ಉಡುಪಿ : ಗೃಹ ನಿರ್ಮಾಣ ಸಾಲದ ಸಂದರ್ಭದಲ್ಲಿ ಮಾಡಿದ ‘ಸಾಲ ರಕ್ಷಣ ವಿಮಾ ಯೋಜನೆ’ ಅಡಿಯಲ್ಲಿ ವಿಮಾ ಪರಿಹಾರ ನೀಡದ ಇನ್ಶುರೆನ್ಸ್ ಕಂಪೆನಿಗೆ ಸಾಲದ ಸಂಪೂರ್ಣ ಮೊತ್ತವನ್ನು ಬಡ್ಡಿಯೊಂದಿಗೆ ಬ್ಯಾಂಕಿಗೆ ನೀಡಲು ಉಡುಪಿ ಗ್ರಾಹಕ ಆಯೋಗ ಆದೇಶಿಸಿದೆ.
ಕುಂದಾಪುರ ತಾಲೂಕು ನೂಜಾಡಿಯ ನಿವಾಸಿ ಮಹಾಬಲ ಪೂಜಾರಿ ಅವರು ಚಿತ್ತೂರಿನ ಕರ್ಣಾಟಕ ಬ್ಯಾಂಕ್ನಲ್ಲಿ ನೂತನ ಮನೆ ನಿರ್ಮಿಸಲು 2023ರ ಜು.2023ರಲ್ಲಿ 10 ಲ.ರೂ. ಸಾಲ ಪಡೆದಿದ್ದರು. ಆ ಸಾಲಕ್ಕೆ ಭಾರ್ತಿ ಆಕ್ಸಾ ವಿಮಾ ಸಂಸ್ಥೆಯು ಸಾಲ ರಕ್ಷಣ ವಿಮಾ ಯೋಜನೆ ಅಡಿಯಲ್ಲಿ ದಿನಾಂಕ 2023ರ ಜು.28ರಂದು ಮಹಾಬಲ ಪೂಜಾರಿಯವರಿಂದ 39,777ರೂ. ಏಕಗಂಟಿನ ವಿಮಾ ಪ್ರಿಮಿಯಂ ಪಾಲಿಸಿ ಪಡೆದಿದ್ದರು. ಅನಂತರ ವಿಮಾ ಸಂಸ್ಥೆ 108 ತಿಂಗಳುಗಳ ಅವಧಿಗೆ ವಿಮಾ ಪಾಲಿಸಿ ನೀಡಿತ್ತು.
ವಿಮೆಯ ಉದ್ದೇಶ ಮುಖ್ಯ ಸಾಲಗಾರನು ಸಾಲದ ಮರುಪಾವತಿಯ ಅವಧಿಯೊಳಗೆ ಮರಣಗೊಂಡರೆ ವಿಮಾ ಸಂಸ್ಥೆಯು ಸಾಲ ಪಡೆದ ಬ್ಯಾಂಕ್ಗೆ ಬಾಕಿ ಸಾಲದ ಮೊತ್ತವನ್ನು ಮರುಪಾವತಿಸುವ ಷರತ್ತಿಗೆ ಒಳಪಟ್ಟಿರುವುದಾಗಿದೆ.
ಈ ಪ್ರಕರಣದಲ್ಲಿ ಗೃಹನಿರ್ಮಾಣಕ್ಕೆ ಸಾಲ ಪಡೆದ ಮಹಾಬಲ ಪೂಜಾರಿ ಅವರು 2024ರ ಜ.20ರಂದು ಹೃದಯಾಘಾತದಿಂದ ನಿಧನ ಹೊಂದಿದ್ದರು. ಮೃತರ ವಾರಸುದಾರರು ಸಾಲ ರಕ್ಷಣ ವಿಮಾ ಯೋಜನೆಯಂತೆ ಸಾಲ ಪಡೆದ ಬ್ಯಾಂಕಿನಲ್ಲಿ ವಿಮಾ ಹಣವನ್ನು ಸಾಲಕ್ಕೆ ಹೊಂದಾಣಿಕೆ ಮಾಡಲು ಕೋರಿಕೊಂಡಿದ್ದು, ಇದರೊಂದಿಗೆ ವಿಮಾ ಪರಿಹಾರ ಪಡೆಯಲು ವಿಮಾ ಸಂಸ್ಥೆಗೆ ಸಂಬಂಧಪಟ್ಟ ದಾಖಲಾತಿಗಳನ್ನು ಹಾಜರುಪಡಿಸಿದ್ದರು. ಆದರೆ ವಿಮಾ ಸಂಸ್ಥೆ ವಿಮಾ ಹಣ ಸಂದಾಯ ಮಾಡುವ ಬದಲಿಗೆ ಮೃತ ಮಹಾಬಲ ಪೂಜಾರಿಯವರಿಗೆ ವಿಮಾ ಪಾಲಿಸಿ ಮಾಡುವ ಮೊದಲೇ ಆರೋಗ್ಯ ಸಮಸ್ಯೆ ಇದ್ದು, ಆ ವಿಚಾರವನ್ನು ವಿಮೆ ಮಾಡುವ ಸಮಯದಲ್ಲಿ ತಿಳಿಸಿರಲಿಲ್ಲ ಎಂದು ವಿಮಾ ಪರಿಹಾರ ನೀಡಲು ತಿರಸ್ಕರಿಸಿದರು.
