ಮಂಗಳೂರು : ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ತಾಲೂಕು ಸಮಿತಿ, ಮಹಿಳಾ ಘಟಕ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರ ಹಾಗೂ ಎಲ್ಲಾ ಶಾಲಾ ಕಾಲೇಜು ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ಮಾದಕದ್ರವ್ಯ ವ್ಯಸನಮುಕ್ತ ಮಂಗಳೂರು ಜಾಥಾ ನವೆಂಬರ್ 14ರ ಗುರುವಾರ ಸಂಜೆ 3 ಗಂಟೆಗೆ ಎಸ್.ಡಿ.ಎಂ. ಕಾನೂನು ಕಾಲೇಜು ಸಭಾಂಗಣದಲ್ಲಿ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.
Mangalore News
ಶ್ರೀನಿವಾಸ್ ಇಂದಾಜೆಗೆ ಪಬ್ಲಿಕ್ ರಿಲೇಶನ್ ಕೌನ್ಸಿಲ್ ಒಫ್ ಇಂಡಿಯಾ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಚಾಣಕ್ಯ ರಾಷ್ಟ್ರೀಯ ಪ್ರಶಸ್ತಿ
ಮಂಗಳೂರು : ನವದೆಹಲಿಯ ಪಬ್ಲಿಕ್ ರಿಲೇಶನ್ ಕೌನ್ಸಿಲ್ ಒಫ್ ಇಂಡಿಯಾ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಚಾಣಕ್ಯ ರಾಷ್ಟ್ರೀಯ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅವರಿಗೆ ಕೇಂದ್ರ ವಿದ್ಯುತ್ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವಾಲಯದ ರಾಜ್ಯ ಸಚಿವ ಶ್ರೀಪಾದ್ ಎಸ್ಸೋ ನಾಯಕ್ ಪ್ರದಾನ ಮಾಡಿದರು.
ಮಂಗಳೂರು ನಗರದ ಹೋಟೆಲ್ ಮೋತಿಮಹಲ್ನಲ್ಲಿ ಪಬ್ಲಿಕ್ ರಿಲೇಶನ್ ಸೊಸೈಟಿ ಒಫ್ ಇಂಡಿಯಾ ಸಂಸ್ಥೆಯ ವಿಶ್ವ ಸಂವಹನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.
ಶ್ರೀನಿವಾಸ್ ನಾಯಕ್ ಇಂದಾಜೆ ಅವರಿಗೆ ಉತ್ತಮ ಸಾರ್ವಜನಿಕ ಸಂಪರ್ಕಕ್ಕಾಗಿ ನರೇಶ್ ಕುಮಾರ್ ಸ್ಮರಣಾರ್ಥ ಚಾಣಕ್ಯ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶ್ರೀನಿವಾಸ್ ನಾಯಕ್ ಇಂದಾಜೆ ಅವರು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಳಿಕ ಬ್ರ್ಯಾಂಡ್ ಮಂಗಳೂರು, ಪತ್ರಕರ್ತರ ಗ್ರಾಮ ವಾಸ್ತವ್ಯದ ಮೂಲಕ ಸಮಾಜ ಮುಖಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಕುತ್ಲುರು ಸರಕಾರಿ ಶಾಲೆ ಅಭಿವೃದ್ಧಿ, ಮಂಗಳೂರು ಬಿಜೈ ಕಾಪಿಕಾಡ್ ಅಂಗನವಾಡಿ ಕೇಂದ್ರದ ಅಭಿವೃದ್ಧಿಗೂ ಶ್ರಮಿಸಿದ್ದಾರೆ.
