ಉಡುಪಿ : ಕೈವಾರ ತಾತಯ್ಯ ತನ್ನ ಚಿಂತನೆಗಳ ಮೂಲಕ ಜನರಲ್ಲಿ ಬದಲಾವಣೆ ತರಲು ಶ್ರಮಿಸಿದವರು. ಅವರ ತತ್ವಾದರ್ಶ ಹಾಗೂ ಮೌಲ್ಯಗಳು ಜೀವನಕ್ಕೆ ಮಾದರಿಯಾಗಲಿ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಶ್ರೀ ಯೋಗಿನಾರೇಯಣ ಯತೀಂದ್ರ (ಕೈವಾರ ತಾತಯ್ಯ) ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಯೋಗಿ ನಾರೇಯಣರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ ಮಾತನಾಡಿದರು.
ಕೈವಾರ ತಾತಯ್ಯ ಕಾಯಕದಿಂದಲೇ ಬದುಕು ಕಟ್ಟಿಕೊಂಡು, ಭಾಷೆ ಹಾಗೂ ಬರಹಗಳ ಮೂಲಕ ಸಮಾಜದ ಸಮಸ್ಯೆಗಳನ್ನು ಗುರುತಿಸಿ, ಅನ್ಯರ ಏಳಿಗೆಗಾಗಿ ಶ್ರಮಿಸಿದವರು. ಆಧ್ಯಾತ್ಮ ಚಿಂತನ ಮಂಥನ ನಡೆಸುವುದರಲ್ಲಿ ಕೈವಾರ ತಾತಯ್ಯ ಚಾಣಾಕ್ಷತೆ ಹೊಂದಿದ್ದರು ಎಂದರು.
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನಕರ ಹೇರೂರು ಮಾತನಾಡಿ, ಸರ್ಕಾರ ಸಂತರು, ವಚನಕಾರರು, ಶರಣರು ಮೊದಲಾದ ಸಾಧಕರ ಜಯಂತಿ ಆಚರಿಸಿ ಅವರ ಬದುಕಿನ ಬಗ್ಗೆ ಜನರಿಗೆ ಜ್ಞಾನ ಮೂಡಿಸುವ ಮಹತ್ವದ ಕೆಲಸ ಮಾಡುತ್ತಿದೆ. ಪ್ರಸ್ತುತ ಸಮಾಜದಲ್ಲಿ ನ್ಯಾಯಾಂಗ, ಶಾಸಕಾಂಗ ವ್ಯವಸ್ಥೆ ಇದ್ದರೂ ಸಮಾನತೆ ಬಂದಿಲ್ಲ. ಸಮಾಜಕ್ಕೆ ಕೈವಾರ ತಾತಯ್ಯ ನೀಡಿದ ಕೊಡುಗೆಗಳು ಎಲ್ಲರಿಗೆ ಪ್ರೇರಣೆಯಾಗಲಿ ಎಂದರು.
ನಿವೃತ್ತ ಪ್ರಾಧ್ಯಾಪಕ ಹಾಗೂ ಸಾಹಿತಿ ಡಾ.ಶ್ರೀಕಾಂತ ಸಿದ್ದಾಪುರ ವಿಶೇಷ ಉಪನ್ಯಾಸ ನೀಡಿ, ಕೈವಾರ ತಾತಯ್ಯ ವೃತ್ತಿ ಜೀವನ ತೊರೆದು ಆಧ್ಯಾತ್ಮಿಕ ಹಾದಿಯನ್ನು ಹಿಡಿದರು. ಯಾವುದೇ ಕೆಲಸದಲ್ಲಿ ಯಶಸ್ಸು ಕಾಣಬೇಕಾದರೆ ಮನಸ್ಸನ್ನು ನಿಯಂತ್ರಣದಲ್ಲಿಡಬೇಕು ಹಾಗೂ ಜೀವನದಲ್ಲಿ ಆತ್ಮಸ್ಥೈರ್ಯ ತಂದುಕೊಳ್ಳಬೇಕು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ನಗರಸಭೆ ಪೌರಾಯುಕ್ತ ಉದಯ್ ಕುಮಾರ್ ಶೆಟ್ಟಿ ಮೊದಲಾದವರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಇಲಾಖೆಯ ವರ್ಷಾ ನಿರೂಪಿಸಿ, ವಂದಿಸಿದರು.
 
			        


 
			         
                        



 
                        

 
                        
 
                        
 
                         
                         
                        