ಬಂಟ್ವಾಳ : ಬಂಟ್ವಾಳ ಗ್ರಾಮಾಂತರ ಠಾಣೆ ವ್ಯಾಪ್ತಿಯ ಬಡಗಬೆಳ್ಳೂರಿನ ದೇವಸ್ಥಾನವೊಂದರ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಕಳೆದ 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬುಧವಾರ ಬಂಟ್ವಾಳ ಪೊಲೀಸರು ಕಾಸರಗೋಡಿನಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪಾಣಾಜೆ ಗ್ರಾಮದ ಉಡ್ಡಂಗಳ ನಿವಾಸಿ ಮೊಹಮ್ಮದ್ ಶರೀಫ್ (44) ಎಂದು ಗುರುತಿಸಲಾಗಿದೆ. ಈತ 2004ರ ನವೆಂಬರ್ನಲ್ಲಿ ಬಡಗಬೆಳ್ಳೂರಿನ ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನದ ಕಳ್ಳತನ ಪ್ರಕರಣದಲ್ಲಿ ಆರೋಪಿಯಾಗಿದ್ದ. ಕರ್ನಾಟಕ ಮತ್ತು ಕೇರಳ ರಾಜ್ಯದ ಹಲವಾರು ಕಡೆ ವಿಳಾಸ ಬದಲಾವಣೆ ಮಾಡಿಕೊಂಡು ಬಂಧನಕ್ಕೆ ಸಿಗದೆ ಕಾಸರಗೋಡಿನ ಪುತ್ತಿಗೆಯಲ್ಲಿ ವಾಸವಾಗಿದ್ದ. ಪೊಲೀಸರು ಆತನ ಕುರಿತು ಬೇರೆ ಬೇರೆ ಆಯಾಮಗಳಿಂದ ಮಾಹಿತಿ ಕಲೆ ಹಾಕಿ ಕಾಸರಗೋಡಿನಿಂದ ವಶಕ್ಕೆ ಪಡೆದಿದ್ದಾರೆ. ಈತನ ವಿರುದ್ಧ ಬಂಟ್ವಾಳ ನ್ಯಾಯಾಲಯ ವಾರಂಟ್ ಹೊರಡಿಸಿತ್ತು. ಆರೋಪಿ ಮೊಹಮ್ಮದ್ ಶರೀಫ್ಇತ್ತೀಚಿಗೆ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Kasaragod
ದೈವ ಕ್ಷೇತ್ರ ಉತ್ಸವದ ಸಂದರ್ಭ ಸಂಗ್ರಹಿಸಿಟ್ಟ ಪಟಾಕಿಯಲ್ಲಿ ಸ್ಫೋಟ; 154 ಜನರಿಗೆ ಗಾಯ
ಕಾಸರಗೋಡು : ನೀಲೇಶ್ವರ ಸಮೀಪದ ಅಂಜುತಂಬಲಂ ವೀರರ್ಕಾವ್ ದೈವ ಕ್ಷೇತ್ರ ಉತ್ಸವದ ಸಂದರ್ಭದಲ್ಲಿ ಪಟಾಕಿ ಸಂಗ್ರಹ ಪ್ರದೇಶದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಒಟ್ಟು 154 ಜನರು ಗಾಯಗೊಂಡಿದ್ದಾರೆ.
ಅಪಘಾತದಲ್ಲಿ 97 ಮಂದಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದಲ್ಲಿ ಗಾಯಗೊಂಡ ಎಂಟು ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ ಇಂಬಶೇಖರ್ ಹೇಳಿದರು. ಸೋಮವಾರ ತಡರಾತ್ರಿ 12 ಗಂಟೆಯ ವೇಳೆಗೆ ನಾಡನ್ನೆ ನಡುಗಿಸಿದ ಈ ದುರ್ಘಟನೆ ಸಂಭವಿಸಿದೆ.
ಜನ ಸಮೂಹ ಗುಂಪಾಗಿ ಸೇರಿದ್ದ ವೇಳೆ ಪಟಾಕಿ ಸಿಡಿಸಲಾಗಿದ್ದು ಈ ವೇಳೆ ಅಸುರಕ್ಷಿತವಾಗಿ ದಾಸ್ತಾನಿಸಿರಿದ್ದ ಪಟಾಕಿಗೆ ಒಮ್ಮಿಂದೊಮ್ಮೆಲೆ ಬೆಂಕಿ ಹತ್ತಿಕೊಂಡಿದ್ದು ಮಕ್ಕಳು ಮಹಿಳೆಯ ಸಹಿತ ಜನಗುಂಪಾಗಿ ಓಡತೊಡಗಿದ್ದರು.
