ಮಂಗಳೂರು : ಕಳವು ಪ್ರಕರಣದಲ್ಲಿ ಜಾಮೀನು ಪಡೆದು ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲ ತಾಲೂಕಿನ ಮಂಜನಾಡಿ ಗ್ರಾಮದ ಕಲ್ಕಟ್ಟ, ಬದ್ರಿಯನಗರದ ನಿವಾಸಿ ಮೊಹಮ್ಮದ್ ಅಬ್ದುಲ್ ಫಯಾನ್(27) ಬಂಧಿತ ಆರೋಪಿ.
ಕೊಣಾಜೆ ಠಾಣಾ ವಾರೆಂಟ್ ಅಸಾಮಿ ಮೊಹಮ್ಮದ್ ಅಬ್ದುಲ್ ಫಯಾನ್ ವಿರುದ್ಧ ಕೊಣಾಜೆ, ಉಳ್ಳಾಲ, ಕಡಬ, ಬರ್ಕೆ, ಉಪ್ಪಿನಂಗಡಿ, ಪುತ್ತೂರು ನಗರ ಹಾಗೂ ಬಂಟ್ವಾಳ ನಗರ ಠಾಣೆಗಳಲ್ಲಿ ಒಟ್ಟು 24 ಪ್ರಕರಣಗಳು ದಾಖಲಾಗಿತ್ತು. ಪ್ರಕರಣದಲ್ಲಿ ಜಾಮೀನು ಪಡೆದ ಅಸಾಮಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ನ್ಯಾಯಾಲಯ ಆರೋಪಿಯ ಬಂಧನಕ್ಕೆ ವಾರೆಂಟ್ ಹೊರಡಿಸಿತ್ತು.
ಅದರಂತೆ 1 ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಮೊಹಮ್ಮದ್ ಅಬ್ದುಲ್ ಫಯಾನ್ನನ್ನು ಕೊಣಾಜೆ ಠಾಣಾ ಪೊಲೀಸ್ ನಿರೀಕ್ಷಕ ರಾಜೇಂದ್ರ ಬಿ., ಪೊಲೀಸ್ ಉಪ ನಿರೀಕ್ಷಕ ನಾಗರಾಜ್ ಎಸ್., ಸಿಬ್ಬಂದಿ ಹೆಚ್.ಸಿ.ಮಹಮ್ಮದ್ ಶರೀಫ್, ಪಿಸಿ 765 ಸಂತೋಷ್ ಕೇರಳದ ಮಂಜೇಶ್ವರ ಎಂಬಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.