Law Enforcement
ನಕ್ಸಲ್ ವಿಕ್ರಮ್ ಗೌಡ ಎನ್ಕೌಂಟರ್ ಸ್ಥಳಕ್ಕೆ ಹಿರಿಯ ಅಧಿಕಾರಿಗಳ ಭೇಟಿ – ಮಹಜರು ಪ್ರಕ್ರಿಯೆ ನಡೆಸುತ್ತಿರುವ ಪೊಲೀಸರು
ಹೆಬ್ರಿ : ಉಡುಪಿ ಹೆಬ್ರಿಯ ಪೀತ್ಬೈಲ್ ಎಂಬಲ್ಲಿ ಸೋಮವಾರ ತಡರಾತ್ರಿ ನಕ್ಸಲ್ ನಾಯಕ ವಿಕ್ರಂ ಗೌಡನನ್ನು ನಕ್ಸಲ್ ನಿಗ್ರಹ ದಳ ಎನ್ಕೌಂಟರ್ನಲ್ಲಿ ಹತ್ಯೆ ಮಾಡಿದೆ. ಈ ಹಿನ್ನೆಲೆಯಲ್ಲಿ ಇಂದು ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳ ದಂಡೇ ಆಗಮಿಸಿದೆ.
ಆಂತರಿಕ ಭದ್ರತಾ ಡಿಜಿಪಿ ರೂಪಾ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪೊಲೀಸರು ಘಟನಾ ಸ್ಥಳದ ಮಹಜರು ಪ್ರಕ್ರಿಯೆ ನಡೆಸುತ್ತಿದ್ದಾರೆ. ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಉಡುಪಿ ಎಸ್ಪಿ ಡಾ. ಅರುಣ್ ಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸ್ಥಳಕ್ಕೆ ಎಫ್ಎಸ್ಎಲ್ ತಂಡವನ್ನು ಕರೆಸಿಕೊಳ್ಳಲಾಗಿದೆ. ಬೆರಳಚ್ಚು ತಜ್ಞರು ಕೂಡ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದರು. ಈ ಭಾಗದ ಪ್ರಭಾವಿ ನಕ್ಸಲ್ ನಾಯಕ ವಿಕ್ರಂ ಗೌಡನ ಎನ್ಕೌಂಟರ್ನಿಂದಾಗಿ ನಕ್ಸಲ್ ನಿಗ್ರಹ ಪಡೆ ಮತ್ತು ಜಿಲ್ಲಾ ಪೊಲೀಸ್ ಇಲಾಖೆಗೆ ಬಹುದೊಡ್ಡ ಗೆಲುವು ಸಿಕ್ಕಿದಂತಾಗಿದೆ.
ಕಾರ್ಕಳ : ಬೋಳ ಗ್ರಾಮದಲ್ಲಿ ಅಕ್ರಮ ಗೋವಾ ಮದ್ಯ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಉಡುಪಿಯ ಪ್ರಶಾಂತ್ನನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಕಾರವಾರಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿದ ಅಬಕಾರಿ ಇಲಾಖೆ ಅಧಿಕಾರಿಗಳು ಪೊಲೀಸ್ ಇಲಾಖೆ ಸಹಕಾರದೊಂದಿಗೆ ಕಾರವಾರ ಬಸ್ ನಿಲ್ದಾಣದಲ್ಲಿ ಆರೋಪಿಯನ್ನು ಬಂಧಿಸಿ ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಶನಿವಾರ ಬೋಳ ಗ್ರಾಮದ ಮನೆಯಲ್ಲಿ ದಾಳಿ ನಡೆಸಿದ್ದ ಅಬಕಾರಿ ಅಧಿಕಾರಿಗಳು ಲಕ್ಷಾಂತರ ಮೌಲ್ಯದ ಗೋವಾ ಮದ್ಯ ವಶಪಡಿಸಿಕೊಂಡಿದ್ದರು.
