Malpe
ಉಡುಪಿ : ಮಲ್ಪೆ ಸಹಿತ ವಿವಿಧ ಕಡೆಗಳಲ್ಲಿ ಬಂಧಿತರಾಗಿ ಪೊಲೀಸ್ ಕಸ್ಟಡಿಯಲ್ಲಿದ್ದವರು ಸಹಿತ ಒಟ್ಟು ಎಂಟು ಮಂದಿ ಅಕ್ರಮ ಬಾಂಗ್ಲಾ ವಲಸಿಗರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅ.12ರಂದು ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಕೀಂ ಅಲಿ, ಸುಜೋನ್ ಎಸ್.ಕೆ. ಫಾರೂಕ್, ಇಸ್ಮಾಯಿಲ್ ಎಸ್.ಕೆ., ಕರೀಂ ಎಸ್.ಕೆ., ಸಲಾಂ ಎಸ್.ಕೆ., ರಾಜಿಕುಲ್ ಎಸ್.ಕೆ. ಅವರನ್ನು ಪೊಲೀಸರು ಬಂಧಿಸಿದ್ದರು.
ಇವರನ್ನು ಅ.14ರಂದು ಪೊಲೀಸರು ಐದು ದಿನಗಳ ಕಾಲ ಕಸ್ಟಡಿಗೆ ಪಡೆದು ವಿಚಾರಣೆ ಮಾಡಿದ್ದರು. ಇವರು ನೀಡಿದ ಮಾಹಿತಿ ನೆಲೆಯಲ್ಲಿ ಕಾರ್ಕಳದಲ್ಲಿ ಅ.17ರಂದು ಮತ್ತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಕಾರ್ಕಳದಲ್ಲಿ ಮುಹಮ್ಮದ್ ಇಮಾಂ ಶೇಖ್ ಹಾಗೂ ಮುಹಮ್ಮದ್ ರಿಮುಲ್ ಇಸ್ಲಾಮ್ ಅವರನ್ನು ಹಾಗೂ ಅ.18ರಂದು ಸಂತೆಕಟ್ಟೆಯಲ್ಲಿ ಮುಹಮ್ಮದ್ ಜಹಾಂಗೀರ್ ಆಲಂ ಎಂಬಾತನನ್ನು ಬಂಧಿಸಲಾಗಿತ್ತು.
ಅಕ್ರಮ ಬಾಂಗ್ಲಾ ವಲಸಿಗರು – ಪೊಲೀಸ್ ಇಲಾಖೆ, ಕರಾವಳಿ ಕಾವಲುಪಡೆಯಿಂದ ತೀವ್ರ ತಪಾಸಣೆ
ಉಡುಪಿ : ಮಲ್ಪೆಯಲ್ಲಿ 7 ಮಂದಿ ಬಾಂಗ್ಲಾ ಅಕ್ರಮ ವಲಸಿಗರನ್ನು ಪೊಲೀಸರು ಬಂಧಿಸಿದ ಬಳಿಕ ಜಿಲ್ಲಾ ಪೊಲೀಸ್ ಇಲಾಖೆ, ಕರಾವಳಿ ಕಾವಲು ಪಡೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ.

ಜಿಲ್ಲೆಯ ವಿವಿಧ ಬಂದರು, ಕಟ್ಟಡ ನಿರ್ಮಾಣ ವಲಯ, ಫಿಶ್ಮೀಲ್ ಸಹಿತ ಹೊರ ರಾಜ್ಯದ ಕಾರ್ಮಿಕರು ಹೆಚ್ಚೆಚ್ಚು ಕಾರ್ಯನಿರ್ವಹಿಸುವ ಕಡೆಗಳಲ್ಲಿ ತೀವ್ರ ವಿಚಾರಣೆ ಹಾಗೂ ಮಾಹಿತಿ ಸಂಗ್ರಹ ಆರಂಭಿಸಿದ್ದಾರೆ.
