ಮಂಗಳೂರು : ಇಂದು ವಿಶ್ವದ ಬಲಿಷ್ಠ ಅರ್ಥವ್ಯವಸ್ಥೆಗಳಲ್ಲಿ ಭಾರತ ಗುರುತಿಸಿಕೊಳ್ಳಲು ಡಾ. ಮನಮೋಹನ್ ಸಿಂಗ್ ಅವರು ಕಾರಣ. ಅವರ ದೂರದೃಷ್ಟಿಯ ಯೋಜನೆಗಳು, ಸಮರ್ಥ ನಾಯಕತ್ವ ವಿಶ್ವಕ್ಕೆ ಮಾದರಿ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ಶನಿವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಡಾ. ಮನಮೋಹನ್ ಸಿಂಗ್ ಅವರು ಮಾತಿಗಿಂತ ಕೃತಿಗೆ ಹೆಚ್ಚು ಮಹತ್ವ ಕೊಟ್ಟವರು. ಪ್ರತಿಪಕ್ಷದ ಟೀಕೆಗಳಿಗೆ ಉತ್ತರಿಸದೇ ಜನಪರ ಕಾರ್ಯಕ್ರಮಗಳಿಗೆ ಒತ್ತು ನೀಡಿದ್ದರು. ಅವರು ಮಾಹಿತಿ ಹಕ್ಕು ಕಾಯ್ದೆ, ಆಹಾರ ಭದ್ರತಾ ಕಾಯ್ದೆ, ನರ್ಮ್ ಯೋಜನೆ, ಶಿಕ್ಷಣ ಹಕ್ಕು ಕಾಯ್ದೆ, ವಿಶೇಷ ಆರ್ಥಿಕ ವಲಯ ಕಾಯ್ದೆ, ನರೇಗಾ ಯೋಜನೆ, ಎಫ್ಡಿಐ, ಬ್ಯಾಂಕ್ ಬಡ್ಡಿ ಇಳಿಕೆ, ವಿದೇಶಿ ನೇರ ಬಂಡವಾಳ ನೀತಿ ಸೇರಿದಂತೆ ಹಲವು ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಿ ದೇಶದ ಬಡವರು, ಮಧ್ಯಮ ವರ್ಗದವರನ್ನು ಆರ್ಥಿಕವಾಗಿ ಮೇಲೆತ್ತುವಲ್ಲಿ ಯಶಸ್ವಿಯಾದರು. ಅವರ ಕಾಲಾವಧಿಯಲ್ಲಿ ದೇಶದ ಬ್ಯಾಂಕ್ಗಳು ದಿವಾಳಿಯಾಗದೇ ಉಳಿದಿರುವುದು ಅವರ ದೂರದೃಷ್ಟಿಯೇ ಕಾರಣ ಎಂದು ಸ್ಮರಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ಡಾ.ಮನಮೋಹನ್ ಸಿಂಗ್ ಅವರು 10 ವರ್ಷಗಳ ಕಾಲ ದೇಶವನ್ನು ಮುನ್ನಡೆಸಿದ್ದ ಅವಧಿಯಲ್ಲಿ ಅವರು ಕೈಗೊಂಡ ಕ್ರಮಗಳು, ಜಾರಿಗೊಳಿಸಿದ ನೀತಿಗಳು ದೇಶದ ಅಭಿವೃದ್ಧಿಗೆ ಮುನ್ನುಡಿಯಾಗಿತ್ತು. 1990ರ ಆರಂಭದಲ್ಲಿ ಜನತಾ ಪಕ್ಷದ ಆಡಳಿತಾವಧಿಯಲ್ಲಿ ದೇಶದ ಆರ್ಥಿಕ ವ್ಯವಸ್ಥೆ ಸಂಪೂರ್ಣ ಕುಸಿದಿತ್ತು. ಬಳಿಕ ಅವರು ವಿತ್ತ ಸಚಿವರಾಗಿ ಉದಾರೀಕರಣ, ಜಾಗತೀಕರಣ, ಖಾಸಗೀಕರಣ ನೀತಿಗಳನ್ನು ಜಾರಿಗೆ ತಂದು ದೇಶದ ಮಾರುಕಟ್ಟೆಯನ್ನು ವಿಶ್ವಕ್ಕೆ ಪರಿಚಯಿಸಿದರು. ರೈತರಿಗೆ ಸಂಬಂಧಿಸಿದ 65,000 ಕೋಟಿ ರೂ. ಸಾಲ ಮನ್ನಾ ಮಾಡಿ ಕೃಷಿ ಕ್ಷೇತ್ರದ ಸುಧಾರಣೆ ಮಾಡಿದರು. 