ಪುತ್ತೂರು : ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಬೈಪಾಸ್ ತೆಂಕಿಲದಲ್ಲಿ ಶುಕ್ರವಾರ ನಸುಕಿನ ಜಾವದ ವೇಳೆ ಗುಡ್ಡ ಕುಸಿದಿದೆ. ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು, ಬದಲಿ ರಸ್ತೆಯಾಗಿ ಪುತ್ತೂರು ಪೇಟೆ ಬಳಸಿ ವಾಹನ ಸಂಚರಿಸಬೇಕಾಗಿದೆ. ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ತೆಂಕಿಲದಲ್ಲಿ ಆಗಾಗ ಗುಡ್ಡಕುಸಿಯುತ್ತಲೇ ಇದ್ದು ಇದೀಗ ಭಾರಿ ಪ್ರಮಾಣದ ಮಣ್ಣು ರಸ್ತೆಯ ಮೇಲೆ ಬಿದ್ದಿದೆ. ಈಗಾಗಲೇ ನಗರಸಭೆ ಅಧಿಕಾರಿಗಳು, ಪೊಲೀಸರು ಸ್ಥಳದಲ್ಲಿ ಮಣ್ಣು ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
Landslide
ಆ.3ರಂದು ‘ಕೃತಕ ನೆರೆ ಹಾವಳಿ-ಬೆಂಕಿ ದುರಂತ-ಭೂಕುಸಿತ : ಒಂದು ಚರ್ಚೆ’ ಕಾರ್ಯಕ್ರಮ: ರಾಜೇಶ್ ಶೆಟ್ಟಿ ಅಲೆವೂರು
ಉಡುಪಿ : ಪ್ರಸ್ತುತ ಎಲ್ಲಾ ಕಡೆ ಸಂಭವಿಸುತ್ತಿರುವ ಪ್ರಾಕೃತಿಕ ವಿಕೋಪ ದುರಂತಗಳಿಗೆ ಕಾರಣ ಹಾಗೂ ಎಚ್ಚರದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದೊಂದಿಗೆ ‘ಕೃತಕ ನೆರೆ ಹಾವಳಿ- ಬೆಂಕಿ ದುರಂತ- ಭೂಕುಸಿತ: ಒಂದು ಚರ್ಚೆ’ ಕಾರ್ಯಕ್ರಮವನ್ನು ಆ.3ರಂದು ಶನಿವಾರ ಬೆಳಗ್ಗೆ 10.30ಕ್ಕೆ ಉಡುಪಿ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದೆ.
ಉಡುಪಿ ಪತ್ರಿಕಾ ಭವನದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಕೇವಲ ಪತ್ರಕರ್ತರಿಗೆ ಕಾರ್ಯಕ್ರಮ ನಡೆಸುವುದಕ್ಕೆ ಸೀಮಿತವಾಗಿರದೆ ಸಾಮಾಜಿಕ ಬದ್ಧತೆ ಹಾಗೂ ಕಳಕಳಿಯೊಂದಿಗೆ ಹಲವು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಅದರ ಭಾಗವಾಗಿ ಪ್ರಸ್ತುತ ಸಂದರ್ಭಕ್ಕೆ ಅಗತ್ಯವಾಗಿರುವ ಪ್ರಾಕೃತಿಕ ವಿಕೋಪಗಳ ಕುರಿತು ಸಾರ್ವಜನಿಕವಾಗಿ ಚರ್ಚಿಸಲು ಕಾರ್ಯಕ್ರಮವನ್ನು ಆಯೋಜಿಸಲು ಉದ್ದೇಶಿಸಲಾಗಿದೆ ಎಂದರು.