ಅಪಘಾತದ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಅಂಚುತಂಬಲಂ ವೀರರ್ಕವ್ ಸಮಿತಿಯ ಅಧ್ಯಕ್ಷ ಮತ್ತು ಕಾರ್ಯದರ್ಶಿಯನ್ನು ಬಂಧಿಸಿದ್ದಾರೆ. ಅಪಘಾತದ ಸ್ಥಳದಲ್ಲಿ ನೂರಾರು ಜನರು ಸೇರಿದ್ದರು.
ಸುಟ್ಟಗಾಯಗಳಲ್ಲದೆ, ಕಾಲ್ತುಳಿತದಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ. ಅನುಮತಿ ಇಲ್ಲದೆ ಪಟಾಕಿಗಳನ್ನು ಸಂಗ್ರಹಿಸಲಾಗಿದೆ ಎಂದು ಕಾಸರಗೋಡು ಜಿಲ್ಲಾಧಿಕಾರಿ ಇಂಬಶೇಖರ್ ತಿಳಿಸಿದ್ದಾರೆ.
ಕನಿಷ್ಠ ಜನ ಅಂತರ ಕಾಯ್ದುಕೊಳ್ಳದೆ ಪಟಾಕಿ ಸಿಡಿಸಲಾಯಿತು. ಕಾನೂನಿನ ಪ್ರಕಾರ 100 ಮೀಟರ್ ಅಗತ್ಯವಿದೆ. ಎರಡ್ಮೂರು ಅಡಿ ಅಂತರದಲ್ಲಿ ಪಟಾಕಿ ಸಿಡಿಸಲಾಯಿತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪಟಾಕಿಗಳನ್ನು ಸಿಡಿಸುವ ಸಮೀಪದಲ್ಲಿಯೇ ಪಟಾಕಿ ಇಟ್ಟಿರುವುದು ಅಪಾಯಕ್ಕೆ ಕಾರಣವಾಗಿತ್ತು. ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಗಾಯಗೊಂಡವರಲ್ಲಿ ಸಂದೀಪ್ ಸ್ಥಿತಿ ಚಿಂತಾಜನಕವಾಗಿದೆ. 80ರಷ್ಟು ಸುಟ್ಟ ಗಾಯಗಳೊಂದಿಗೆ ಸಂದೀಪ್ ಅವರನ್ನು ಬೆಳಗ್ಗೆ ಪರಿಯಾರಂ ವೈದ್ಯಕೀಯ ಕಾಲೇಜಿನಿಂದ ಕೋಝಿಕ್ಕೋಡ್ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸದ್ಯ ಐವರು ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾಞಂಗಾಡ್ ಆಸ್ಪತ್ರೆಯಲ್ಲಿ 16, ಸಂಜೀವನಿ ಆಸ್ಪತ್ರೆಯಲ್ಲಿ 10, ಐಶಾಲ್ ಆಸ್ಪತ್ರೆಯಲ್ಲಿ 17, ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ 5, ಕಣ್ಣೂರು ಮಿಮ್ಸ್ನಲ್ಲಿ 18, ಕೋಝಿಕ್ಕೋಡ್ ಮಿಮ್ಸ್ನಲ್ಲಿ 2 ಮತ್ತು ಅರಿಮಲ ಆಸ್ಪತ್ರೆಯಲ್ಲಿ 3, ಕೆಎಎಚ್ ಚೆರುವತ್ತೂರಿನಲ್ಲಿ 2, ಮನ್ಸೂರ್ ಆಸ್ಪತ್ರೆಯಲ್ಲಿ 5 ಮತ್ತು ದೀಪಾ ಆಸ್ಪತ್ರೆಯಲ್ಲಿ ಒಬ್ಬರು, 18 ಮಂದಿ ಮಂಗಳೂರು ಎಜೆ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದುಬೈ ಗಡಿನಾಡ ಉತ್ಸವದಲ್ಲಿ ಶೈಕ್ಷಣಿಕ ಶ್ರೇಷ್ಠತೆಗಾಗಿ ಡಾ. ಫಖ್ರುದ್ದೀನ್ ಕುನಿಲ್ ಅವರಿಗೆ ಸನ್ಮಾನ
ಮಂಗಳೂರು : ದುಬೈನ ಔದ್ ಮೆಥಾದಲ್ಲಿರುವ ‘ಜೆಮ್’ ಖಾಸಗಿ ಶಾಲೆಯು, ಗಡಿನಾಡು ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯುಎಇ ಘಟಕದಿಂದ ಆಯೋಜಿಸಲಾದ ದುಬೈ ಗಡಿನಾಡ ಉತ್ಸವಕ್ಕೆ ಸಾಕ್ಷಿಯಾಯಿತು. ಈ ವಿಶೇಷ ಕಾರ್ಯಕ್ರಮದಲ್ಲಿ ಅಕಾಡೆಮಿಯು ತನ್ನ 50ನೇ ವಾರ್ಷಿಕೋತ್ಸವವನ್ನು ಆಚರಿಸಿತು. ಈ ಸುಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಗಳಿಗಾಗಿ ಪ್ರತಿಷ್ಠಿತ ಗಡಿನಾಡ ಪ್ರಶಸ್ತಿಯನ್ನು ಕುನಿಲ್ ಗ್ರೂಪ್ ಅಧ್ಯಕ್ಷರಾದ ಡಾ। ಫಖ್ರುದ್ದೀನ್ ಕುನಿಲ್, ಇವರಿಗೆ ನೀಡಿ ಗೌರವಿಸಿದೆ.
