ಉಡುಪಿ : ಆದರ್ಶ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ ಕಾರ್ಯಕ್ರಮ ಭಾನುವಾರ ನಡೆಯಿತು. ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ವೈದ್ಯರು ದೇವರಿಗೆ ಸಮಾನ ಎಂಬ ಭಾವನೆ ಸಮಾಜದಲ್ಲಿದೆ. ಜೀವ ಉಳಿಸುವ ವೈದ್ಯರು ಹಾಗೂ ಜೀವನ ರೂಪಿಸುವ ಶಿಕ್ಷಕರು ಹೆಚ್ಚಿನ ಗೌರವಕ್ಕೆ ಪಾತ್ರರಾಗಿದ್ದಾರೆ. ವ್ಯಕ್ತಿಯ ಸೇವೆಯನ್ನು ಸಮಾಜ ಗುರುತಿಸಿದಾಗ ಸಮಾಜಕ್ಕೆ ಪ್ರೇರಣೆಯಾಗುತ್ತದೆ. ವೈದ್ಯರನ್ನು ಸನ್ಮಾನಿಸುವ ಮೂಲಕ ಮುಂದಿನ ದಿನಗಳಲ್ಲಿ ಈ ವೃತ್ತಿಗೆ ಬರುವವರಿಗೆ ಮಾದರಿ ವ್ಯಕ್ತಿತ್ವ ಪರಿಚಯಿಸಿದಂತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕಾಪು ಪ್ರಶಾಂತ್ ಅಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪ್ರಶಾಂತ್ ಕುಮಾರ್ ಶೆಟ್ಟಿ, ಮಲ್ಪೆಯ ದೇವ್ ಕ್ಲಿನಿಕ್ನ ಡಾ. ರಾಮಚಂದ್ರ ದೇವಾಡಿಗ, ಬ್ರಹ್ಮಾವರದ ಡಾ. ಪ್ರವೀಣ್ ಕುಮಾರ್ ಶೆಟ್ಟಿ, ಕಾರ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಯ ರೇಡಿಯಾಲಾಜಿಸ್ಟ್ ಡಾ. ಅನಿತಾ ಎಸ್. ಪ್ರಭು ಹಾಗೂ ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆಯ ಹೆರಿಗೆ ಮತ್ತು ಸ್ತ್ರೀ ರೋಗ ತಜ್ಞ ಡಾ. ಚಂದ್ರ ಮರಕಾಲ ಅವರನ್ನು ವೈದ್ಯಕೀಯ ಕ್ಷೇತ್ರದ ವಿಶೇಷ ಸೇವೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು.
ಡಿಎಚ್ಒ ಡಾ. ಐ.ಪಿ. ಗಡಾದ್, ಜಿಲ್ಲಾ ಸರ್ಜನ್ ಡಾ. ಅಶೋಕ್ ಎಚ್. ಮಾತನಾಡಿದರು. ಆದರ್ಶ ಆಸ್ಪತ್ರೆ ಸಿಇಒ ವಿಮಲಾ ಚಂದ್ರಶೇಖರ್, ಹಿರಿಯ ವೈದ್ಯ ಡಾ. ಮೋಹನದಾಸ್ ಶೆಟ್ಟಿ ಇದ್ದರು. ಆದರ್ಶ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಜಿ. ಎಸ್. ಚಂದ್ರಶೇಖರ್ ಪ್ರಸ್ತಾವನೆಗೈದು, ಸ್ವಾಗತಿಸಿದರು. ಆಸ್ಪತ್ರೆ ಡಯಟೀಶಿಯನ್ ಅನುಶ್ರೀ ನಿರೂಪಿಸಿದರು. ಉಪಪ್ರಬಂಧಕ ಪ್ರಕಾಶ್ ಡಿ.ಕೆ. ವಂದಿಸಿದರು.