Mangaluru
ಡ್ರಗ್ಸ್ ಜಾಲ ಮಟ್ಟಹಾಕಲು ಎಲ್ಲ ಇಲಾಖೆಗಳು ಕೈಜೋಡಿಸಬೇಕು : ಜಿಲ್ಲಾಧಿಕಾರಿ ಖಡಕ್ ಸೂಚನೆ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಾಂಜಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಜಿಲ್ಲೆಯಲ್ಲಿ ಗಾಂಜಾವನ್ನು ಸಂಪೂರ್ಣವಾಗಿ ನಿಷೇಧಿಸಲು ಎಲ್ಲಾ ಇಲಾಖೆಗಳು ಜಂಟಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಮುಲ್ಲೈ ಮುಗಿಲನ್ ಎಂ.ಪಿ. ಖಡಕ್ ಸೂಚನೆ ನೀಡಿದರು.

ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಡ್ರಗ್ಸ್ ಚಟಕ್ಕೆ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಬೀಳುತ್ತಿರುವುದು ಕಳವಳಕಾರಿಯಾಗಿದೆ. ಡ್ರಗ್ಸ್ ಜಾಲವನ್ನು ಸಂಪೂರ್ಣವಾಗಿ ನಿಷೇಧಿಸಲು ಶಿಕ್ಷಣ ಸಂಸ್ಥೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಶಾಲಾ ಮಟ್ಟದಲ್ಲಿಯೇ ಆಂತರಿಕವಾಗಿ ನೋಡಲ್ ಆಫೀಸರ್, ಆಪ್ತ ಸಮಾಲೋಚಕರನ್ನು ನೇಮಿಸಿ ವಿದ್ಯಾರ್ಥಿಗಳ ಚಲನವಲನಗಳನ್ನು ಗಮನಿಸಬೇಕು. ಡ್ರಗ್ಸ್ ವ್ಯಸನಿಯಾಗಿದ್ದಲ್ಲಿ ಆಪ್ತ ಸಮಾಲೋಚನೆಯನ್ನು ಮಾಡಿ ವಿದ್ಯಾರ್ಥಿಯ ಮನ ಪರಿವರ್ತಿಸಬೇಕು. ವಿದ್ಯಾರ್ಥಿಗೆ ಯಾವ ಮೂಲದಿಂದ ಡ್ರಗ್ ಸಿಗುತ್ತಿದೆ ಎಂಬ ಬಗ್ಗೆ ಹೆಚ್ಚಿನ ತನಿಖೆಗೆ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಅವರು ಸೂಚಿಸಿದರು.
ಶಾಲಾ ಕಾಲೇಜುಗಳ ಹೆಸರಿಗೆ ಧಕ್ಕೆ ಉಂಟಾಗಬಹುದು ಎಂದು ಪ್ರಕರಣವನ್ನು ಮುಚ್ಚಿಡಬಾರದು ಎಂದರು. ಶಾಲಾ ಕಾಲೇಜುಗಳಿಗೆ ಆಗಿಂದಾಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ತಪಾಸಣೆಗೆ ಒಳಪಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು. ಅಂಚೆ ಕಚೇರಿಗೆ ಬರುವ ಪಾರ್ಸೆಲ್ಗಳು ಅನುಮಾನಾಸ್ಪದವಾಗಿ ತೋರಿ ಬಂದರೆ, ಪದೇ ಪದೇ ಒಂದೇ ರೀತಿಯಲ್ಲಿ ಪಾರ್ಸೆಲ್ಗಳು ಬರುತ್ತಿದ್ದರೆ ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು. ಅರಣ್ಯ ಪ್ರದೇಶಗಳಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಯುತ್ತಿದ್ದಾರೆಯೇ ಎಂಬ ಬಗ್ಗೆ ಅರಣ್ಯ ಇಲಾಖೆಯವರು ತಪಾಸಣೆ ನಡೆಸಬೇಕು. ಡ್ರಗ್ಸ್ ನಿರ್ಮೂಲನೆಯಲ್ಲಿ ಪ್ರತಿಯೊಂದು ಇಲಾಖೆಯವರು ಜಂಟಿಯಾಗಿ, ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು.