ತಮ್ಮ ವ್ಯಾಪ್ತಿಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರ ರಾಜ್ಯದ ಕಾರ್ಮಿಕರ ವಿವರಗಳನ್ನು ತತ್ಕ್ಷಣವೇ ಸಲ್ಲಿಸಬೇಕು. ಎಷ್ಟು ಸಮಯದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಯಾವ ರಾಜ್ಯದಿಂದ ಬಂದಿದ್ದಾರೆ. ಕರೆದುಕೊಂಡು ಬಂದಿರುವ ಏಜೆನ್ಸಿ ಹೀಗೆ ಹಲವು ಮಾಹಿತಿ ಸೇರಿದ ಗೂಗಲ್ ಫಾರ್ಮೆಟ್ ಭರ್ತಿ ಮಾಡಿ ಕಳುಹಿಸುವಂತೆ ಎಲ್ಲ ಸಂಸ್ಥೆಗಳಿಗೆ ಕರಾವಳಿ ಕಾವಲು ಪಡೆಯಿಂದ ಸಂದೇಶ ರವಾನಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಹೊರ ರಾಜ್ಯದ ಕಾರ್ಮಿಕರು ಎಷ್ಟಿದ್ದಾರೆ ಎಂಬ ನಿಖರ ಮಾಹಿತಿ ಕಾರ್ಮಿಕ ಇಲಾಖೆಯಲ್ಲಿ ಇಲ್ಲ. ಕಾರ್ಮಿಕ ಇಲಾಖೆ ಕೂಡ ಈ ಬಗ್ಗೆ ಹೆಚ್ಚು ಗಂಭೀರವಾದಂತಿಲ್ಲ. ಕರ್ನಾಟಕ ಹಾಗೂ ಜಿಲ್ಲೆಯ ಸಂಘಟಿತ, ಅಸಂಘಟಿತ ಕಾರ್ಮಿಕರ ಮಾತ್ರ ಮಾಹಿತಿ ಇಲಾಖೆ ಹೊಂದಿದೆ. ಆದರೆ ಹೊರ ರಾಜ್ಯದ ಎಷ್ಟು ಕಾರ್ಮಿಕರು ಜಿಲ್ಲೆಗೆ ಬರುತ್ತಿದ್ದಾರೆ. ಅದರಲ್ಲಿ ಎಷ್ಟು ಮಂದಿ ಮರಳಿದ್ದಾರೆ, ಬಂದವರು ಎಲ್ಲಿದ್ದಾರೆ ಎಂಬ ಬಗ್ಗೆ ಪೂರ್ಣ ಮಾಹಿತಿ ಇಲಾಖೆಯಲ್ಲಿಲ್ಲ. ಸೇವಾ ಸಿಂಧು ಮೂಲಕ ಅಪ್ಲೋಡ್ ಮಾಡಲು ಸೂಚಿಸಿ ಸುಮ್ಮನಾಗಿದ್ದಾರೆ. ಆದರೆ ಅಪ್ಲೋಡ್ ಮಾಡಿದವರ ಸಂಖ್ಯೆ ತೀರಾ ಕಡಿಮೆಯಿದೆ.
ಈತನಕ ಜಿಲ್ಲೆಯಲ್ಲಿ 10 ಮಂದಿ ವಲಸಿಗರ ಪತ್ತೆಯಾಗಿದ್ದು ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ. ಜಿಲ್ಲೆಯಾದ್ಯಂತ ಬಾಂಗ್ಲಾ ಅಕ್ರಮ ವಲಸಿಗರು ಹರಡಿಕೊಂಡರುವ ಸಾಧ್ಯತೆ ಬಗ್ಗೆಯೂ ತನಿಖೆ ಚುರುಕುಗೊಂಡಿದೆ.
ಉಡುಪಿ : ಮಲ್ಪೆ ಕೆಮ್ಮಣ್ಣು ಕುದ್ರು ನೆಕ್ಸ್ಟ್ ಪಡು ತೊನ್ಸೆಯಲ್ಲಿ ಕೊಳೆತ ರೀತಿಯಲ್ಲಿ ವ್ಯಕ್ತಿಯ ಶವ ಪತ್ತೆ ಆಗಿದೆ.