ಉಡುಪಿ ನಗರದಲ್ಲಿ ಪ್ರತಿವರ್ಷ ಬಾಧಿಸುತ್ತಿರುವ ಕೃತಕ ನೆರೆ, ಇತ್ತೀಚೆಗೆ ಹೆಚ್ಚು ಹೆಚ್ಚು ವರದಿಯಾಗುತ್ತಿರುವ ಬೆಂಕಿ ದುರಂತಗಳು ಹಾಗೂ ಜಿಲ್ಲೆ ಸೇರಿದಂತೆ ವಿವಿಧ ಕಡೆ ಸಂಭವಿಸುತ್ತಿರುವ ಭೂಕುಸಿತದ ಕುರಿತು ಚರ್ಚೆ ನಡೆಸ ಬೇಕಾಗಿರುವುದು ಇಂದಿನ ಅಗತ್ಯವಾಗಿದೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ನಗರಸಭೆ ಪೌರಾಯುಕ್ತ ರಾಯಪ್ಪ, ಉಡುಪಿ ಜಿಲ್ಲಾ ಅಗ್ನಿ ಶಾಮಕದಳ ಅಧಿಕಾರಿ ವಿನಾಯಕ ಉ.ಕಲ್ಗುಟಕರ ಹಾಗೂ ಹಿರಿಯ ಭೂಗರ್ಭ ಶಾಸ್ತ್ರಜ್ಞ ಮಣಿಪಾಲದ ಡಾ.ಉದಯ ಶಂಕರ್ ಈ ಮೂರು ವಿಷಯಗಳ ಕುರಿತು ಚರ್ಚಿಸಲಿರುವರು. ಬಳಿಕ ಸಂವಾದ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ವಹಿಸಲಿರುವರು. ಈ ಕಾರ್ಯಕ್ರಮದಲ್ಲಿ ಪತ್ರಕರ್ತರು ಮಾತ್ರವಲ್ಲದೆ ಆಸಕ್ತ ಸಾರ್ವಜನಿಕರು ಕೂಡ ಭಾಗವಹಿಸಬಹುದಾಗಿದೆ ಎಂದವರು ಮಾಹಿತಿ ನೀಡಿದರು
ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ನಜೀರ್ ಪೊಲ್ಯ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ, ಕಾರ್ಯದರ್ಶಿ ರಹೀಂ ಉಜಿರೆ ಉಪಸ್ಥಿತರಿದ್ದರು.
ಉಡುಪಿ : ಶುಕ್ರವಾರ ಸಂಜೆ ಮಂಗಳೂರು-ಬೆಂಗಳೂರು ರೈಲು ಮಾರ್ಗದಲ್ಲಿ ಎಡಕುಮರಿ ಹಾಗೂ ಕಡಗರವಳ್ಳಿ ನಡುವೆ ಪಶ್ಚಿಮ ಘಟ್ಟದ ಗುಡ್ಡ ಕುಸಿತದಿಂದಾಗಿ ಶನಿವಾರ ಹಾಗೂ ರವಿವಾರದಂದು ಕೊಂಕಣ ರೈಲು ಮಾರ್ಗದಲ್ಲಿ ಕಾರವಾರ ಹಾಗೂ ಬೆಂಗಳೂರು ನಡುವೆ ಸಂಚರಿಸುವ ಎಲ್ಲಾ ರೈಲುಗಳನ್ನು ರದ್ದು ಪಡಿಸಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ರೈಲು ನಂ.16585 ಸರ್ ಎಂ.ವಿಶ್ವೇಶ್ವರಯ್ಯ ಬೆಂಗಳೂರು ಹಾಗೂ ಮುರ್ಡೇಶ್ವರ ನಡುವಿನ ಎಕ್ಸೆಸ್ ಕ್ರೈಸ್ ರೈಲಿನ ಸಂಚಾರವನ್ನು ಶನಿವಾರ ಹಾಗೂ ರವಿವಾರ (ಜುಲೈ 27, 28) ಸಂಪೂರ್ಣ ರದ್ದುಪಡಿಸಲಾಗಿದೆ. ಅದೇ ರೀತಿ ಮುರ್ಡೇಶ್ವರ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಬೆಂಗಳೂರು ನಡುವಿನ ರೈಲು ನಂ.16586 ಎಕ್ಸ್ಪ್ರೆಸ್ ರೈಲಿನ ಸಂಚಾರವನ್ನು 28 ರವಿವಾರ ಹಾಗೂ 29 ಸೋಮವಾರ ಸಂಪೂರ್ಣವಾಗಿ ರದ್ದು ಪಡಿಸಲಾಗಿದೆ
ಜುಲೈ 28ರ ರವಿವಾರ ಪ್ರಾರಂಭಗೊಳ್ಳಬೇಕಿದ್ದ ರೈಲು ನಂ.06567 ಸರ್ ಎಂ.ವಿಶ್ವೇಶ್ವರಯ್ಯ ಬೆಂಗಳೂರು ಹಾಗೂ ಕಾರವಾರ ನಡುವಿನ ಸಂಚಾರವನ್ನು ರದ್ದು ಪಡಿಸಿದ್ದರೆ, ಅದೇ ದಿನದ ರೈಲು ನಂ.06568 ಕಾರವಾರ-ಸರ್ ಎಂ. ವಿಶ್ವೇಶ್ವರಯ್ಯ ಬೆಂಗಳೂರು ಎಕ್ಸ್ಪ್ರೆಸ್ ರೈಲಿನ ಸಂಚಾರವೂ ರದ್ದುಗೊಂಡಿದೆ.