ಅನಂತರ ಮಹಾಬಲ ಪೂಜಾರಿಯವರ ಪತ್ನಿ ನೀಲಾವತಿ ಉಡುಪಿಯ ಗ್ರಾಹಕ ಪರಿಹಾರ ಆಯೋಗದ ಮುಂದೆ ವಿಮಾ ಸಂಸ್ಥೆ ಮತ್ತು ಬ್ಯಾಂಕಿನ ವಿರುದ್ಧ ದೂರು ದಾಖಲಿಸಿ ವಿಮಾ ಪರಿಹಾರ ದೊರಕಿಸಿಕೊಡಲು ಕೇಳಿಕೊಂಡರು. ಈ ಪ್ರಕರಣದಲ್ಲಿ ವಿಮಾ ಸಂಸ್ಥೆಯು ಮೃತ ಮಹಾಬಲ ಪೂಜಾರಿಯವರಿಗೆ ವಿಮೆ ಮಾಡುವ ಪೂರ್ವದಲ್ಲಿ ಆರೋಗ್ಯ ಸಮಸ್ಯೆ ಇರುವುದನ್ನು ರುಜುವಾತು ಪಡಿಸಲು ವಿಫಲವಾಗಿರುವುದನ್ನು ಮನಗೊಂಡು ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ದೂರನ್ನು ಪುರಸ್ಕರಿಸಿ ವಿಮಾ ಸಂಸ್ಥೆಗೆ ಮೃತ ಮಹಾಬಲ ಪೂಜಾರಿಯವರ ಗೃಹಸಾಲಕ್ಕೆ ಸಂಬಂಧಪಟ್ಟ ಬಾಕಿ 9,70,167 ರೂ.ಗಳನ್ನು ಶೇ. 6 ಬಡ್ಡಿಯೊಂದಿಗೆ ಕರ್ಣಾಟಕ ಬ್ಯಾಂಕ್ ಚಿತ್ತೂರು ಶಾಖೆಗೆ ಪಾವತಿಸಲು ಆದೇಶಿಸಿದೆ.
ಇದರೊಂದಿಗೆ 10,000 ರೂ. ಮಾನಸಿಕ ವೇದನೆ ಹಾಗೂ 5000 ರೂ. ವ್ಯಾಜ್ಯದ ಖರ್ಚಿನೊಂದಿಗೆ ಆದೇಶದ ದಿನಾಂಕದಿಂದ ಒಂದು ತಿಂಗಳೊಳಗೆ ಪಾವತಿಸಲು ಮಾಡಿದ ಆದೇಶದೊಂದಿಗೆ, ಸಾಲ ನೀಡಿದ ಚಿತ್ತೂರು ಕರ್ಣಾಟಕ ಬ್ಯಾಂಕ್ ಶಾಖೆಗೆ ಸಾಲಗಾರ ಖಾತೆಯಲ್ಲಿ ಉಳಿದ ಹೆಚ್ಚುವರಿ ಹಣವನ್ನು ವಿಮಾ ಸಂಸ್ಥೆಯಿಂದ ವಿಮಾ ಪರಿಹಾರ ಹಣ ಸ್ವೀಕರಿಸಿದ 15 ದಿನಗಳೊಳಗಾಗಿ ಅರ್ಜಿದಾರರಿಗೆ ಪಾವತಿಸಬೇಕೆಂದು ಆದೇಶ ಮಾಡಲಾಗಿದೆ.