ಬಿಜೆಪಿಗೆ ಸರಕಾರಿ ತನಿಖಾ ಸಂಸ್ಥೆಗಳ ಮೇಲೆ, ಪ್ರಜಾಪ್ರಭುತ್ವ, ಲೋಕಾಯುಕ್ತದ ಮೇಲೆ ನಂಬಿಕೆಯಿಲ್ಲ – ಐವನ್ ಡಿಸೋಜ ಆರೋಪ
ಮಂಗಳೂರು : ಮೂಡಾ ನಿವೇಶನ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ತನಿಖೆಗೆ ಹಾಜರಾಗಬೇಕೆಂದು ಬೀದಿಗಿಳಿದು ಹೋರಾಟ ನಡೆಸಿದ್ದ ಬಿಜೆಪಿ ಸಿಎಂ ಲೋಕಾಯುಕ್ತದ ಮುಂದೆ ಹಾಜರಾಗಿ ತನಿಖೆ ಎದುರಿಸಿದ ಬಳಿಕ ತನ್ನ ವರಸೆ ಬದಲಿಸಿ ಅದೊಂದು ಐವಾಷ್, ನಾಟಕ, ಬಿ-ರಿಪೋರ್ಟ್ ಹಾಕುವ ತಂತ್ರ ಎಂದು ಹೇಳಲಾರಂಭಿಸಿದೆ. ಇದನ್ನೆಲ್ಲಾ ನೋಡುವಾಗ ಬಿಜೆಪಿಗೆ ಸರಕಾರಿ ತನಿಖಾ ಸಂಸ್ಥೆಗಳ ಮೇಲೆ, ಪ್ರಜಾಪ್ರಭುತ್ವ, ಲೋಕಾಯುಕ್ತದ ಮೇಲೆ ನಂಬಿಕೆಯಿಲ್ಲ ಎಂದೆನ್ನಿಸುತ್ತದೆ ಎಂದು ಎಂಎಲ್ಸಿ ಐವನ್ ಡಿಸೋಜ ಆರೋಪಿಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಹೈಕೋರ್ಟ್ ನ್ಯಾಯ ತೀರ್ಮಾನವನ್ನು ಸ್ವೀಕರಿಸಿದವರು ಯಾರು ಎಂದು ಬಿ.ವೈ.ವಿಜೇಂದ್ರ ಉತ್ತರಿಸಲಿ. ಆರೋಪ ಬಂದ ಮೇಲೆ ಬಿಟ್ಟು ಓಡುತ್ತಾರೆಂದು ನೀವು ಅಂದುಕೊಂಡಿರಿ. ಆದರೆ ತಪ್ಪು ಮಾಡಿದರೆ ಓಡುತ್ತಾರೆ. ಸಿಎಂ ಸಿದ್ದರಾಮಯ್ಯರಿಗೆ ತಮ್ಮ 40ವರ್ಷದ ರಾಜಕಾರಣದಲ್ಲಿ ಇಂದಿನವರೆಗೆ ಕಪ್ಪುಚುಕ್ಕೆ ಇಲ್ಲದೆ ಕೆಲಸ ಮಾಡಿರುವ ಆತ್ಮಸ್ಥೈರ್ಯವಿದೆ. 2014ರಲ್ಲಿ ಯಡಿಯೂರಪ್ಪರ ಮೇಲೆ ಇದೇ ರೀತಿ ಆರೋಪ ಕೇಳಿ ಬಂದಾಗ ಅವರು ರಾಜಿನಾಮೆ ನೀಡಿದ್ದರೆ, ಆ ಬಳಿಕ ಚಾರ್ಜ್ಶೀಟ್ ಫೈಲ್ ಮಾಡಿ ತನಿಖೆಗೆ ಹೋದಾಗ ತಾನೆ ಅವರು ರಾಜಿನಾಮೆ ಕೊಟ್ಟದ್ದು. ವಿಜೇಂದ್ರರ ಮೇಲೆ 14ಇಡಿ ಪ್ರಕರಣವಿದೆಯಲ್ಲ ಅದನ್ನೇಕೆ ತಾವು ಲೋಕಾಯುಕ್ತ, ಸಿಬಿಐ ತನಿಖೆ ನಡೆಸಲು ಹೇಳುತ್ತಿಲ್ಲ. ಇತ್ತೀಚೆಗೆ ಕುಮಾರಸ್ವಾಮಿಯವರು ಓರ್ವ ಕ್ಯಾಬಿನೆಟ್ ಮಿನಿಸ್ಟರ್ ಆಗಿ ಲೋಕಾಯುಕ್ತದ ಮುಂದೆ ಹಾಜರಾದರಲ್ಲ, ಅವರೇನು ರಾಜಿನಾಮೆ ಕೊಟ್ಟುಹೋದರೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಎಲ್ಲದರಲ್ಲೂ ಮೂಗು ತೂರಿಸುವುದು, ಎಲ್ಲವೂ ಸರಿಯಿಲ್ಲ ಎಂದು ಹೇಳುವುದು ವಿರೋಧಪಕ್ಷದ ಘನತೆ ಗೌರವಕ್ಕೆ ಕುಂದು ತರುತ್ತದೆ. ಬಿಜೆಪಿಯ ಆರೋಪ ಮತ್ತು ಮಾತುಗಳು ವಿರೋಧಪಕ್ಷದ ಗೌರವದ ಸ್ಥಾನಕ್ಕೆ ಚ್ಯುತಿ ತರುತ್ತಿದೆ ಎಂದು ಐವನ್ ಡಿಸೋಜ ಹೇಳಿದರು.