ರೈಲು ನಂ.16595 ಕೆಎಸ್ಆರ್ ಬೆಂಗಳೂರು-ಕಾರವಾರ ಎಕ್ಸ್ಪ್ರೆಸ್ ರೈಲಿನ ಜುಲೈ 27 ಶನಿವಾರ ಹಾಗೂ ಜುಲೈ 28 ರವಿವಾರದ ಸಂಚಾರ ರದ್ದು ಗೊಂಡಿದೆ. ಹಾಗೆಯೇ ರೈಲು ನಂ.16596 ಕಾರವಾರ-ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ ರೈಲಿನ ಜುಲೈ 27 ಮತ್ತು ಜುಲೈ 28ರ ಸಂಚಾರವೂ ಸಂಪೂರ್ಣ ರದ್ದಾಗಿದೆ.
ಚಿಕ್ಕಮಗಳೂರು : ನಿರಂತರವಾಗಿ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಸುರಿದ ಅತಿಯಾದ ಮಳೆಯಿಂದಾಗಿ ಮುಳ್ಳಯ್ಯನಗಿರಿ, ದತ್ತಪೀಠಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಭೂ ಕುಸಿತ, ಗುಡ್ಡ ಕುಸಿತ ಉಂಟಾಗಿದ್ದು ಈ ಹಿನ್ನೆಲೆಯಲ್ಲಿ ಒಂದು ವಾರಗಳ ಕಾಲ ಪ್ರವಾಸಿಗರಿಗೆ ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ, ಹೊನ್ನಮ್ಮನ ಹಳ್ಳ ಪ್ರವೇಶಕ್ಕೆ ನಿಷೇಧ ಹೇರಿದೆ.
ಜಿಲ್ಲಾಧಿಕಾರಿ ಮೀನಾ ನಾಗರಾಜ್ ಜುಲೈ 31ರ ವರೆಗೂ ಮುಳ್ಳಯ್ಯನಗಿರಿ ಭೇಟಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಿದ್ದು ಸ್ಥಳೀಯ ವಾಹನಗಳಿಗೆ ಮಾತ್ರ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಕೊಂಚ ಮಳೆ ವಿರಾಮ ನೀಡಿದ್ದು ಒಂದು ವಾರಗಳ ಕಾಲ ಸುರಿದ ಮಳೆ ವಾಡಿಕೆ ಪ್ರಮಾಣದ 25% ಅಷ್ಟು ಹೆಚ್ಚಿದ್ದು ಗಾಳಿ ಸಹಿತ ಸುರಿದ ಮಳೆ ಒಂದೇ ವಾರಕ್ಕೆ ನೂರು ಕೋಟಿ ನಷ್ಟ ಮಾಡಿದೆ. ರಾಜ್ಯದ ಅತ್ಯಂತ ಎತ್ತರದ ಶಿಖರ ಮುಳ್ಳಯ್ಯನಗಿರಿ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದ್ದು ಪ್ರತಿ ದಿನ ಇಲ್ಲಿಗೆ ನೂರಾರು ಸಂಖ್ಯೆಯಲ್ಲಿ ರಾಜ್ಯ, ದೇಶದ ವಿವಿಧ ಭಾಗಗಳಿಂದ ಜನರು ಆಗಮಿಸುತ್ತಾರೆ. ಆದರೆ ಇದೀಗ, ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಧಾರಾಕಾರ ಮಳೆಗೆ ಗುಡ್ಡ ಕುಸಿದು, ಬೃಹತ್ ಗಾತ್ರದ ಕಲ್ಲು, ಮಣ್ಣು, ಮರ ರಸ್ತೆಗೆ ಬಿಳುತ್ತಿವೆ. ಹೀಗಾಗಿ ಕೈಮರ ಚೆಕ್ಪೋಸ್ಟ್ ಬಳಿ ಗೇಟ್ ಬಂದ್ ಮಾಡಲಾಗಿದೆ.
ಆಗುಂಬೆ ಘಾಟಿಯ 5ನೇ ತಿರುವಿನಲ್ಲಿ ಗುಡ್ಡಜರಿತ; ರಸ್ತೆಗೆ ಮರ ಬಿದ್ದು ಸಂಚಾರ ಅಸ್ತವ್ಯಸ್ತ
ಮಂಗಳೂರು : ಬುಧವಾರ ನಗರದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಮಣ್ಣು ಕುಸಿದು ಸಾವನ್ನಪ್ಪಿದ ಕಾರ್ಮಿಕ ಚಂದನ್ ಕುಮಾರ್ ಕುಟುಂಬಕ್ಕೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಎರಡು ಲಕ್ಷ ರೂಪಾಯಿ ಪರಿಹಾರ ಮಂಜೂರು ಮಾಡಿದೆ.
ಜಿಲ್ಲಾಡಳಿತ ಮುತುವರ್ಜಿಯಿಂದ ಗುರುವಾರವೇ ಮಂಡಳಿಯು ಮೃತ ಕಾರ್ಮಿಕರ ಪತ್ನಿ ಕಿರಣ ದೇವಿ ಅವರಿಗೆ ಎರಡು ಲಕ್ಷ ರೂ. ಚೆಕ್ ಕಳುಹಿಸಿದೆ.