ಕಾರ್ಕಳ : ಕಾರ್ಕಳ ತಾಲೂಕಿನ ಬೋಳ ಎಂಬಲ್ಲಿ ಅಬಕಾರಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ಮೌಲ್ಯದ ಮದ್ಯದ ಬಾಕ್ಸ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆ ವೇಳೆ ಲಕ್ಷಾಂತರ ರೂ. ಮೌಲ್ಯದ ಸುಮಾರು 260ಕ್ಕೂ ಅಧಿಕ ಮದ್ಯದ ಬಾಕ್ಸ್ಗಳು ಪತ್ತೆಯಾಗಿವೆ. ಅಬಕಾರಿ ಅಧಿಕಾರಿಗಳು ಅದನ್ನು ಜಪ್ತಿ ಮಾಡಿ ಕಾರ್ಕಳ ಅಬಕಾರಿ ಇಲಾಖೆಯಲ್ಲಿ ದಾಸ್ತಾನಿರಿಸಿದ್ದಾರೆ. ಇವೆಲ್ಲವೂ ಬ್ರ್ಯಾಂಡೆಡ್ ಮಾಲ್ಗಳಾದ ಜಾನಿ ವಾಕರ್, ಬ್ಲಾಕ್ ಲೇಬಲ್, ಬ್ಲ್ಯಾಕ್ ಆಂಡ್ ವೈಟ್, ಮ್ಯಾನ್ಶನ್ ಹೌಸ್ (MH), ಮ್ಯಾಕ್ಡವೆಲ್ (MC), ವೋಡ್ಕ ಲೇಬಲ್ನ ನಕಲಿ ಮದ್ಯವಾಗಿದೆ. ಆರೋಪಿಗಳು ಪರಾರಿಯಾಗಿದ್ದು, ಅಬಕಾರಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಮತ್ತು ನಕಲಿ ಮದ್ಯ ತಯಾರಿಕೆ, ರವಾನೆ ಹೇಗೆ ನಡೆಯುತ್ತಿದೆ ಎನ್ನುವುದರ ಕುರಿತು ಉಡುಪಿ ಜಿಲ್ಲಾ ಅಬಕಾರಿ ಉಪ ಆಯುಕ್ತೆ ಬಿಂದುಶ್ರೀ ತಂಡ ತನಿಖೆ ನಡೆಸುತ್ತಿದೆ.
ಉಳ್ಳಾಲ : ಜೈಲಿನಿಂದ ಬಿಡುಗಡೆ ಹೊಂದಿರುವ ವ್ಯಕ್ತಿಯ ಕೊಲೆಗೆ ಯತ್ನಿಸಿದ ಮೂವರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಸುರತ್ಕಲ್, ಇಡ್ಯ, ಈಶ್ವರ ನಗರ ನಿವಾಸಿ ಅಣ್ಣಪ್ಪ ಸ್ವಾಮಿ ಅಲಿಯಾಸ್ ಮನು(24), ತಲಪಾಡಿ, ನಾರ್ಲ ಪಡೀಲ್ ನಿವಾಸಿ ಸಚಿನ್(24), ಬಂಟ್ವಾಳ ತಾಲೂಕಿನ, ಪಜೀರ್ ಪೋಸ್ಟ್, ಕಂಬ್ಲಪದವು, ಪಾದಲ್ ಕೋಡಿ ನಿವಾಸಿ ಖುಷಿತ್(18) ಬಂಧಿತ ಆರೋಪಿಗಳು.