ಮಹಾರಾಷ್ಟ್ರ ಚುನಾವಣಾ ನಿಮಿತ್ತ ಸದ್ಯ ಪುಣೆಯಲ್ಲಿರುವ ಮಂಗಳೂರು ನಗರ ದಕ್ಷಿಣ ಶಾಸಕರಾದ ಡಿ.ವೇದವ್ಯಾಸ ಕಾಮತ್ರವರು ಕೇಂದ್ರ ನಾಗರಿಕ ವಿಮಾನಯಾನ ರಾಜ್ಯ ಸಚಿವರಾದ ಶ್ರೀ ಮುರಳೀಧರ್ ಮೊಹೋಲ್ರವರನ್ನು ಭೇಟಿಯಾಗಿ ಸ್ಥಗಿತಗೊಂಡಿರುವ ಮಂಗಳೂರು-ಪುಣೆ ನೇರ ವಿಮಾನಯಾನ ಪುನರ್ ಆರಂಭಿಸುವಂತೆ ಮನವಿ ಮಾಡಿದರು.
ಮಂಗಳೂರು-ಪುಣೆ ನಡುವೆ ಅನೇಕ ರೀತಿಯಲ್ಲಿ ನೇರ ಸಂಬಂಧಗಳಿದ್ದು ದಿನ ನಿತ್ಯ, ಸಾರ್ವಜನಿಕರು, ಉದ್ಯಮಿಗಳು, ಉದ್ಯೋಗಿಗಳು ಸೇರಿದಂತೆ ಅನೇಕಾರು ಜನರ ಓಡಾಟವಿದೆ. ಹಾಗಾಗಿ ಈ ಹಿಂದಿದ್ದ ನೇರ ವಿಮಾನ ಸೇವೆಯಿಂದ ಅನೇಕ ಪ್ರಯಾಣಿಕರಿಗೆ ಸಹಾಯವಾಗುತ್ತಿದ್ದು ಪ್ರಸ್ತುತ ಈ ಸೇವೆ ಸ್ಥಗಿತಗೊಂಡಿರುವುದರಿಂದ ಸಾರ್ವಜನಿಕರಿಗೆ ತೀವ್ರ ಅನಾನುಕೂಲತೆ ಉಂಟಾಗಿದೆ. ಈ ಬಗ್ಗೆ ಈ ಹಿಂದೆ ಪುಣೆ ಹಾಗೂ ಮಂಗಳೂರಿನ ಉದ್ಯಮಿಗಳು ಮನವಿ ಸಲ್ಲಿಸಿದ್ದು ಅದರಂತೆ ವಿಶೇಷ ಆದ್ಯತೆಯ ಮೇರೆಗೆ ಮನವಿಯನ್ನು ಪರಿಗಣಿಸಿ ವಿಮಾನಯಾನವನ್ನು ಪುನರ್ ಆರಂಭಿಸುವಂತೆ ಶಾಸಕರು ಮನವಿ ಮಾಡಲಾಗಿ, ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಹೋಟೆಲ್ ಉದ್ಯಮಿಗಳ ಸಂಘದ ಸಂತೋಷ್ ಶೆಟ್ಟಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಫಳ್ನೀರ್ ವಾಸ್ ಲೇನ್ ರೋಗ ಉತ್ಪತ್ತಿ ತಾಣ, ಸ್ಥಳೀಯರಿಂದ ಪಾಲಿಕೆಯೆದುರು ಪ್ರತಿಭಟನೆಯ ಎಚ್ಚರಿಕೆ
ಮಂಗಳೂರು : ಫಳ್ನೀರ್ ವಾಸ್ ಲೇನ್ ಪರಿಸರ ನಿವಾಸಿಗಳು ಮನಪಾಗೆ ಅತ್ಯಧಿಕ ತೆರಿಗೆ ಪಾವತಿಸಿದರೂ ಮನಪಾ ನಿರ್ಲಕ್ಷ್ಯದಿಂದಾಗಿ ಸೊಳ್ಳೆ ಮತ್ತು ರೋಗ ಉತ್ಪತ್ತಿ ಕೇಂದ್ರ ಆಗಿದ್ದು ಇಲ್ಲಿನ ಜನರ ವಾಸಿಸಲೂ ಕಷ್ಟಪಡುತ್ತಿದ್ದಾರೆ. ತಕ್ಷಣ ಸಮಸ್ಯೆ ಬಗೆಹರಿಸದಿದ್ದಲ್ಲಿ ಮನಪಾ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.