ವಾಟ್ಸಪ್ ಗ್ರೂಪ್ಗಳನ್ನು ರಚಿಸಿ, ವೇಳಾಪಟ್ಟಿಗಳನ್ನು ರಚಿಸಿ ಡ್ರಗ್ಸ್ ನಿರ್ಮೂಲನೆ ಮಾಡಲು ಕೈಗೊಳ್ಳಬೇಕಾದ ಕ್ರಮಗಳನ್ನು ಚರ್ಚಿಸಿ ಕಾರ್ಯರೂಪಕ್ಕೆ ತರಬೇಕು ಪ್ರತಿ ತಿಂಗಳು ಅದರ ವರದಿಯನ್ನು ಒಪ್ಪಿಸುವಂತೆ ಅವರು ಅಧಿಕಾರಿಗಳಿಗೆ ತಿಳಿಸಿದರು. ಆರ್ಟಿಓ ಇಲಾಖೆಯಿಂದ ಎಲ್ಲಾ ಬಸ್ ಡ್ರೈವರ್ ಕಂಡಕ್ಟರ್ಗಳಿಗೆ ಡ್ರಗ್ಸ್ ಬಗ್ಗೆ ಜಾಗೃತಿಯನ್ನು ಮೂಡಿಸಲು ಸಭೆ ನಡೆಸಬೇಕು. ಬಸ್ಗಳಲ್ಲಿ ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸುವ ಭಿತ್ತಿ ಪತ್ರಗಳನ್ನು ಅಂಟಿಸಬೇಕು. ಸಹಾಯವಾಣಿ ಸಂಖ್ಯೆ ನಂಬರ್ 1933 ಅನ್ನು ಅದರಲ್ಲಿ ನಮೂದಿಸಬೇಕು ಎಂದರು.
ಜಿಲ್ಲೆಯಲ್ಲಿ ಈವರೆಗೂ ಪತ್ತೆಯಾದ ಪ್ರಕರಣಗಳಲ್ಲಿ ಸಿಂಥೆಟಿಕ್ ಡ್ರಗ್ಸ್ ಹೆಚ್ಚಾಗಿ ಕಂಡು ಬಂದಿದ್ದು ಡ್ರಗ್ಸ್ಗಳನ್ನು ಎಲ್ಲಿಂದ ಪೂರೈಕೆ ಮಾಡಲಾಗುತ್ತಿದೆ ಎಂಬುದನ್ನು ಪತ್ತೆಹಚ್ಚಬೇಕು. ಅಪಾರ್ಟ್ಮೆಂಟ್ಗಳಲ್ಲಿ ಡ್ರಗ್ಸ್ ಬಗ್ಗೆ ಸಭೆಯನ್ನು ನಡೆಸಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಡಿಸಿಪಿ, ಸಿದ್ದಾರ್ಥ್ ಗೋಯಲ್ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಬಾಂಗ್ಲಾದೇಶದ ಹಿಂದೂಗಳ ಮೇಲೆ ದೌರ್ಜನ್ಯ ಖಂಡಿಸಿ ಡಿ. 04ರಂದು ಮಂಗಳೂರಿನಲ್ಲಿ ಪ್ರತಿಭಟನೆ; ಪುತ್ತೂರಿನಿಂದ 2 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ : ವಿಹಿಂಪ
ಪುತ್ತೂರು : ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಡಿ.4 ರಂದು ಹಿಂದೂ ಹಿತರಕ್ಷಣಾ ಸಮಿತಿಯಿಂದ ಮಂಗಳೂರಿನಲ್ಲಿ ನಡೆಯುವ ಪ್ರತಿಭಟನೆಗೆ ವಿಶ್ವಹಿಂದೂ ಪರಿಷತ್ ಬೆಂಬಲ ನೀಡಲಿದ್ದು, ಪುತ್ತೂರಿನಿಂದ 2 ಸಾವಿರ ಮಂದಿ ಮಂಗಳೂರಿಗೆ ತೆರಳುವ ನಿರೀಕ್ಷೆಯಿದೆ ಎಂದು ವಿಶ್ವಹಿಂದೂ ಪರಿಷದ್ ಪುತ್ತೂರು ಜಿಲ್ಲೆಯ ಅಧ್ಯಕ್ಷ ಡಾ. ಕೃಷ್ಣಪ್ರಸನ್ನ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಹಿಂದೂಗಳನ್ನೇ ಗುರಿಯಾಗಿಟ್ಟುಕೊಂಡು ಇಸ್ಲಾಂ ಮೂಲಭೂತವಾದಿಗಳು ದೌರ್ಜನ್ಯ ನಡೆಸುತ್ತಿದ್ದಾರೆ. ಹಿಂದೂಗಳ ಹಕ್ಕಿಗಾಗಿ ಹೋರಾಟ ಮಾಡಿದ ಇಸ್ಕಾನ್ ಸ್ವಾಮೀಜಿ ಚಿನ್ಮೋಯ್ ಕೃಷ್ಣದಾಸ್ ಅವರನ್ನು ಸುಳ್ಳು ಆರೋಪದಲ್ಲಿ ಬಂಧಿಸಲಾಗಿದೆ. ಅವರ ಆರೋಗ್ಯ ವಿಚಾರಿಸಲು ಬಂದ ಇಬ್ಬರು ಸ್ವಾಮಿಜೀಗಳನ್ನು ವಿನಾಕಾರಣ ಬಂಧಿಸಿದ್ದಾರೆ. ಈ ಎಲ್ಲಾ ಕೃತ್ಯಗಳನ್ನು ವಿಹಿಂಪ ಖಂಡಿಸುತ್ತದೆ.
