ಉಡುಪಿ : ನಮ್ಮ ದೇಶದ ಬಹು ಸಂಸ್ಕೃತಿ ನಾಶವಾಗಿ ನಾವು ಏಕ ಸಂಸ್ಕೃತಿಯತ್ತ ಸಾಗುತ್ತಿರುವುದು ವಿಶಾದನೀಯ. ಹೀಗಾಗಿ ನಾಡಿನ ಜಾನಪದ ಸಂಸ್ಕೃತಿ, ಆಚರಣೆಗಳ ಬಗ್ಗೆ ದಾಖಲೀಕರಣ ಮಾಡುವ ಅಗತ್ಯವಿದೆ ಎಂದು ಪ್ರಸಿದ್ಧ ಜಾನಪದ ವಿದ್ವಾಂಸ ಡಾ. ವೈ. ಎನ್. ಶೆಟ್ಟಿ ಹೇಳಿದರು.
ಅವರು ಸೋಮವಾರ ಎಂಜಿಎo ಕಾಲೇಜಿನ ಮುದ್ದಣ್ಣ ಮಂಟಪದಲ್ಲಿ ರಂಗಭೂಮಿ ಉಡುಪಿ ವತಿಯಿಂದ ನಡೆಯುತ್ತಿರುವ ಮೂರು ದಿನಗಳ ರಂಗಭೂಮಿ ರಂಗೋತ್ಸವದ ಮೂರನೇ ದಿನದ ಕಾರ್ಯಕ್ರಮದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ ನೀಡುವ 2025ನೇ ಸಾಲಿನ ‘ತಲ್ಲೂರ್ಸ್ ಜಾನಪದ ಸಿರಿ’ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.
ನಮ್ಮ ಜನಪದರ ಆರೋಗ್ಯ ಪೂರ್ಣ ಆಚರಣೆಗಳು ನಮ್ಮ ಯುವ ಪೀಳಿಗೆಗೆ ಬೇಡವಾಗಿದೆ. ಈಶಾನ್ಯ ಭಾರತದಲ್ಲಿ ಶೇ.90ರಷ್ಟು ಬುಡಕಟ್ಟು ಜನಾಂಗಗಳು ತಮ್ಮ ಮೂಲ ಸಂಸ್ಕೃತಿಯನ್ನು ಮರೆತು ಏಕರೂಪದ ಸಂಸ್ಕೃತಿಯನ್ನು ಅಪ್ಪಿಕೊಂಡಿವೆ. ಈ ದುರಂತ ಇಲ್ಲಿಯೂ ನಡೆಯುವ ಅಪಾಯವಿದೆ. ಆದ್ದರಿಂದ ನಮ್ಮ ನಾಡಿನ ಜನಪದ ಕಲೆಗಳು, ಆಚರಣೆಗಳ ಬಗ್ಗೆ ದಾಖಲೀಕರಣ ನಡೆಯಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ. ಬೀ. ವಿಜಯ ಬಲ್ಲಾಳ್ ಮಾತನಾಡಿ, ನಮ್ಮ ಗ್ರಾಮೀಣ ಕೃಷಿ ಬದುಕು ನಮ್ಮ ಸಂಸ್ಕೃತಿಯ ನರ ನಾಡಿ ಇದ್ದಂತೆ. ಹೀಗಾಗಿ ನಮ್ಮ ಯುವ ಜನಾಂಗಕ್ಕೆ ಜಾನಪದದ ಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರಂಗಭೂಮಿ ಉಡುಪಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ಜಾನಪದ ಪರಿಷತ್ತು ಮುಂದಿನ ದಿನಗಳಲ್ಲಿ ಜಾನಪದ ಕಲೆಗಳಿಗೆ ಪ್ರೋತ್ಸಾಹ ನೀಡುವ ಇನ್ನಷ್ಟು ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಿದೆ. ಪ್ರಸ್ತುತ ಕೇರಳದ ಅಪೂರ್ವ ಜಾನಪದ ಕಲೆಗಳನ್ನು ನಮ್ಮ ಜನತೆ ಕೂಡಾ ಆಸ್ವಾದಿಸಬೇಕು ಎನ್ನುವ ಉದ್ದೇಶದಿಂದ ಕೇರಳ ಜಾನಪದ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸ ಡಾ. ವೈ.ಎನ್.ಶೆಟ್ಟಿ ಅವರು ಜಾನಪದ ಲೋಕಕ್ಕೆ ನೀಡಿದ ಅನುಪಮ ಕೊಡುಗೆಗಾಗಿ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ನೀಡುವ 2025ನೇ ಸಾಲಿನ “ತಲ್ಲೂರ್ಸ್ ಜಾನಪದ ಸಿರಿ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕೇರಳ ಕಲ್ಚರಲ್ ಆಂಡ್ ಸೋಷಿಯಲ್ ಸೆಂಟರ್ ಉಡುಪಿ ಅಧ್ಯಕ್ಷ ಸುಗುಣ ಕುಮಾರ್, ಕಾರ್ಯದರ್ಶಿ ಬಿನೇಶ್ ವಿ.ಸಿ., ಎಂಜಿಎo ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟಿನ ಟ್ರಸ್ಟಿ ಗಿರಿಜಾ ಶಿವರಾಮ ಶೆಟ್ಟಿ, ಜಾನಪದ ಪರಿಷತ್ತಿನ ಪದಾಧಿಕಾರಿಗಳಾದ ಗೋಪಾಲ್ ಸಿ.ಬಂಗೇರ, ಅರುಣ್ ಕುಮಾರ್ ಹೆಗ್ಡೆ, ಪ್ರಶಾಂತ್ ಕುಮಾರ್, ಎನ್.ಎಂ.ಹೆಗ್ಡೆ, ರಂಗಭೂಮಿಯ ಪ್ರದಾನ ಕಾರ್ಯದರ್ಶಿ ಪ್ರದೀಪ್ಚಂದ್ರ ಕುತ್ಪಾಡಿ, ಉಪಾಧ್ಯಕ್ಷರುಗಳಾದ ಎನ್.ಆರ್.ಬಲ್ಲಾಳ್ ಹಾಗೂ ಭಾಸ್ಕರ ರಾವ್ ಕಿದಿಯೂರು ಉಪಸ್ಥಿತರಿದ್ದರು.
ಕರ್ನಾಟಕ ಜಾನಪದ ಉಡುಪಿ ತಾಲೂಕು ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅನುಷಾ ಆಚಾರ್ಯ ಸ್ವಾಗತಿಸಿದರು. ಕೋಶಾಧಿಕಾರಿ ಪ್ರಶಾಂತ್ ಭಂಡಾರಿ ವಂದಿಸಿದರು.
ಈ ಸಂದರ್ಭದಲ್ಲಿ ರಸಿಕರ್ ಕೇರಳ ಎಂಟರ್ಟೈನ್ಮೆಂಟ್ ತಂಡದಿoದ ಕೇರಳದ ವೈವಿಧ್ಯಮಯ ಜಾನಪದ ಕಲಾ ಪ್ರಕಾರಗಳ ಪ್ರದರ್ಶನ ಸಭಿಕರ ಮನ ಸೂರೆಗೊಂಡಿತು.