ಇಲ್ಲಿನ ಸಮಸ್ಯೆ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಮಹಮ್ಮದ್ ಅಫ್ತಾರ್ ಹುಸೈನ್, ಈ ಭಾಗದಲ್ಲಿ ಕಳೆದ ಐದು ವರ್ಷಗಳ ಹಿಂದೆ ಒಳಚರಂಡಿಯ ಹೂಳು ತೆಗೆದು ರಸ್ತೆ ಬದಿ ಹಾಕಲಾಗಿದ್ದು ಇನ್ನೂ ತೆರವುಗೊಳಿಸಿಲ್ಲ. ಒಂದೆಡೆ ಕಂಕನಾಡಿ ಮಾರ್ಕೆಟ್ನ ತ್ಯಾಜ್ಯ ನೀರು, ಇನ್ನೊಂದೆಡೆ ಸ್ಥಳೀಯ ಪ್ಲಾಟ್ಗಳ ತ್ಯಾಜ್ಯ ನೀರು ಇಲ್ಲಿನ ಚರಂಡಿಯಲ್ಲಿ ಹರಿದು ಬರುವ ಕಾರಣ ದುರ್ನಾತ ಮತ್ತು ಸೊಳ್ಳೆ ಕಾಟದಿಂದಾಗಿ ಪರಿಸರದ ನಿವಾಸಿಗಳ ನಿದ್ದೆಗೆಡಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಬ್ದುಲ್ ಖಾದರ್ ಖೈಝರ್ ಮಾತನಾಡಿ, ನಾವು ಅತ್ಯಧಿಕ ತೆರಿಗೆ ಪಾವತಿಸಿದರೂ ಹೆಚ್ಚಿನ ಸಮಸ್ಯೆ ಎದುರಿಸುವಂತಾಗಿದೆ. ಇಲ್ಲಿನ ಆಸ್ಪತ್ರೆ ಮುಂಭಾಗದ ರಸ್ತೆಯ ಇಕ್ಕೆಲಗಳಲ್ಲಿ ವಾಹನ ನಿಲುಗಡೆ ಮಳೆ ನೀರು ಹರಿಯಬೇಕಾದ ಚರಂಡಿಯಲ್ಲಿ ಅಪಾರ್ಟ್ಮೆಂಟ್ಗಳ ಕೊಳಚೆ ನೀರು ಹರಿದು ಬರುತ್ತಿದೆ. ಇದರಿಂದಾಗಿ ಈ ಭಾಗದಲ್ಲಿ ವಾಸಿಸುವುದೇ ಕಷ್ಟ ಎನಿಸಿದೆ. ಸ್ಥಳೀಯ ಜನಪ್ರತಿನಿಧಿಗೆ ಹೇಳಿದರೂ ಯಾವುದೇ ಪ್ರಯೋಜನ ಆಗಿಲ್ಲ. ಐದು ವರ್ಷಗಳಿಂದ ಸಮಸ್ಯೆ ಇದ್ದು ರಸ್ತೆ ಕಾಮಗಾರಿ ಅರ್ಧದಲ್ಲಿ ನಿಲ್ಲಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಾ. ವಸಂತ ಶೆಟ್ಟಿ ಮಾತನಾಡಿ, ಈ ಭಾಗದಲ್ಲಿ ಸ್ಮಾರ್ಟ್ ಸಿಟಿ ರಸ್ತೆ ಯೋಜನೆಯಡಿ ಮಾಡಿರುವ ರಸ್ತೆ ಅಭಿವೃದ್ಧಿ ವಾಹನಗಳ ನಿಲುಗಡೆಗಾಗಿಯೇ ಮಾಡಿದಂತಿದೆ. ತುರ್ತು ಪರಿಸ್ಥಿತಿಯಲ್ಲಿ ಆ್ಯಂಬುಲೆನ್ಸ್ ಸಂಚರಿಸಲೂ ಪರದಾಟ ನಡೆಸಬೇಕಾದ ಪರಿಸ್ಥಿತಿ ಇದೆ. ಸೊಳ್ಳೆ ಕಾಟ, ದುರ್ವಾಸನೆಗೆ ನಾವು ಕಂಗೆಟ್ಡಿದ್ದು ಸ್ಥಳೀಯ ಜನಪ್ರತಿನಿಧಿಗಳು ಇತ್ತ ತಿರುಗಿಯೂ ನೋಡುತ್ತಿಲ್ಲ ಎಂದು ಆರೋಪಿಸಿದರು.
ಅರಣ್ಯ ಇಲಾಖೆಯ ಅಧಿಕಾರಿ ಶಾಹನವಾಝ್, ಮಹಮ್ಮದ್ ಕುಂಞಿ, ಡೈಡನ್ ಡಿಸೋಜ ಇನ್ನಿತರರು ಉಪಸ್ಥಿತರಿದ್ದರು.