ಮೃತರನ್ನು ಆತ್ರಾಡಿ ನಿವಾಸಿ ಬಾಲು ನಾಯ್ಕ್ ಎಂದು ಗುರುತಿಸಲಾಗಿದೆ.
ಶವವನ್ನು ಮೇಲಕ್ಕೆತ್ತಲು ಅಲ್ವಿನ್, ಹರಿದಾಸ್, ಸತ್ಯ ನಿಖಿಲ್, ಸಹಕರಿಸಿದರು. ಸಮಾಜ ಸೇವಕ ನಿತ್ಯಾನಂದ ಒಳಕಾಡು ಕೊಳೆತ ಶವವನ್ನು ಜಿಲ್ಲಾಸ್ಪತ್ರೆಗೆ ಸಾಗಿಸುವಲ್ಲಿ ಇಲಾಖೆಗೆ ನೇರವಾದರು.
ಮಲ್ಪೆ ಪೊಲೀಸ್ ಠಾಣೆಯ ಎಸ್.ಐ. ವಿಶ್ವನಾಥ್, ನಾಗರಾಜ್ ಸ್ಥಳಕ್ಕೆ ಬಂದು ಮಹಜರು ಮಾಡಿದರು.
ಮಲ್ಪೆ : ಮುಳುಗುತಜ್ಞ, ಸಾಮಾಜಿಕ ಕಾರ್ಯಕರ್ತ ಈಶ್ವರ್ ಮಲ್ಪೆ ಅವರ ಇಬ್ಬರು ಮಕ್ಕಳ ಚಿಕಿತ್ಸೆಯನ್ನು ಉಚಿತವಾಗಿ ನೀಡುವುದಾಗಿ ಕೇರಳ ರಾಜ್ಯದ ಸಂಘ, ಸಂಸ್ಥೆಯವರು ಮುಂದೆ ಬಂದಿದ್ದು, ಕೇರಳದ ಕೋಯಿಕ್ಕೋಡ್ನ ಮಲ್ಟಿ ಸ್ಪೆಶಾಲಿಟಿ ಮೈತ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಈಶ್ವರ್ ಮಲ್ಪೆ ಅವರ ಇಬ್ಬರು ಮಕ್ಕಳಾದ ಕಾರ್ತಿಕ್ (23), ಬ್ರಾಹ್ಮಿ (7) ಅನಾರೋಗ್ಯ ಪೀಡಿತರಾಗಿದ್ದು, ವೈದ್ಯಕೀಯ ಚಿಕಿತ್ಸೆಗಳಿಗೆ ಲಕ್ಷಾಂತರ ರೂ. ವ್ಯಯಿಸಬೇಕಿದೆ.
ಶಿರೂರಿನಲ್ಲಿ ಸಂಭವಿಸಿದ ಗುಡ್ಡ ಕುಸಿತದಲ್ಲಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದ ಅರ್ಜುನ್ ಮೃತ ದೇಹವನ್ನು ಪತ್ತೆ ಮಾಡಲು ಈಶ್ವರ್ ಮಲ್ಪೆ ತಂಡ ಮಹತ್ವದ ಪಾತ್ರ ವಹಿಸಿದ್ದರು. ಇದರಿಂದಾಗಿ ಇವರ ಬಗ್ಗೆ ಕೇರಳದಲ್ಲಿ ಅಭಿಮಾನ ಹೆಚ್ಚಾಗಿದ್ದು, ಕುಟುಂಬದ ಸಮಸ್ಯೆಯರಿತ ಅಲ್ಲಿನ ಸಂಘ ಸಂಸ್ಥೆಯವರು ಒಟ್ಟಾಗಿ ಕುಟುಂಬವನ್ನು ಕರೆಸಿಕೊಂಡಿದ್ದಾರೆ.
ಆಸ್ಪತ್ರೆಯಲ್ಲಿ ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದು, ಗುಣಮುಖರಾಗುವ ನಂಬಿಕೆ ಹೊಂದಿದ್ದೇವೆ. ಎಷ್ಟೇ ಖರ್ಚಾದರೂ ನಾವು ಭರಿಸುತ್ತೇವೆ ಎಂದು ಅಲ್ಲಿನ ಸಂಘ ಸಂಸ್ಥೆಯವರು ಅಭಿಮಾನ ತೋರಿದ್ದಾರೆ ಎಂದು ಈಶ್ವರ್ ತಿಳಿಸಿದ್ದಾರೆ.