ನವಂಬರ್ 8ರಂದು ಸಂಜೆ 6.40ರ ಸುಮಾರಿಗೆ ತಲಪಾಡಿ ಗ್ರಾಮದ ಕೆ.ಸಿ.ರೋಡ್-ಉಚ್ಚಿಲ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹಳೆಯ ಪ್ರಕರಣದಲ್ಲಿ ಜೈಲಿನಿಂದ ಬಿಡುಗಡೆ ಹೊಂದಿದ್ದ ಮೊಹಮದ್ ಆಸೀಫ್ ಎಂಬಾತ ತನ್ನ ಮನೆಯವರೊಂದಿಗೆ ವಾಹನದಲ್ಲಿ ಮಂಗಳೂರಿನಿಂದ ಕೇರಳ ಕಡೆಗೆ ಹೋಗುತ್ತಿದ್ದ. ಈ ಆರೋಪಿಗಳು ಮೊಹಮ್ಮದ್ ಆಸೀಫ್ರವರನ್ನು ಮಾರಕಾಯುಧಗಳಿಂದ ದಾಳಿ ಮಾಡಿ ಕೊಲೆ ಮಾಡಲು ಯತ್ನಿಸಿದ್ದರು. ಈ ಬಗ್ಗೆ ಮೊಹಮದ್ ಆಸೀಫ್ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸಿ ನವೆಂಬರ್ 11ರಂದು ರಾತ್ರಿ 8ಗಂಟೆಗೆ ಬಂಧಿಸಿದ್ದಾರೆ.
ಮಾದಕ ವಸ್ತು ಸಾಗಾಟ ಮತ್ತು ಮಾರಾಟ ಪ್ರಕರಣದಲ್ಲಿ ವಿದೇಶಿ ಪ್ರಜೆ ಸೇರಿ 6 ಮಂದಿ ಸೆರೆ
ಮಂಗಳೂರು : ನಗರದ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಣಿಜ್ಯ ಪ್ರಮಾಣದ ಮಾದಕ ವಸ್ತುವನ್ನು ಮಾರಾಟ ಮತ್ತು ಸಾಗಾಟ ಮಾಡಿದ ಆರೋಪಿತರನ್ನು ಪಣಂಬೂರು ಪೊಲೀಸರು ದಸ್ತಗಿರಿ ಮಾಡಿ ಮಾದಕ ವಸ್ತುಗಳನ್ನು ಮತ್ತು ಸ್ಕೂಟರನ್ನು ಸ್ವಾಧೀನಪಡಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೆಐಓಸಿಎಲ್ ಹಿಂಬಾಗದ ಸಮುದ್ರ ಕಡೆ ಹೋಗುವ ಮಾರ್ಗದಲ್ಲಿ ಇಬ್ಬರು ಯುವಕರು ಸ್ಕೂಟರ್ ನಿಲ್ಲಿಸಿಕೊಂಡು ಮಾದಕ ವಸ್ತು ವಶದಲ್ಲಿ ಹೊಂದಿ ಮಾರಾಟ ಮಾಡುತ್ತಿರುವ ಬಗ್ಗೆ ಪಣಂಬೂರು ಠಾಣಾ ಪಿಎಸ್ಐ ಶ್ರೀಕಲಾ ಕೆ.ಟಿ ರವರಿಗೆ ಬಾತ್ಮೀದಾರರಿಂದ ದೊರೆತ ಖಚಿತ ಮಾಹಿತಿಯಂತೆ ಮಂಗಳೂರು ನಗರ ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತಕರಾದ ಶ್ರೀಕಾಂತ್ ಕೆ ರವರ ನಿರ್ದೆಶನದಂತೆ ಶ್ರೀಕಲಾ ಕೆ.ಟಿ, ಪಿ.ಎಸ್.