ಈ ನಿಟ್ಟಿನಲ್ಲಿ ಹಿಂದೂ ಹಿತರಕ್ಷಣಾ ಸಮಿತಿಯಿಂದ ಡಿ.4 ರಂದು ಬೆಳಿಗ್ಗೆ ಮಂಗಳೂರು ಜ್ಯೋತಿ ಅಂಬೇಡ್ಕರ್ ವೃತ್ತದಿಂದ ಮಿನಿ ವಿಧಾನಸೌಧದ ಕಚೇರಿಯ ತನಕ ಪ್ರತಿಭಟನೆ ಮೆರವಣಿಗೆ ನಡೆಯಲಿದೆ. ಈ ಪ್ರತಿಭಟನೆಗೆ ವಿಹಿಂಪ ಬೆಂಬಲಿಸಲಿದ್ದು ಪುತ್ತೂರಿನ ತೆಂಕಿಲ ಬಳಿ ಸೇರಿ ಅಲ್ಲಿಗೆ 2 ಸಾವಿರ ಮಂದಿ ತೆರಳಲಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ವಿಹಿಂಪ ಜಿಲ್ಲಾ ಕೋಶಾಧಿಕಾರಿ ಮಾಧವ ಪೂಜಾರಿ, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ, ಬಜರಂಗದಳ ಜಿಲ್ಲಾ ಸಂಯೋಜಕ ಭರತ್ ಕುಮ್ಡೇಲ್, ವಿಹಿಂಪ ನಗರ ಅಧ್ಯಕ್ಷ ದಾಮೋದರ್ ಪಾಟಾಳಿ ಉಪಸ್ಥಿತರಿದ್ದರು.

ಮಂಗಳೂರು : ನಿಷೇಧಿತ ಮಾದಕದ್ರವ್ಯ ಎಂಡಿಎಂಎಯನ್ನು ಪೂರೈಸುತ್ತಿದ್ದ ಡ್ರಗ್ ಪೆಡ್ಲರ್ ಅನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳ್ತಂಗಡಿ ನಿವಾಸಿ ಮೊಹಮ್ಮದ್ ಅಲ್ಫಾಝ್(24) ಬಂಧಿತ ಆರೋಪಿ.

ಈತ ನವೆಂಬರ್ 25ರಂದು ಉಳ್ಳಾಲ ತಾಲೂಕಿನ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಪಜೀರು ಗ್ರಾಮದ ಕೈಗಾರಿಕಾ ಪ್ರದೇಶದ ಬಳಿ ಎಂಡಿಎಂಎ ಮಾದಕದ್ರವ್ಯ ಮಾರಾಟ ಮಾಡುತ್ತಿದ್ದ ವೇಳೆ ಸಿಕ್ಕಿಬಿದ್ದ ಗೌತಮ್ (22), ಕಾರ್ತಿಕ್ (27), ನಿಖಿಲ್(28) ಎಂಬವರಿಗೆ ಎಂಡಿಎಂಎ ಪೂರೈಕೆ ಮಾಡಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ.