ಉಡುಪಿ ಸಹಿತ ಕರಾವಳಿಯ ಸಂಘ ಸಂಸ್ಥೆಯವರು, ಸಾರ್ವಜನಿಕರು ಸಾಕಷ್ಟು ಸಹಕಾರ ನೀಡಿದ್ದಾರೆ. ಆದರೆ ಸರಕಾರದಿಂದ ಸಹಾಯ ದೊರೆತಿಲ್ಲ. ಮಕ್ಕಳ ಚಿಕಿತ್ಸೆಗಾಗಿ ಸದ್ಯಕ್ಕೆ ಕೇರಳದಲ್ಲಿದ್ದೇನೆ ಎಂದು ಈಶ್ವರ್ ತಿಳಿಸಿದ್ದಾರೆ.
ಮಲ್ಪೆ : ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನೆಲೆಸಿದ್ದ 7 ಮಂದಿ ಬಾಂಗ್ಲಾ ಪ್ರಜೆಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ಸಂದರ್ಭದಲ್ಲಿ 7 ಮಂದಿಯೂ ಕಟ್ಟಡ ಕಾರ್ಮಿಕರಾಗಿ ನೋಂದಣಿ ಮಾಡಿಕೊಂಡಿಲ್ಲ ಎನ್ನುವ ವಿಚಾರ ತಿಳಿದುಬಂದಿದೆ.
ಈ ಬಗ್ಗೆ ಕಾರ್ಮಿಕ ಇಲಾಖೆ ಅಧಿಕಾರಿಗಳಿಂದ ಪೊಲೀಸರು ಮಾಹಿತಿ ಕಲೆ ಹಾಕಿದ್ದು, ಕಟ್ಟಡ ಕಾರ್ಮಿಕರಾಗಿ ನೋಂದಣಿ ಮಾಡಿಲ್ಲ ಎಂದು ಕಾರ್ಮಿಕ ಇಲಾಖೆ ದೃಢಪಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಮನೆಯ ಮಾಲಕರು, ಕಟ್ಟಡ ಮಾಲಕರು ಸೇರಿದಂತೆ ಆರೋಪಿಗಳ ಸಂಪರ್ಕದಲ್ಲಿದ್ದವರ ಹೆಚ್ಚಿನ ವಿಚಾರಣೆ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ| ಕೆ. ಅರುಣ್ ತಿಳಿಸಿದ್ದಾರೆ.
ಮಲ್ಪೆ : ಉಡುಪಿಯ ಇತಿಹಾಸ ಪ್ರಸಿದ್ದ ಮಲ್ಪೆ ವಡಭಾಂಡೇಶ್ವರ ಶ್ರೀ ಬಲರಾಮ ದೇವಸ್ಥಾನಕ್ಕೆ ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ವೈ ವಿಜಯೆಂದ್ರ ಭೇಟಿ ನೀಡಿ ದೇವರ ದರ್ಶನ ಪಡೆದು, ದೇವಾಲಯದ ಸಮಗ್ರ ಜೀರ್ಣೋದ್ಧಾರವನ್ನು ನೋಡಿ ಪ್ರಶಂಸಿದರು.