ಐ ರವರು ತಮ್ಮ ಸಿಬ್ಬಂದಿಗಳ ಜೊತೆ 16:05 ಗಂಟೆಗೆ ಕೆ ಐ ಸಿ ಓ ಎಲ್ ಹಿಂಬಾಗದ ಸಮುದ್ರ ಕಡೆ ಹೋಗುವ ಮಾರ್ಗದಲ್ಲಿ ಆರೋಪಿತರಾದ 1) ಚಂದನ್ 2) ಶರತ್ ಎಂಬವರನ್ನು ದಸ್ತಗಿರಿ ಮಾಡಿ ಮಾದಕ ವಸ್ತು ಮಾರಾಟ ಮಾಡಲು ಸಹಕರಿಸಿದ ಇತರ ಆರೋಪಿಗಳಾದ 3) ಮಧುಸೂಧನ ಕೊಂಚಾಡಿ 4)ಧನುಷ್ ಆಕಾಶ್ ಭವನ, 5) ಮುಖೇಶ್ ದೇರೆಬೈಲ್ ನೈಜಿರಿಯಾ ದೇಶದ ಪ್ರಜೆ 6) ಮೈಕಲ್ ಬಾಲಾಜಿ@ ಅಝಬೈಕ್ ಜಾನಿ ಎಂಬವರನ್ನು ದಸ್ತಗಿರಿ ಮಾಡಿ ಆರೋಪಿಗಳ ವಶದಲ್ಲಿದ್ದ 11 ಗ್ರಾಮ್ ಕೋಕೇನ್ ಮತ್ತು ಪ್ಯಾಕೇಟ್ ಸಮೇತ 30 ಗ್ರಾಂ ತೂಕದ ಎಮ್ಡಿಎಮ್ಎ 91,000 ರೂಪಾಯಿಗಳಷ್ಟು, ಒಟ್ಟು ಮೌಲ್ಯದ ಮಾದಕ ವಸ್ತುವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಆರೋಪಿತರು ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ಮಾದಕ ವಸ್ತುಗಳನ್ನು ಮಾರಾಟ ಮಾಡುವ ಸಲುವಾಗಿ ಉಪಯೋಗಿಸುತ್ತಿದ್ದ KA-02-KX-0616 ನಂಬ್ರದ ಸ್ಕೂಟರ್ ಮತ್ತು ಒಟ್ಟು 09 ಮೊಬೈಲ್ಗಳನ್ನು ಸ್ವಾಧೀನಪಡಿಸಲಾಗಿದೆ. ಆರೋಪಿತರ ಪೈಕಿ 5 ಜನ ಮಂಗಳೂರಿನ ನಿವಾಸಿಗಳಾಗಿದ್ದು, ಒಬ್ಬ ಆರೋಪಿ ನೈಜೀರಿಯಾ ದೇಶದವನಾಗಿರುತ್ತಾನೆ. ಆರೋಪಿಗಳೆಲ್ಲರೂ ಕ್ಯಾಟರಿಂಗ್, ಪೈಂಟಿಂಗ್ ಸೇರಿದಂತೆ ಖಾಸಗಿ ಕೆಲಸ ಮಾಡಿಕೊಂಡಿರುವುದಾಗಿದೆ. ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅರೋಪಿತರಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.
ಈ ಪತ್ತೆ ಕಾರ್ಯವನ್ನು ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್, ಐ.ಪಿ.ಎಸ್ ರವರ ಮಾರ್ಗದರ್ಶನದಂತೆ, ಕಾನೂನು & ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ದಾರ್ಥ ಗೋಯಲ್ ಐ.ಪಿ.ಎಸ್ ಮತ್ತು ಅಪರಾಧ & ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ನಿರ್ದೇಶನದಂತೆ, ಮಂಗಳೂರು ಉತ್ತರ ವಿಭಾಗದ ಎ.ಸಿ.