ಮಂಗಳೂರು : “ಸುಮಾರು 5 ವರ್ಷಗಳ ಹಿಂದೆ ಸ್ಥಾಪಿಸಿರುವ ಅಸ್ತ್ರ ಅನ್ನುವ ಸಂಸ್ಥೆಯು ಇಂದು ಉದ್ಯಮದ ಜೊತೆಗೆ ಯುವ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಅನೇಕ ಕ್ರಿಕೆಟ್, ಕಬಡ್ಡಿ ಇನ್ನಿತರ ಕ್ರೀಡೆಗಳಲ್ಲಿ ತೊಡಗಿಸಿಕೊಂಡಿದ್ದು ತಮ್ಮ ಸಂಸ್ಥೆಯ ಲಾಭದ ಒಂದಂಶವನ್ನು ಸಮಾಜ ಸೇವೆಗಾಗಿ ಬಳಸುತ್ತಾ ಬಂದಿದ್ದೇವೆ. ನಮ್ಮ ಸಂಸ್ಥೆಯು 5ನೇ ವರ್ಷ ಪೂರೈಸಿರುವ ಈ ದಿನಗಳಲ್ಲಿ ಸಮಾಜಕ್ಕಾಗಿ ವಿಶೇಷ ಕೆಲಸವನ್ನು ಮಾಡಬೇಕು ಎನ್ನುವ ನಿಟ್ಟಿನಲ್ಲಿ ಕಡುಬಡವರಿಗಾಗಿ ಪ್ರಾಣಾಸ್ತ್ರ ಎಂಬ ಟ್ರಸ್ಟ್ ಮೂಲಕ ಈ ಸಂಸ್ಥೆ ಸಹಕರಿಸಲಿದೆ, ಇದರ ಜೊತೆಗೆ ಟ್ರಸ್ಟ್ ಹೆಸರಿನಲ್ಲಿ ನ.14ರಂದು ಉಚಿತ ಅಂಬ್ಯುಲೆನ್ಸ್ ವ್ಯವಸ್ಥೆಯನ್ನು ಮಾಡಿದ್ದೇವೆ“ ಎಂದು ಸಂಸ್ಥೆಯ ಸಿಇಒ ಲಂಚುಲಾಲ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
“ಇದೇ ಸಂದರ್ಭದಲ್ಲಿ ಸೌಹಾರ್ದಯುತವಾಗಿ ಹಿಂದೂ ಮುಸ್ಲಿಂ ಕ್ರೈಸ್ತ ಧರ್ಮದ ಮೂರು ಬಡ ಕುಟುಂಬದ ಜೋಡಿಗೆ ಸಾಮೂಹಿಕ ಮದುವೆಯನ್ನು ಮಾಡಲು ನಿರ್ಧರಿಸಲಾಗಿದೆ. ಕಡುಬಡವರ ಮದುವೆಯ ಸಂಪೂರ್ಣ ಖರ್ಚು ಜೊತೆಗೆ ಜೀವನ ನಿರ್ವಹಣೆಗೆ 50000 ರೂ. ಕೊಡಲಾಗುವುದು, ಹಿಂದೂ ಜೋಡಿ ಮುಂದೆ ಬಂದಿದ್ದು ಮುಸ್ಲಿಂ, ಕ್ರೈಸ್ತ ಜೋಡಿ ಅವರಾಗಿಯೇ ಮುಂದೆ ಬಂದಲ್ಲಿ ಖುಷಿಯ ವಿಚಾರ. ಬಡವರ ಹಿತಕ್ಕಾಗಿ ಸಮಾಜ ಸೇವೆಗಾಗಿ ಮಹತ್ತರ ಕಾರ್ಯದಲ್ಲಿ ನಮ್ಮ ಸಂಸ್ಥೆಯು ತೊಡಗಿಕೊಂಡಿದ್ದು ಇದಕ್ಕೆ ಜನರು ಸಹಕಾರ ನೀಡಬೇಕು“ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಪ್ರಕಾಶ್ ಶೆಟ್ಟಿ ಧರ್ಮನಗರ, ಯತೀಶ್ ಪೂಜಾರಿ, ಚರಣ್ ರಾಜ್ ಬಂದ್ಯೋಡು ಮತ್ತಿತರರು ಉಪಸ್ಥಿತರಿದ್ದರು
ಮಾದಕ ವಸ್ತು ಸಾಗಾಟ ಮತ್ತು ಮಾರಾಟ ಪ್ರಕರಣದಲ್ಲಿ ವಿದೇಶಿ ಪ್ರಜೆ ಸೇರಿ 6 ಮಂದಿ ಸೆರೆ