ಇದೇ ಸಂದರ್ಭದಲ್ಲಿ ಶಾಸಕರಾದ ಯಶ್ಪಾಲ್ ಸುವರ್ಣ, ಹರೀಶ್ ಪೂಂಜ ಹಾಗೂ ಮಂಗಳೂರು ಎಂ.ಪಿ. ಕ್ಯಾ. ಬ್ರಿಜೇಶ್ ಚೌಟ ಹಾಗೂ ದೇವಾಲಯದ ಟಿ. ಶ್ರೀನಿವಾಸ ಭಟ್, ಶ್ರೀಶ ಆಚಾರ್ಯ ಕಡೇಕಾರ್, ನಾಗರಾಜ ಮೂಲಿಗಾರ್, ಶಶಿಧರ್ ಅಮೀನ್, ಶರತ್ ಬೈಲಕೆರೆ, ಈಶ್ವರ್ ಜಿ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
ಮಲ್ಪೆ : ಕಾರ್ತಿಕ್ ಬಿಲ್ಡಿಂಗ್ ಬಳಿ, ಅನಾಥ ಸ್ಥಿತಿಯಲ್ಲಿದ್ದ ಅಪರಿಚಿತ ವೃದ್ಧರನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು ರಕ್ಷಿಸಿ, ಅಜ್ಜರಕಾಡಿನ ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿರುವ ಘಟನೆ ಮಂಗಳವಾರ ನಡೆದಿದೆ.
ಕಾರ್ಯಚರಣೆಗೆ ತಾಲೂಕು ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿಯ ಸಿಬ್ಬಂದಿಗಳು ನೆರವಿಗೆ ಬಂದಿದ್ದರು.
ರಕ್ಷಿಸಲ್ಪಟ್ಟ ವೃದ್ಧರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ದೇಹ ನಿತ್ರಾಣದಿಂದ ಮಾತನಾಡುವ ಸ್ಥಿತಿಯಲ್ಲಿಲ್ಲದ ಕಾರಣದಿಂದ ಹೆಸರು ವಿಳಾಸ ತಿಳಿದುಬಂದಿಲ್ಲ. ವೃದ್ಧರನ್ನು ಯಾರೋ ಕರೆದು ತಂದು ಬಿಟ್ಟು ಹೋಗಿದ್ದಾರೆಂದು ಹೇಳಲಾಗುತ್ತಿದೆ. ಸಂಬಂಧಿಕರು ಯಾರಾದರೂ ಇದ್ದಲ್ಲಿ ಉಡುಪಿ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.
ಉಡುಪಿ : ನಾಪತ್ತೆಯಾಗಿದ್ದ ಮಲ್ಪೆ ಬಾಪು ತೋಟದ ನಿವಾಸಿ ಜಲೀಲ್ (49) ಎಂಬವರ ಮೃತದೇಹವು ಪಡುಕೆರೆ ಮಟ್ಟು ಸಮೀಪದ ಪಾಪನಾಶಿನಿ ನದಿಯಲ್ಲಿ ಪತ್ತೆಯಾಗಿದೆ. ಜಲೀಲ್ ಅಕ್ಟೋಬರ್ 12ರ ಶನಿವಾರ ಬೆಳಿಗ್ಗೆ 5 ಗಂಟೆಗೆ ಮನೆಯಿಂದ ನಾಪತ್ತೆಯಾಗಿದ್ದರು. ಅವರ ಬೈಕ್, ಮೊಬೈಲ್ ಹಾಗೂ ಚಪ್ಪಲಿ ಮಲ್ಪೆ ಪಡುಕರೆ ಸೇತುವೆ ಬಳಿ ಪತ್ತೆಯಾಗಿತ್ತು.
ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡವು ಜಲೀಲ್ ನಾಪತ್ತೆಯಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶವನ್ನು ಬಿತ್ತರಿಸಿತ್ತು. ಬೆಳಿಗ್ಗೆ ಸುಮಾರು 7 ಗಂಟೆಗೆ ಪಡುಕರೆ ಬಾಪುತೋಟ ಸಮೀಪದ ಪಾಪನಾಶಿನಿ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಸ್ಥಳೀಯ ಮೀನುಗಾರರು ಮೃತದೇಹದ ಹುಡುಕಾಟಕ್ಕೆ ಈಶ್ವರ್ ಮಲ್ಪೆ ಮತ್ತು ತಂಡದ ಜೊತೆಗೆ ಸಹಕಾರ ನೀಡಿದ್ದರು. ಈಶ್ವರ್ ಮಲ್ಪೆ ಮತ್ತು ತಂಡ ತಮ್ಮ ಆ್ಯಂಬುಲೆನ್ಸ್ ಮೂಲಕ ಮೃತದೇಹವನ್ನು ಉಡುಪಿ ಜಿಲ್ಲಾಸ್ಪತ್ರೆಗೆ ಸಾಗಿಸಿದರು.