ಪಿ. ಶ್ರೀಕಾಂತ್ ಕೆ ರವರ ಮಾರ್ಗದರ್ಶನದಲ್ಲಿ ಪಣಂಬೂರು ಠಾಣಾ ಪೊಲೀಸ್ ನಿರೀಕ್ಷಕರಾದ ಮೊಹಮ್ಮದ್ ಸಲೀಂ ಅಬ್ಬಾಸ್ ರವರ ನೇತೃತ್ವದಲ್ಲಿ ಉಪ ನಿರೀಕ್ಷಕರಾದ ಶ್ರೀಕಲಾ ಕೆ .ಟಿ ಮತ್ತು ಅಪರಾಧ ವಿಭಾಗದ ಸಿಬ್ಬಂದಿಗಳಾದ ಹೆಚ್.ಸಿಗಳಾದ ಪ್ರೇಮಾನಂದ, ಸತೀಶ್ ಎಮ್ ಆರ್, ಸಯ್ಯದ್ ಇಂತಿಯಾಜ್, ಚೆರಿಯನ್ ಕೆ, ಜೇಮ್ಸ್ ಸಿಪಿಸಿಗಳಾದ ಶಶಿಕುಮಾರ್, ರಾಕೇಶ್ ಎಲ್ ಎಮ್, ಮಂಜುನಾಥ ಹಾಗೂ ಮಂಗಳೂರು ನಗರ ಉತ್ತರ ಉಪ ವಿಭಾಗದ ANTI DRUG SQUAD ನ ಪಿಎಸ್ಐ ರಾಘವೇಂದ್ರ ಎಮ್ ನಾಯ್ಕ ಮತ್ತು ಸಿಬ್ಬಂದಿಗಳಾದ ಸುನೀಲ್ ಹೆಚ್ ಎಮ್, ವಿನಾಯಕ್, ಬಸವರಾಜ್ ರವರು ಭಾಗವಹಿಸಿದ್ದರು.
ಉಡುಪಿ : ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಬ್ದುಲ್ ಜಬ್ಬಾರ್ ಬಂಧಿತ ಆರೋಪಿ.
ಪೆರಂಪಳ್ಳಿಯ ಬಳಿ ಆರೋಪಿಯು ಸ್ಕೂಟರ್ನಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಬೆನ್ನಿಗೆ ಹಾಕುವ ಚೀಲದಲ್ಲಿ ಮಾರಾಟ ಮಾಡಲು ನಿಂತಿದ್ದ. ಕೂಡಲೇ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡು ಆತನಿಂದ ಕಾನೂನು ಬಾಹಿರವಾಗಿ ಮಾರಾಟ ಮಾಡಲು ಹೊಂದಿದ್ದ 2.344 ಕೆ.ಜಿ. ತೂಕದ ಗಾಂಜಾ, ಮೊಬೈಲ್ ಪೋನ್, ಗಾಂಜಾವನ್ನು ಸಾಗಾಟ ಮಾಡಲು ಬಳಸಿದ್ದ ಬ್ಯಾಗ್, ಪ್ಲಾಸ್ಟಿಕ್ ಕವರ್, ತೂಕದ ಯಂತ್ರ, ಚೂರಿ, 5810 ರೂ. ಮತ್ತು ಗಾಂಜಾ ಸಾಗಾಟಕ್ಕೆ ಬಳಸಿರುವ ಸ್ಕೂಟರ್ ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಯು ಅಕ್ರಮ್ ಭಟ್ಕಳ ಎಂಬಾತನಿಂದ ಗಾಂಜಾ ಖರೀದಿಸಿರುವ ಬಗ್ಗೆ ಮಾಹಿತಿ ನೀಡಿದ್ದಾನೆ. ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿಯಲ್ಲಿ ಅಕ್ರಮ ಗಾಂಜಾ ಮಾರಾಟ/ಸಾಗಾಟ ಚಟುವಟಿಕೆಗಳನ್ನು ತಡೆಗಟ್ಟುವ ಸಂಬಂಧ ಅಬಕಾರಿ ಇಲಾಖೆ ಕಾರ್ಯಾಚರಣೆ ನಡೆಸಿ ಅಕ್ಟೋಬರ್ ತಿಂಗಳಿನಲ್ಲಿ ಒಟ್ಟು 5.051 ಗ್ರಾಂ ಗಾಂಜಾ ಹಾಗೂ ಒಟ್ಟು 9.460 ಗ್ರಾಂ ಎಂಡಿಎಂಎ ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅ.18ರಂದು ಬೈಕಂಪಾಡಿಯ ಕೆ.