ಮಂಗಳೂರು : ನಗರದ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಣಿಜ್ಯ ಪ್ರಮಾಣದ ಮಾದಕ ವಸ್ತುವನ್ನು ಮಾರಾಟ ಮತ್ತು ಸಾಗಾಟ ಮಾಡಿದ ಆರೋಪಿತರನ್ನು ಪಣಂಬೂರು ಪೊಲೀಸರು ದಸ್ತಗಿರಿ ಮಾಡಿ ಮಾದಕ ವಸ್ತುಗಳನ್ನು ಮತ್ತು ಸ್ಕೂಟರನ್ನು ಸ್ವಾಧೀನಪಡಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೆಐಓಸಿಎಲ್ ಹಿಂಬಾಗದ ಸಮುದ್ರ ಕಡೆ ಹೋಗುವ ಮಾರ್ಗದಲ್ಲಿ ಇಬ್ಬರು ಯುವಕರು ಸ್ಕೂಟರ್ ನಿಲ್ಲಿಸಿಕೊಂಡು ಮಾದಕ ವಸ್ತು ವಶದಲ್ಲಿ ಹೊಂದಿ ಮಾರಾಟ ಮಾಡುತ್ತಿರುವ ಬಗ್ಗೆ ಪಣಂಬೂರು ಠಾಣಾ ಪಿಎಸ್ಐ ಶ್ರೀಕಲಾ ಕೆ.ಟಿ ರವರಿಗೆ ಬಾತ್ಮೀದಾರರಿಂದ ದೊರೆತ ಖಚಿತ ಮಾಹಿತಿಯಂತೆ ಮಂಗಳೂರು ನಗರ ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತಕರಾದ ಶ್ರೀಕಾಂತ್ ಕೆ ರವರ ನಿರ್ದೆಶನದಂತೆ ಶ್ರೀಕಲಾ ಕೆ.ಟಿ, ಪಿ.ಎಸ್.ಐ ರವರು ತಮ್ಮ ಸಿಬ್ಬಂದಿಗಳ ಜೊತೆ 16:05 ಗಂಟೆಗೆ ಕೆ ಐ ಸಿ ಓ ಎಲ್ ಹಿಂಬಾಗದ ಸಮುದ್ರ ಕಡೆ ಹೋಗುವ ಮಾರ್ಗದಲ್ಲಿ ಆರೋಪಿತರಾದ 1) ಚಂದನ್ 2) ಶರತ್ ಎಂಬವರನ್ನು ದಸ್ತಗಿರಿ ಮಾಡಿ ಮಾದಕ ವಸ್ತು ಮಾರಾಟ ಮಾಡಲು ಸಹಕರಿಸಿದ ಇತರ ಆರೋಪಿಗಳಾದ 3) ಮಧುಸೂಧನ ಕೊಂಚಾಡಿ 4)ಧನುಷ್ ಆಕಾಶ್ ಭವನ, 5) ಮುಖೇಶ್ ದೇರೆಬೈಲ್ ನೈಜಿರಿಯಾ ದೇಶದ ಪ್ರಜೆ 6) ಮೈಕಲ್ ಬಾಲಾಜಿ@ ಅಝಬೈಕ್ ಜಾನಿ ಎಂಬವರನ್ನು ದಸ್ತಗಿರಿ ಮಾಡಿ ಆರೋಪಿಗಳ ವಶದಲ್ಲಿದ್ದ 11 ಗ್ರಾಮ್ ಕೋಕೇನ್ ಮತ್ತು ಪ್ಯಾಕೇಟ್ ಸಮೇತ 30 ಗ್ರಾಂ ತೂಕದ ಎಮ್ಡಿಎಮ್ಎ 91,000 ರೂಪಾಯಿಗಳಷ್ಟು, ಒಟ್ಟು ಮೌಲ್ಯದ ಮಾದಕ ವಸ್ತುವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಆರೋಪಿತರು ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ಮಾದಕ ವಸ್ತುಗಳನ್ನು ಮಾರಾಟ ಮಾಡುವ ಸಲುವಾಗಿ ಉಪಯೋಗಿಸುತ್ತಿದ್ದ KA-02-KX-0616 ನಂಬ್ರದ ಸ್ಕೂಟರ್ ಮತ್ತು ಒಟ್ಟು 09 ಮೊಬೈಲ್ಗಳನ್ನು ಸ್ವಾಧೀನಪಡಿಸಲಾಗಿದೆ. ಆರೋಪಿತರ ಪೈಕಿ 5 ಜನ ಮಂಗಳೂರಿನ ನಿವಾಸಿಗಳಾಗಿದ್ದು, ಒಬ್ಬ ಆರೋಪಿ ನೈಜೀರಿಯಾ ದೇಶದವನಾಗಿರುತ್ತಾನೆ. ಆರೋಪಿಗಳೆಲ್ಲರೂ ಕ್ಯಾಟರಿಂಗ್, ಪೈಂಟಿಂಗ್ ಸೇರಿದಂತೆ ಖಾಸಗಿ ಕೆಲಸ ಮಾಡಿಕೊಂಡಿರುವುದಾಗಿದೆ. ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅರೋಪಿತರಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.
