ಮಂಗಳೂರು : ತಮ್ಮ ಪತಿಯ ಸಂಬಂಧಿ ಮಹಿಳೆಯೋರ್ವರಿಗೆ ಲಿವರ್ನ(ಯಕೃತ್ತು) ಭಾಗವನ್ನು ದಾನ ಮಾಡಿ ಅವರ ಜೀವ ಉಳಿಸಿದ್ದ ಮಂಗಳೂರಿನ ಉಪನ್ಯಾಸಕಿ ಅರ್ಚನಾ ಕಾಮತ್(33) ಅವರು ತಾನೇ ವಿಧಿಲೀಲೆಗೆ ಬಲಿಯಾಗಿದ್ದಾರೆ.

ಅರ್ಚನಾ ಕಾಮತ್ ಪತಿ ಸಿಎ ಆಗಿರು ಚೇತನ್ ಕಾಮತ್ ಅವರ ಪತಿಯ ಸಂಬಂಧಿ ಮಹಿಳೆಯೋರ್ವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಲಿವರ್ನ ಅಗತ್ಯವಿತ್ತು. ಹಲವರನ್ನು ತಪಾಸಣೆ ಮಾಡಿದ್ದರೂ ರಕ್ತದ ಗುಂಪು ಹೊಂದಾಣಿಕೆಯಾಗಿರಲಿಲ್ಲ. ಆದರೆ ಅರ್ಚನಾ ರಕ್ತದ ಗುಂಪು ಹೊಂದಾಣಿಕೆಯಾಗಿತ್ತು. ಆದ್ದರಿಂದ ಅರ್ಚನಾ ಅವರೇ ಲಿವರ್ನ ಭಾಗದ ದಾನಕ್ಕೆ ಮುಂದೆ ಬಂದಿದ್ದಾರೆ. ಅದರಂತೆ 12ದಿನಗಳ ಹಿಂದೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಅರ್ಚನಾ ಅವರ ಲಿವರ್ನ ಸ್ವಲ್ಪ ಅಂಶವನ್ನು ತೆಗೆದು ಸಂಬಂಧಿ ಮಹಿಳೆಗೆ ಜೋಡಿಸುವ ಶಸ್ತಚಿಕಿತ್ಸೆ ನಡೆದಿತ್ತು. ಆ ಬಳಿಕ ಅರ್ಚನಾ ಅವರು ಆರೋಗ್ಯದಿಂದ ಇದ್ದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು. ಲಿವರ್ ಜೋಡಿಸಲ್ಪಟ್ಟ ಮಹಿಳೆ ಆರೋಗ್ಯವಾಗಿದ್ದಾರೆಂದು ತಿಳಿದುಬಂದಿದೆ.
ಆದರೆ ಕಳೆದ 4ದಿನಗಳ ಹಿಂದೆ ಅರ್ಚನಾ ಕಾಮತ್ ಏಕಾಏಕಿ ಅಸ್ವಸ್ಥಗೊಂಡಿದ್ದಾರೆ. ಆದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೆ.15ರಂದು ಅವರು ಮೃತಪಟ್ಟಿದ್ದಾರೆ. ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದ ಅವರು ಬಳಿಕ ನಗರದ ಬೋಂದೆಲ್ ಬಳಿಯಿರುವ ಮಣೇಲ್ ಶ್ರೀನಿವಾಸ ನಾಯಕ್ ಎಂಬಿಎ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದರು. ಅರ್ಚನಾ ಅವರು ಪತಿ ಸಿಎ ಚೇತನ್ ಕಾಮತ್ ಹಾಗೂ ನಾಲ್ಕು ವರ್ಷದ ಗಂಡು ಮಗುವನ್ನು ಅಗಲಿದ್ದಾರೆ.