ ಮನೆಯಿಂದ ನಾಪತ್ತೆಯಾಗಿದ್ದ ಎಂಬುದು ಗೊತ್ತಾಗಿದೆ. ಆತ ಈಗ ಗುಣಮುಖನಾಗಿದ್ದು, ಶನಿವಾರ ಆತನ ಕುಟುಂಬಸ್ಥರ ಜತೆ ಆತನ ಮನೆಗೆ ಕಳುಹಿಸಿಕೊಡಲಾಗಿದೆ.