2005ರಲ್ಲಿ ಸಂಕೀರ್ಣ ಮಾರಾಟ ತೆರಿಗೆಯ ಬದಲು ಮೌಲ್ಯ ವರ್ಧಿತ ತೆರಿಗೆ ತಂದು ದೇಶದ ಅರ್ಥ ವ್ಯವಸ್ಥೆಯಲ್ಲಿ ಕ್ರಾಂತಿ ಸೃಷ್ಟಿಸಿದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕ ಜೆ.ಆರ್.ಲೋಬೊ, ಲೋಕಸಭಾ ಅಭ್ಯರ್ಥಿ ಪದ್ಮರಾಜ್.ಆರ್. ಮೂಡಾ ಅಧ್ಯಕ್ಷ ಸದಾಶಿವ್ ಉಳ್ಳಾಲ್, ಗುರುನಾಮ್ ಸಿಂಗ್ ವಿಕ್ಕಿ ನುಡಿನಮನ ಸಲ್ಲಿಸಿದರು. ಬ್ಲಾಕ್ ಅಧ್ಯಕ್ಷರಾದ ಜೆ.ಅಬ್ದುಲ್ ಸಲೀಂ, ಮೋಹನ್ ಕೋಟ್ಯಾನ್, ಸುರೇಂದ್ರ ಕಬಳಿ, ಬಾಲಕೃಷ್ಣ ಅಂಚನ್, ಚಂದ್ರಶೇಖರ್ ಭಂಡಾರಿ, ಮುಖಂಡರಾದ ಅಬ್ದುಲ್ ರವೂಫ್, ಟಿ.ಹೊನ್ನಯ್ಯ, ಸದಾಶಿವ್ ಶೆಟ್ಟಿ, ಅಬೂಬಕ್ಕರ್ ಕುದ್ರೋಳಿ, ಅಶ್ರಫ್ ಬಜಾಲ್, ಬೇಬಿ ಕುಂದರ್, ನವೀನ್ ಡಿಸೋಜ, ಅಬ್ಬಾಸ್ ಅಲಿ, ಚೇತನ್ ಬೆಂಗ್ರೆ, ವಿಶ್ವಾಸ್ ಕುಮಾರ್ ದಾಸ್, ಜಯಶೀಲ ಅಡ್ಯಂತಾಯ, ನೀರಜ್ ಚಂದ್ರಪಾಲ್, ಶುಭೋದಯ ಆಳ್ವ, ದಿನೇಶ್ ಮುಳೂರು, ಟಿ.ಸುಧೀರ್, ಜಿತೇಂದ್ರ ಸುವರ್ಣ, ಗಿರೀಶ್ ಶೆಟ್ಟಿ, ಶಬೀರ್ ಸಿದ್ದಕಟ್ಟೆ, ಹಯಾತುಲ್ ಖಾಮಿಲ್, ಯೋಗಿಶ್ ಕುಮಾರ್, ರಹಿಮಾನ್ ಕೋಡಿಜಾಲ್, ಖಾದರ್ ಏರ್ ಪೋರ್ಟ್, ಸತೀಶ್ ಪೆಂಗಲ್, ಹೇಮಂತ್ ಗರೋಡಿ, ಸುಹಾನ್ ಆಳ್ವ, ಲಕ್ಷ್ಮೀ ನಾಯರ್, ತನ್ವೀರ್ ಶಾ, ಸಾರಿಕಾ ಪೂಜಾರಿ, ಚಂದ್ರಕಲಾ ಜೋಗಿ, ಶಾಂತಲಾ ಗಟ್ಟಿ, ಮಂಜುಳಾ ನಾಯಕ್, ಗಣೇಶ್ ಪೂಜಾರಿ, ಚಂದ್ರಹಾಸ ಪೂಜಾರಿ, ನೆಲ್ಸನ್ ಮೊಂತೇರೊ, ಪ್ರೇಮ್ ಬಳ್ಳಾಲ್ ಭಾಗ್, ಹೈದರ್ ಬೋಳಾರ್, ಅಭಿನಂದನ್ ಹರೀಶ್, ರಮಾನಂದ ಪೂಜಾರಿ, ಮಂಗಳೂರು ಗುರುದ್ವಾರ ಧರರ್ಮದರ್ಶಿ ಬಾಬಾ ಕರಂ ಸಿಂಗ್, ಗುರುದ್ವಾರದ ಮುಖಂಡರಾದ ಜಿತೇಂದ್ರ ಸಿಂಗ್ ಸಂಜು, ಗುರ್ಮೀತ್ ಸಿಂಗ್ ಮೋಂಟಿ, ಸುರ್ವೀರ್ ಸಿಂಗ್, ಚಿಂಟು ಸಿಂಗ್, ಮಂಜೀತ್ ಸಿಂಗ್, ಇಸ್ಮೀತ್ ಸಿಂಗ್ ಖಾಲ್ಸಾ ಮತ್ತಿತರರು ಉಪಸ್ಥಿತರಿದ್ದರು.
ಕೊನೆಯಲ್ಲಿ ಕೆ.ಕೆ.ಶಾಹುಲ್ ಹಮೀದ್ ಮನಮೋಹನ್ ಸಿಂಗ್ ಕುರಿತ ಕವನ ವಾಚಿಸಿದರು. ಮಾಜಿ ಮೇಯರ್ ಶಶಿಧರ್ ಹೆಗ್ಡೆ ವಂದಿಸಿದರು.