ಮಲ್ಪೆಯಲ್ಲಿ 7 ಮಂದಿ ಬಾಂಗ್ಲಾದೇಶಿಯರು ವಶಕ್ಕೆ – ಮೂರು ವರ್ಷಗಳಿಂದ ನಕಲಿ ದಾಖಲೆಯೊಂದಿಗೆ ವಾಸ!
ಮಲ್ಪೆ : ಉಡುಪಿಯ ಮಲ್ಪೆ ವಡಬಾಂಡೇಶ್ವರ ಬಸ್ ನಿಲ್ದಾಣದ ಬಳಿ 7 ಮಂದಿ ಬಾಂಗ್ಲಾದೇಶಿಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರು ಮಲ್ಪೆಗೆ ಮೀನುಗಾರಿಕಾ ಕಾರ್ಮಿಕರಾಗಿ ಉದ್ಯೋಗ ಆರಿಸಿಕೊಂಡು ಬಂದಿದ್ದರು ಎನ್ನಲಾಗಿದೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ತೆರಳಲು ಪ್ರಯತ್ನಿಸಿದ್ದ ಮಹಮ್ಮದ್ ಮಾಣಿಕ್ ಎಂಬಾತನನ್ನು ವಿಚಾರಣೆಗೆ ಒಳಪಡಿಸಿದಾಗ ಆತ ಮಲ್ಪೆಯಲ್ಲಿ ಇರುವವರ ಬಗ್ಗೆ ಮಾಹಿತಿ ನೀಡಿದ್ದಾನೆ. ಬಾಂಗ್ಲಾದೇಶದ ಮಾಣಿಕ್ ಚೌಕ್ ರಾಜಶಾಹಿಯ ವಿಚಾರಣೆ ವೇಳೆ ಹಲವರು ಮಲ್ಪೆಯಲ್ಲಿರುವುದು ಪತ್ತೆಯಾಗಿದೆ.
ಹಕೀಂ ಅಲಿ, ಸುಜೋನ್, ಇಸ್ಮಾಯಿಲ್, ಕರೀಂ, ಸಲಾಂ, ರಾಜಿಕುಲ್, ಮೊಹಮ್ಮದ್ ಸೋಜಿಬ್, ಕಾಜೋಲ್, ಉಸ್ಮಾನ್ ಬಂಧಿತರು. ಇವರು ನಕಲಿ ದಾಖಲಾತಿ ಸೃಷ್ಟಿಸಿ ಇಲ್ಲಿ ತಂಗಿದ್ದರು. ಆರೋಪಿಗಳ ಬಳಿ ನಕಲಿ ಆಧಾರ್ ಕಾರ್ಡ್ ಪತ್ತೆಯಾಗಿದೆ.
ಆರೋಪಿ ಉಸ್ಮಾನ್ ಎಂಬಾತ ಅಕ್ರಮವಾಗಿ ಕರೆತಂದು ಇವರಿಗೆ ಉದ್ಯೋಗಕ್ಕೆ ವ್ಯವಸ್ಥೆ ಮಾಡಿದ್ದ. ಇವರನ್ನು ವಶಕ್ಕೆ ಪಡೆದಿರುವ ಮಲ್ಪೆ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಬಾಂಗ್ಲಾದೇಶೀಯರು ಇಲ್ಲಿ ಅಕ್ರಮವಾಗಿ ತಂಗಿದ್ದರು. ಇವರು ಇಲ್ಲಿಗೆ ಬಂದದ್ದು ಹೇಗೆ? ಇವರಿಗೆ ನಕಲಿ ಆಧಾರ್ ಮಾಡಿಕೊಟ್ಟವರು ಯಾರು? ಇಲ್ಲಿ ಏನು ಮಾಡುತ್ತಿದ್ದರು? ಹೀಗೆ ಹಲವು ಆಯಾಮಗಳಲ್ಲಿ ಮಲ್ಪೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.