ಎಸ್.ಬಿ.ಸಿ.ಎಲ್ ಡಿಪೋ-2ಕ್ಕೆ ಹಾಸನದಿಂದ ಒಟ್ಟು 1,100 ಪೆಟ್ಟಿಗೆ (10,680 ಲೀ.) ಬಿಯರ್ ಅವಧಿ ಮೀರಿದ ರಹದಾರಿ ಪತ್ರದೊಂದಿಗೆ ಲಾರಿಯ ಮೂಲಕ ಸರಬರಾಜಾಗಿದ್ದು, ಅವಧಿ ಮೀರಿದ ರಹದಾರಿ ಪತ್ರದೊಂದಿಗೆ ಬಿಯರ್ ಸರಬರಾಜು ಮಾಡಿ ಅಬಕಾರಿ ನಿಯಮಗಳನ್ನು ಉಲ್ಲಂಘಿಸಿರುವುದನ್ನು ಪತ್ತೆಹಚ್ಚಿ ವಾಹನ ಮತ್ತು ಬಿಯರ್ ಅನ್ನು ಜಪ್ತಿಪಡಿಸಿ ಕೇಸು ದಾಖಲಿಸಲಾಗಿದೆ.
ಅ.14ರಂದು ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಗೂನಡ್ಕದ ಅಂಗಡಿಯೊಂದರಲ್ಲಿ ಹೋಮ್ ಮೇಡ್ ವೈನ್ ಅನ್ನು ಅಕ್ರಮವಾಗಿ ದಾಸ್ತಾನು ಹೊಂದಿ ಮಾರಾಟ ಮಾಡುತ್ತಿರುವುದನ್ನು ಪತ್ತೆಹಚ್ಚಿ ಒಟ್ಟು 111.750 ಲೀ. ವೈನ್ ಜಪ್ತಿ ಮಾಡಿ ಅಬಕಾರಿ ಇಲಾಖೆಯ ಅಧಿಕಾರಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅ. 20ರಂದು ಬೈಕಂಪಾಡಿಯಿಂದ ಬಜಪೆಗೆ ಹೋಗುವ ರಸ್ತೆಯ ಕರ್ಕೇರ ಮೂಲ ಸ್ಥಾನದ ಬಳಿ ಯಾವುದೇ ರಹದಾರಿಯಿಲ್ಲದೆ ಅಕ್ರಮವಾಗಿ ಮದ್ಯ ಸಾಗಿಸುತ್ತಿರುವುದನ್ನು ಪತ್ತೆಹಚ್ಚಿ ಒಟ್ಟು 3.690 ಲೀ. ಮದ್ಯ ಹಾಗೂ ವಾಹನವನ್ನು ಜಪ್ತಿ ಮಾಡಿದ್ದಾರೆ ಎಂದು ಅಬಕಾರಿ ಉಪ ಆಯುಕ್ತ ಟಿ.ಎಂ. ಶ್ರೀನಿವಾಸ್ ತಿಳಿಸಿದ್ದಾರೆ.
ಮಂಗಳೂರು : ಎನ್ಡಿಪಿಎಸ್ ಆ್ಯಕ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಪಡೆದ ಬಳಿಕ 4ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆಸಾಮಿಯನ್ನು ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲ, ಒಳಪೇಟೆಯ, ಟಿ.ಸಿ.ರಸ್ತೆಯ ನಿವಾಸಿ ಸಲೀಂ ಅಲಿಯಾಸ್ ಮೊಹಮ್ಮದ್ ಸಲೀಂ(38) ಬಂಧಿತ ಆರೋಪಿ.