ಈ ಪತ್ತೆ ಕಾರ್ಯವನ್ನು ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್, ಐ.ಪಿ.ಎಸ್ ರವರ ಮಾರ್ಗದರ್ಶನದಂತೆ, ಕಾನೂನು & ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ದಾರ್ಥ ಗೋಯಲ್ ಐ.ಪಿ.ಎಸ್ ಮತ್ತು ಅಪರಾಧ & ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ನಿರ್ದೇಶನದಂತೆ, ಮಂಗಳೂರು ಉತ್ತರ ವಿಭಾಗದ ಎ.ಸಿ.ಪಿ. ಶ್ರೀಕಾಂತ್ ಕೆ ರವರ ಮಾರ್ಗದರ್ಶನದಲ್ಲಿ ಪಣಂಬೂರು ಠಾಣಾ ಪೊಲೀಸ್ ನಿರೀಕ್ಷಕರಾದ ಮೊಹಮ್ಮದ್ ಸಲೀಂ ಅಬ್ಬಾಸ್ ರವರ ನೇತೃತ್ವದಲ್ಲಿ ಉಪ ನಿರೀಕ್ಷಕರಾದ ಶ್ರೀಕಲಾ ಕೆ .ಟಿ ಮತ್ತು ಅಪರಾಧ ವಿಭಾಗದ ಸಿಬ್ಬಂದಿಗಳಾದ ಹೆಚ್.ಸಿಗಳಾದ ಪ್ರೇಮಾನಂದ, ಸತೀಶ್ ಎಮ್ ಆರ್, ಸಯ್ಯದ್ ಇಂತಿಯಾಜ್, ಚೆರಿಯನ್ ಕೆ, ಜೇಮ್ಸ್ ಸಿಪಿಸಿಗಳಾದ ಶಶಿಕುಮಾರ್, ರಾಕೇಶ್ ಎಲ್ ಎಮ್, ಮಂಜುನಾಥ ಹಾಗೂ ಮಂಗಳೂರು ನಗರ ಉತ್ತರ ಉಪ ವಿಭಾಗದ ANTI DRUG SQUAD ನ ಪಿಎಸ್ಐ ರಾಘವೇಂದ್ರ ಎಮ್ ನಾಯ್ಕ ಮತ್ತು ಸಿಬ್ಬಂದಿಗಳಾದ ಸುನೀಲ್ ಹೆಚ್ ಎಮ್, ವಿನಾಯಕ್, ಬಸವರಾಜ್ ರವರು ಭಾಗವಹಿಸಿದ್ದರು.
ಮಂಗಳೂರು: ವಿಧಾನಪರಿಷತ್ ಉಪಚುನಾವಣೆಯ ಮತಗಳ ಎಣಿಕೆ ಇಂದು ನಗರದ ಸಂತ ಅಲೋಷಿಯಸ್ ಪದವಿ ಪೂರ್ವ ಕಾಲೇಜಿನಲ್ಲಿ ಆರಂಭವಾಗಿದೆ.
ಮತ ಎಣಿಕೆಗೆ ಒಂದು ಕೊಠಡಿ ವ್ಯವಸ್ಥೆ ಮಾಡಲಾಗಿದ್ದು 12 ಮೇಜುಗಳಲ್ಲಿ ಮತಗಳ ಎಣಿಕೆ ನಡೆಯಲಿದೆ. ಪ್ರತಿ ಮೇಜಿಗೆ ಒಬ್ಬ ಎಣಿಕೆ ಮೇಲ್ವಿಚಾರಕ, ಒಬ್ಬರು ಸಹಾಯಕರು ಮತ್ತು ಒಬ್ಬರು “ಡಿ” ಗ್ರೂಪ್ ಸಿಬ್ಬಂದಿ ನಿಯೋಜಿಸಲಾಗಿದೆ. ಒಟ್ಟು 392 ಮತ ಪೆಟ್ಟಿಗೆಗಳನ್ನು ಪ್ರತಿ ಟೇಬಲ್ಗೆ 33ರಂತೆ ಹಂಚಿಕೆ ಮಾಡಲಾಗುತ್ತದೆ.
ಮೊದಲ ಹಂತದಲ್ಲಿ ಒಟ್ಟು ಮತಗಳ ಎಣಿಕೆ ಮತ್ತು ಮಿಶ್ರಣ ಕಾರ್ಯ, ಎರಡನೇ ಹಂತದಲ್ಲಿ ಮತಪತ್ರಗಳ ಸಿಂಧುತ್ವ ಪರಿಶೀಲನೆ ಮಾಡಿ ನಂತರ ಒಂದನೇ ಪ್ರಾಶಸ್ತ್ಯದ ಮತಗಳ ಎಣಿಕೆ ಮಾಡಲಾಗುತ್ತದೆ. ನಿಗದಿತ ಕೋಟವನ್ನು ಮೊದಲ ಪ್ರಾಶಸ್ತ್ಯದಲ್ಲಿ ಪಡೆದ ಅಭ್ಯರ್ಥಿಯ ಆಯ್ಕೆ ಘೋಷಿಸಲಾಗುತ್ತದೆ. ಅ.21 ರಂದು ನಡೆದ ಚುನಾವಣೆಯಲ್ಲಿ ಒಟ್ಟು 392 ಮತಗಟ್ಟೆಗಳಲ್ಲಿ 5,906 ಮತದಾರರು ಮತ ಚಲಾಯಿಸಿದ್ದಾರೆ.