ಈತನನ್ನು ಕೊಣಾಜೆ ಪೊಲೀಸ್ ಠಾಣೆಯ ವ್ಯಾಪ್ತಿಯ ಮುಡಿಪು ಬಳಿ ವಶಕ್ಕೆ ಪಡೆಯಲಾಗಿದೆ. ಬಂಧಿತನಿಂದ 53 ಗ್ರಾಂ ಎಂಡಿಎಂಎ ಮಾದಕದ್ರವ್ಯ, ಸ್ಮೋಕ್ ಪಾಟ್, ಒಂದು ಕಾರು, 2 ಮೊಬೈಲ್, ಹೀಗೆ ಒಟ್ಟು 7,76,980/- ಮೌಲ್ಯದ ಸೋತ್ತನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಒಟ್ಟು ಈ ಪ್ರಕರಣದಲ್ಲಿ 103 ಗ್ರಾಂ ಎಂಡಿಎಂಎ ಹಾಗೂ ಒಟ್ಟು 15,52,980/- ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ.
ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಹಿರಿಯ ಧರ್ಮಗುರು, ಶಿಕ್ಷಣ ತಜ್ಞ ವಂ|ಡಾ| ಲೊರೇನ್ಸ್ ಸಿ ಡಿಸೋಜಾ ನಿಧನ
ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಹಿರಿಯ ಧರ್ಮಗುರು, ಶಿಕ್ಷಣ ತಜ್ಞ ವಂ|ಡಾ| ಲೊರೇನ್ಸ್ ಸಿ ಡಿಸೋಜಾ ಅವರು ದೀರ್ಘಕಾಲದ ಅಸೌಖ್ಯದಿಂದ ಮಂಗಳವಾರ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.
1948 ನವೆಂಬರ್ 28ರಂದು ಶಿರ್ವ ಸಮೀಪದ ಪೆರ್ನಾಲ್ನಲ್ಲಿ ಜನಿಸಿದ ಅವರು 1977ರಲ್ಲಿ ಧರ್ಮಗುರುವಾಗಿ ಯಾಜಕ ದೀಕ್ಷೆಯನ್ನು ಪಡೆದರು.
ಗುರುದೀಕ್ಷೇ ಪಡೆದ ಬಳಿಕ ಹಲವಾರು ಹುದ್ದೆಗಳನ್ನು ಅಲಂಕರಿಸಿರುವ ವಂ| ಲೋರೆನ್ಸ್ ಡಿಸೋಜಾ ಅವರ ಸೇವೆಯ ವಿವರ :
1977-79ರ ವರೆಗೆ ಕುಲಶೇಖರ ಚರ್ಚಿನ ಸಹಾಯಕ ಧರ್ಮಗುರುಗಳಾಗಿ, 1979-84ರ ತನಕ ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜಿ ಸಹಾಯಕ ನಿರ್ದೇಶಕರಾಗಿ, 1984-92ರ ವರೆಗೆ ಮಂಗಳೂರು ಧರ್ಮಪ್ರಾಂತ್ಯ ಕಥೊಲಿಕ ಶಿಕ್ಷಣ ಮಂಡಳಿಯ ಕಾರ್ಯದರ್ಶಿಯಾಗಿ, 1998-2006ರ ವರೆಗೆ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಆಡಳಿತಾಧಿಕಾರಿಯಾಗಿ, 2006-2008 ರ ವರೆಗೆ ಕುಲಶೇಖರ ಚರ್ಚಿನ ಪ್ರಧಾನ ಧರ್ಮಗುರುಗಳಾಗಿ, 2008-2014 ರ ವರೆಗೆ ಬೆಂಗಳೂರಿನ ಸೈಂಟ್ ಜಾನ್ಸ್ ಆಸ್ಪತ್ರೆಯ ನಿರ್ದೇಶಕರಾಗಿ, 2015-18ರ ವರೆಗೆ ಉಡುಪಿ ಕಥೊಲಿಕ್ ಶಿಕ್ಷಣ ಸೊಸೈಟಿ ಕಾರ್ಯದರ್ಶಿಯಾಗಿ, 2018-2020ರ ವರೆಗೆ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ನ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ.