ಇದರೊಂದಿಗೆ ಕಟ್ಟಡ ನಿರ್ಮಾಣದ ಗುತ್ತಿಗೆದಾರರೂ ಎರಡು ಲಕ್ಷ ರೂ. ಪರಿಹಾರವನ್ನು ನೀಡಿದ್ದಾರೆ.
ಇದಲ್ಲದೇ, ಕಾರ್ಮಿಕ ಪರಿಹಾರ ಕಾಯಿದೆಯಡಿಯಲ್ಲಿಯೂ ಮೃತ ಕಾರ್ಮಿಕರ ಕುಟುಂಬಕ್ಕೆ ವಿಮಾ ಮೊತ್ತ ದೊರಕಲಿದೆ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳೂರು : ನಗರದ ಕಾವೂರು ಸೂಜಿಕಲ್ ಗುಡ್ಡೆ ಎಂಬಲ್ಲಿ ಭೂಕುಸಿತದಿಂದ ಕೆಲವು ಮನೆಗಳು ಅಪಾಯಕಾರಿ ಸ್ಥಿತಿಯಲ್ಲಿದ್ದು, ತಕ್ಷಣವೇ ಅಲ್ಲಿನ ನಿವಾಸಿಗಳ ಸ್ಥಳಾಂತರಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಸೂಚಿಸಿದ್ದಾರೆ.
ಅವರು ಗುರುವಾರ ಮಂಗಳೂರು ತಾಲೂಕಿನ ವಿವಿಧ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಕಾವೂರು ಸೂಜಿಕಲ್ ಗುಡ್ಡೆಯಲ್ಲಿ ಖಾಸಗಿ ಮನೆ ಕಟ್ಟಡ ನಿರ್ಮಿಸಲು ಅಗೆಯಲಾದ ಮಣ್ಣಿನಿಂದ ಎತ್ತರದ ಪ್ರದೇಶದಲ್ಲಿರುವ ಮನೆಗಳು ಕೆಳಗೆ ಬೀಳುವ ಸ್ಥಿತಿಯಲ್ಲಿವೆ. ಈ ನಿಟ್ಟಿನಲ್ಲಿ ಇಲ್ಲಿನ ನಿವಾಸಿಗಳನ್ನು ಬೇರೆಡೆ ಬಾಡಿಗೆ ಮನೆಗಳಿಗೆ ಸ್ಥಳಾಂತರಿಸಲು ಅವರು ಮಂಗಳೂರು ಮಹಾನಗರಪಾಲಿಕೆ ಆಯುಕ್ತರಿಗೆ ನಿರ್ದೇಶಿಸಿದರು. ಅಲ್ಲದೇ, ಘಟನೆಗೆ ಕಾರಣರಾದ ಖಾಸಗಿ ಮನೆಯ ನಿರ್ಮಾಣ ಕಾಮಗಾರಿಯನ್ನು ನಿಲ್ಲಿಸಲು ಸೂಚಿಸಿದರು.
ಬಳಿಕ ಕೆಂಜಾರು ಶ್ರೀ ದೇವಿ ಕಾಲೇಜು ಆವರಣದಲ್ಲಿ ಉಂಟಾದ ಭೂಕುಸಿತ, ಮರವೂರು ಅಂತೋನಿಕಟ್ಟೆ ಎಂಬಲ್ಲಿ ಕಾಂಕ್ರೀಟ್ ತಡೆಗೋಡೆ ಕುಸಿದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಸುರತ್ಕಲ್ ಬಾಳ ಸಮೀಪ ಐ.ಎಸ್.ಪಿ.ಆರ್.ಎಲ್. ಗೆ ಸೇರಿದ ಪೈಪ್ಲೈನ್ ಹಾದುಹೋದ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ತುರ್ತು ಕ್ರಮ ಕೈಗೊಳ್ಳಲು ಐ.ಎಸ್.ಪಿ.ಆರ್.ಎಲ್. ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ ಪಕ್ಕದಲ್ಲಿ ಹಾದು ಹೋಗಿರುವ ಸಾರ್ವಜನಿಕ ರಸ್ತೆಯ ಸಮೀಪ ತಡೆ ಬೇಲಿ ಹಾಕಲು ತಿಳಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸಂತೋಷ್ ಕುಮಾರ್, ಉಪವಿಭಾಗಾಧಿಕಾರಿ ಹರ್ಷವರ್ಧನ್, ಮಂಗಳೂರು ತಹಶೀಲ್ದಾರ್ ಪ್ರಶಾಂತ್ ಪಾಟೀಲ್ ಮತ್ತಿತರರು ಇದ್ದರು.