ಇಎನ್ಸಿ ಠಾಣೆಯಲ್ಲಿ ಕಲಂ : 8©️,20(b) (ii) (a) NDPS ACT ಪ್ರಕರಣಕ್ಕೆ ಸಂಬಂಧಿಸಿದ 2019ರಲ್ಲಿ ಈತನನ್ನು ದಸ್ತಗಿರಿ ಮಾಡಲಾಗಿತ್ತು. ನ್ಯಾಯಾಲಯ ಈತನಿಗೆ ಜಾಮೀನು ನೀಡಿತ್ತು. ಬಳಿಕ ಈತನು ಇಲ್ಲಿಯವರೆಗೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು.
ಅಕ್ಟೋಬರ್ 22ರಂದು ಸೆನ್ ಕ್ರೈಂ ಪೊಲೀಸ್ ಠಾಣಾ ಸಿಬ್ಬಂದಿ ಆತನನ್ನು ಪತ್ತೆ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ಡ್ರಗ್ಸ್ ವಿರುದ್ಧ ಕಠಿಣ ಕ್ರಮಕ್ಕೆ ವಿಧಾನಪರಿಷತ್ ಅಧಿವೇಶನದಲ್ಲಿ ಧ್ವನಿ ಎತ್ತುವೆ – ಮಂಜುನಾಥ ಭಂಡಾರಿ
ಮಂಗಳೂರು : ಡ್ರಗ್ಸ್ ದಂಧೆಗೆ ಕಠಿಣ ಕಾನೂನು ಕ್ರಮ ಜಾರಿಗೊಳಿಸಲು ಈ ಬಾರಿಯ ವಿಧಾನಪರಿಷತ್ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇನೆ ಎಂದು ಎಂಎಲ್ಸಿ ಮಂಜುನಾಥ ಭಂಡಾರಿ ಹೇಳಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಡ್ರಗ್ಸ್ ದಂಧೆಯಲ್ಲಿ ತೊಡಗಿದವರನ್ನು ಬಂಧಿಸಿದ್ದರೂ ಅವರು ಜಾಮೀನು ಪಡೆದು ಹೊರಗೆ ಬಂದು ಮತ್ತೆ ಅದೇ ಕೆಲಸ ಮಾಡುತ್ತಾರೆ. ಡ್ರಗ್ಸ್ ದಂಧೆಗೆ ಬಹಳ ಸಣ್ಣ ಕೇಸ್ಗಳು ಇರುವುದರಿಂದ ನಾವೇನು ಮಾಡಲು ಸಾಧ್ಯವಿಲ್ಲ ಎಂದು ಪೊಲೀಸರು ಅಳಲು ತೋಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಕಠಿಣ ಕ್ರಮ ಜಾರಿಯಾಗಬೇಕಾದರೆ ಕಾನೂನಿನಲ್ಲಿ ತಿದ್ದುಪಡಿ ಮಾಡಿದ್ದಲ್ಲಿ ಮಾತ್ರ ಸಾಧ್ಯ ಎಂದು ಹೇಳಿದರು.
ಅವಿಭಜಿತ ದ.ಕ.ಜಿಲ್ಲೆಯಲ್ಲಿನ ಡ್ರಗ್ಸ್ ದಂಧೆಗೆ ಕಡಿವಾಣಕ್ಕೆ ಕಠಿಣ ಕ್ರಮ ಕೈಗೊಳ್ಳಲು ಗೃಹಮಂತ್ರಿ, ಐಜಿ, ಪೊಲೀಸ್ ಕಮಿಷನರ್ಗೆ ಪತ್ರ ಬರೆದಿದ್ದೆ. ಡ್ರಗ್ಸ್ ದಂಧೆಯ ಕರಾಳತೆ ಎಷ್ಟರಮಟ್ಟಿಗೆ ಹೋಗಿದೆ ಎಂದರೆ ಇಲ್ಲಿನ ಕಾಲೇಜುಗಳಲ್ಲಿ ಅಡ್ಮಿಷನ್ ಸಂಖ್ಯೆ ಕುಂಠಿತಗೊಳ್ಳುತ್ತಿದೆ. ಡ್ರಗ್ಸ್ ದಂಧೆಯನ್ನು ಡಿಜಿಯವರು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.