ನಾಲ್ಕು ದಶಕಗಳ ಸುದೀರ್ಘ ಧಾರ್ಮಿಕ ಸೇವೆಯ ಬಳಿಕ 2020ರಲ್ಲಿ ತಮ್ಮ ಅನಾರೋಗ್ಯದ ಸಮಸ್ಯೆಯಿಂದಾಗಿ ನಿವೃತ್ತಿ ಹೊಂದಿ ಕಲ್ಯಾಣಪುರದಲ್ಲಿ ನಿವೃತ್ತ ಯಾಜಕರ ನಿವಾಸ ಮಿಲಾಗ್ರಿಸ್ ಹೋಮ್ನಲ್ಲಿ ವಾಸ್ತವ್ಯ ಹೊಂದಿದ್ದರು.
ಮೃತರ ನಿಧನಕ್ಕೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ, ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಕುಲಪತಿಗಳಾದ ವಂ|ಡಾ|ರೋಶನ್ ಡಿಸೋಜಾ, ಧರ್ಮಪ್ರಾಂತ್ಯದ ಧರ್ಮಗುರುಗಳು ಹಾಗೂ ಭಕ್ತವೃಂದ ಕಂಬನಿ ಮಿಡಿದಿದ್ದಾರೆ.
ಮೃತ ವಂ|ಲೋರೆನ್ಸ್ ಸಿ ಡಿಸೋಜಾ ಅವರ ಅಂತ್ಯಕ್ರಿಯೆ ನವೆಂಬರ್ 16 ಶನಿವಾರ ಬೆಳಿಗ್ಗೆ ನಡೆಯಲಿದ್ದು, 8.00 ಗಂಟೆಗೆ ಸಾರ್ವಜನಿಕ ದರ್ಶನಕ್ಕೆ ಕಲ್ಯಾಣಪುರ ಮೌಂಟ್ ರೋಸರಿ ಚರ್ಚಿನಲ್ಲಿ ಇರಿಸಿ, ಬೆಳಿಗ್ಗೆ 9.30ಕ್ಕೆ ಬಲಿಪೂಜೆಯೊಂದಿಗೆ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಂಗಳೂರು : ಭೂ ವಿವಾದಕ್ಕೆ ಸಂಬಂಧಿಸಿದಂತೆ ಪ್ರಗತಿಪರ ಕೃಷಿಕರೊಬ್ಬರನ್ನು ಕತ್ತಿಯಿಂದ ಕಡಿದು ಕೊಲೆಗೈದಿರುವ ಘಟನೆ ಗೋಳಿತೊಟ್ಟು ಸಮೀಪದ ಆಲಂತಾಯದ ಪೆರ್ಲ ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಪೆರ್ಲ ನಿವಾಸಿ, ಪ್ರಗತಿಪರ ಕೃಷಿಕ ರಮೇಶ್ ಗೌಡ (50) ಕೊಲೆಯಾದ ದುರ್ದೈವಿ.
ರಮೇಶ್ ಗೌಡರನ್ನು ಅವರ ಹತ್ತಿರದ ಸಂಬಂಧಿ ಹರೀಶ್ ಎಂಬಾತ ಕತ್ತಿಯಿಂದ ಕಡಿದು ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಉಪ್ಪಿನಂಗಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಮಂಗಳೂರಿನ ಕೆ.ಪಿ.ಟಿ. ಬಳಿ ಅಪಘಾತ. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಮೃತ್ಯು
ದಕ್ಷಿಣ ಕನ್ನಡ : ಮಂಗಳೂರಿನ ಕೆ.ಪಿ.ಟಿ. ಬಳಿ ಗುರುವಾರದಂದು ಬೈಕ್-ನ್ಯಾನೋ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಭಾಸ್ಕರ್ (49) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮಾಣಿ ಸಮೀಪದ ನೇರಳಕಟ್ಟೆ ಪೆರುವಾಜೆ ಬೀರಕೋಡಿ ನಿವಾಸಿ ಭಾಸ್ಕರ್ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿಯಾಗಿದ್ದರು.
ಕೆಲಸದ ನಿಮಿತ್ತ ಮಂಗಳೂರಿಗೆ ಹೋಗಿದ್ದ ಭಾಸ್ಕರ್ ಅವರು ಚಲಾಯಿಸುತ್ತಿದ್ದ ಬೈಕಿಗೆ ನ್ಯಾನೋ ಕಾರು ಕೆ.ಪಿ.ಟಿ. ಬಳಿ ಡಿಕ್ಕಿ ಹೊಡೆದು ಸವಾರ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಬೆಳಗ್ಗೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಂಗಳೂರು ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಗುರುವಾರ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕಾರ್ಯಕ್ರಮವನ್ನು ನಡೆಸಲಾಯಿತು.
ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್ ಅವರು ಮಹಷಿ೯ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನಾ ಸಮನ್ವಯಾಧಿಕಾರಿ ಬಸವರಾಜು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್ ಅಡಿಗ, ಮಂಗಳೂರು ದಕ್ಷಿಣ ಬಿಇಓ ಈಶ್ವರ್ ಹಾಗೂ ಇತರ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಪರಿಶಿಷ್ಟ ಪಂಗಡದ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

ಆಟೋದಲ್ಲಿ ಅಕ್ರಮ ಗೋಸಾಗಾಟ. ಮಹಿಳೆ ಸಹಿತ ಆಟೋ ತಡೆದು ಪೊಲೀಸರಿಗೆ ಒಪ್ಪಿಸಿದ ಬಜರಂಗಿಗಳು
ಪುತ್ತೂರು : ಆಟೋ ರಿಕ್ಷಾದಲ್ಲಿ ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದಾಗ ಪುತ್ತೂರು ಬೈಪಾಸ್ ರಸ್ತೆಯಲ್ಲಿ ಬಜರಂಗದಳ ಕಾರ್ಯಕರ್ತರು ತಡೆದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಅಕ್ರಮ ಸಾಗಾಟ ಮಾಡುತ್ತಿದ್ದ ಗೋವು ಜೊತೆ ಇಬ್ಬರು ಮಹಿಳೆಯರು ಕೂಡಾ ಪ್ರಯಾಣಿಸುತ್ತಿದ್ದು, ಚಾಲಕನ ಸಹಿತ ಎಲ್ಲರನ್ನೂ ಪುತ್ತೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನಿಖೆ ಮುಂದುವರೆದಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಮಂಗಳೂರು : ಕಳವು ಪ್ರಕರಣದಲ್ಲಿ ಜಾಮೀನು ಪಡೆದು ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಉಳ್ಳಾಲ ತಾಲೂಕಿನ ಮಂಜನಾಡಿ ಗ್ರಾಮದ ಕಲ್ಕಟ್ಟ, ಬದ್ರಿಯನಗರದ ನಿವಾಸಿ ಮೊಹಮ್ಮದ್ ಅಬ್ದುಲ್ ಫಯಾನ್(27) ಬಂಧಿತ ಆರೋಪಿ.
ಕೊಣಾಜೆ ಠಾಣಾ ವಾರೆಂಟ್ ಅಸಾಮಿ ಮೊಹಮ್ಮದ್ ಅಬ್ದುಲ್ ಫಯಾನ್ ವಿರುದ್ಧ ಕೊಣಾಜೆ, ಉಳ್ಳಾಲ, ಕಡಬ, ಬರ್ಕೆ, ಉಪ್ಪಿನಂಗಡಿ, ಪುತ್ತೂರು ನಗರ ಹಾಗೂ ಬಂಟ್ವಾಳ ನಗರ ಠಾಣೆಗಳಲ್ಲಿ ಒಟ್ಟು 24 ಪ್ರಕರಣಗಳು ದಾಖಲಾಗಿತ್ತು. ಪ್ರಕರಣದಲ್ಲಿ ಜಾಮೀನು ಪಡೆದ ಅಸಾಮಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ನ್ಯಾಯಾಲಯ ಆರೋಪಿಯ ಬಂಧನಕ್ಕೆ ವಾರೆಂಟ್ ಹೊರಡಿಸಿತ್ತು.
ಅದರಂತೆ 1 ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಮೊಹಮ್ಮದ್ ಅಬ್ದುಲ್ ಫಯಾನ್ನನ್ನು ಕೊಣಾಜೆ ಠಾಣಾ ಪೊಲೀಸ್ ನಿರೀಕ್ಷಕ ರಾಜೇಂದ್ರ ಬಿ., ಪೊಲೀಸ್ ಉಪ ನಿರೀಕ್ಷಕ ನಾಗರಾಜ್ ಎಸ್., ಸಿಬ್ಬಂದಿ ಹೆಚ್.ಸಿ.ಮಹಮ್ಮದ್ ಶರೀಫ್, ಪಿಸಿ 765 ಸಂತೋಷ್ ಕೇರಳದ ಮಂಜೇಶ್ವರ ಎಂಬಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.