ಉಡುಪಿ : ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ನಡೆದ ವಿಧಾನ ಪರಿಷತ್ ಉಪ ಚುನಾವಣೆಯ ಮತ ಎಣಿಕೆ ಅಕ್ಟೋಬರ್ 24ರಂದು ಮಂಗಳೂರಿನ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದ್ದು, ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ. ಮತ ಎಣಿಕೆಗೆ ಒಂದು ಕೊಠಡಿ ವ್ಯವಸ್ಥೆ ಮಾಡಲಾಗಿದ್ದು, 12 ಮೇಜುಗಳಲ್ಲಿ ಎಣಿಕೆ ನಡೆಯಲಿದೆ. ಪ್ರತಿ ಮೇಜಿಗೆ ಒಬ್ಬ ಎಣಿಕೆ ಮೇಲ್ವಿಚಾರಕ, ಒಬ್ಬರು ಸಹಾಯಕರು ಮತ್ತು ಒಬ್ಬರು ‘ಡಿ’ ಗ್ರೂಪ್ ಸಿಬಂದಿ ಇರಲಿದ್ದಾರೆ. ಒಟ್ಟು 392 ಮತ ಪೆಟ್ಟಿಗೆಗಳನ್ನು ಪ್ರತಿ ಟೇಬಲ್ಗೆ 33ರಂತೆ ಹಂಚಿಕೆ ಮಾಡಲಾಗುತ್ತದೆ.
ಮೊದಲು ಹಂತದಲ್ಲಿ ಒಟ್ಟು ಮತಗಳ ಎಣಿಕೆ ಮತ್ತು ಮಿಶ್ರಣ ಕಾರ್ಯ, ಎರಡನೇ ಹಂತದಲ್ಲಿ ಮತಪತ್ರಗಳ ಸಿಂಧುತ್ವ ಪರಿಶೀಲನೆ ಮಾಡಿ ಅನಂತರ ಒಂದನೇ ಪ್ರಾಶಸ್ತ್ರದ ಮತಗಳ ಎಣಿಕೆ ಮಾಡಲಾಗುತ್ತದೆ.
ನಿಗದಿತ ಕೋಟವನ್ನು ಮೊದಲ ಪ್ರಾಶಸ್ತ್ರದಲ್ಲಿ ಪಡೆದ ಅಭ್ಯರ್ಥಿಯ ಆಯ್ಕೆಯನ್ನು ಘೋಷಿಸಲಾಗುವುದು. ಅಕ್ಟೋಬರ್ 21ರಂದು ನಡೆದ ಚುನಾವಣೆಯಲ್ಲಿ ಒಟ್ಟು 392 ಮತಗಟ್ಟೆಗಳಲ್ಲಿ 5,906 ಮತದಾರರು ಮತ ಚಲಾಯಿಸಿದ್ದರು.
ಮಂಗಳೂರು : ಎನ್ಡಿಪಿಎಸ್ ಆ್ಯಕ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಪಡೆದ ಬಳಿಕ 4ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆಸಾಮಿಯನ್ನು ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲ, ಒಳಪೇಟೆಯ, ಟಿ.ಸಿ.ರಸ್ತೆಯ ನಿವಾಸಿ ಸಲೀಂ ಅಲಿಯಾಸ್ ಮೊಹಮ್ಮದ್ ಸಲೀಂ(38) ಬಂಧಿತ ಆರೋಪಿ.
ಇಎನ್ಸಿ ಠಾಣೆಯಲ್ಲಿ ಕಲಂ : 8©️,20(b) (ii) (a) NDPS ACT ಪ್ರಕರಣಕ್ಕೆ ಸಂಬಂಧಿಸಿದ 2019ರಲ್ಲಿ ಈತನನ್ನು ದಸ್ತಗಿರಿ ಮಾಡಲಾಗಿತ್ತು. ನ್ಯಾಯಾಲಯ ಈತನಿಗೆ ಜಾಮೀನು ನೀಡಿತ್ತು. ಬಳಿಕ ಈತನು ಇಲ್ಲಿಯವರೆಗೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು.
ಅಕ್ಟೋಬರ್ 22ರಂದು ಸೆನ್ ಕ್ರೈಂ ಪೊಲೀಸ್ ಠಾಣಾ ಸಿಬ್ಬಂದಿ ಆತನನ್ನು ಪತ್ತೆ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.