ಈ ಬಗ್ಗೆ ಡಾ. ಫಖ್ರುದ್ದೀನ್ ಕುನಿಲ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. 35 ವರ್ಷಗಳ ಹಿಂದೆ ಕಾಸರಗೋಡು ಜಿಲ್ಲೆಯ ಶಿರಿಯಾ ಎಂಬ ಸಣ್ಣ ಗ್ರಾಮದಲ್ಲಿ ಡಾ। ಕುನಿಲ್ ಅವರ ಶೈಕ್ಷಣಿಕ ಯಾತ್ರೆಯು ಪ್ರಾರಂಭವಾಯಿತು. ಅಲ್ಲಿ ಅವರು ಎಲ್.ಕೆ.ಜಿ.ಯಿಂದ 12ನೇ ತರಗತಿಯವರೆಗೆ ಸಮಗ್ರ ಶಿಕ್ಷಣವನ್ನು ನೀಡುವ ಶಾಲೆಯನ್ನು ಸ್ಥಾಪಿಸಿದರು. ಸ್ಥಳೀಯ ಸಮುದಾಯದ ಸಹಕಾರದೊಂದಿಗೆ ಅವರು ಬದಿಯಡ್ಕದಲ್ಲಿ ಎರಡನೇ ಶಾಲೆಯನ್ನು ಸ್ಥಾಪಿಸಿದರು ಹಾಗೂ ಅವರ ನಿರಂತರ ಬೆಂಬಲದಿಂದ ಉತ್ತೇಜಿತರಾಗಿ, ಕರ್ನಾಟಕದ ನಾಟೆಕಲ್’ನಲ್ಲಿ ಮತ್ತು ತುಂಬೆಯಲ್ಲಿ ಕುನಿಲ್ ಶಾಲೆಗಳನ್ನು ವಿಸ್ತರಿಸಿದರು.
ನಾಲ್ಕು ಶಾಲೆಗಳು 7000 ವಿದ್ಯಾರ್ಥಿಗಳಿಗೆ ಪೋಷಕ ಭೂಮಿಯಾಗಿ ಮಾರ್ಪಟ್ಟಿವೆ. 600 ವೃತ್ತಿಪರ ಸಿಬ್ಬಂದಿ ಮತ್ತು 125 ಶಾಲಾ ವಾಹನಗಳೊಂದಿಗೆ ಈ ಶಾಲೆಗಳು ಅತ್ತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. 100% ಫಲಿತಾಂಶವನ್ನು ನಿರಂತರವಾಗಿ ಕುನಿಲ್ ಶಾಲೆಗಳು ಸಾಧಿಸುತ್ತಿವೆ, ಇದು ಡಾ. ಫಖ್ರುದ್ದೀನ್ ಕುನಿಲ್ ಅವರ ಶಿಕ್ಷಣದಲ್ಲಿನ ಶ್ರೇಷ್ಠತೆಯ ಬದ್ಧತೆಗೆ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಅನುಮತಿ ದೊರೆತರೆ ಅಧ್ಯಕ್ಷರಾದ ಡಾ। ಫಖ್ರುದ್ದೀನ್ ಕುನಿಲ್ ಅವರು ಬಿ.ಎ., ಬಿ.ಕಾಂ, ಬಿ.ಎಸ್ಸಿ ಮತ್ತು ಬಿ.ಬಿ.ಎ.ಯಲ್ಲಿ ಪದವಿ ಕೋರ್ಸ್ಗಳನ್ನು ಪರಿಚಯಿಸಲು ಯೋಜನೆಯನ್ನು ರೂಪಿಸಿದ್ದಾರೆ. ಇದರಿಂದಾಗಿ ಶೈಕ್ಷಣಿಕ ಅವಕಾಶಗಳನ್ನು ಇನ್ನಷ್ಟು ಸಮೃದ್ಧಗೊಳಿಸಿ, ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸಬಹುದಾಗಿದೆ.
ಪತ್ರಿಕಾ ಗೋಷ್ಠಿಯಲ್ಲಿ ಕುನಿಲ್ ಗ್ರೂಪ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜ್ ಪ್ರಸಾದ್ ನಾಯ್ಕ್ ಉಪಸ್ಥಿತರಿದ್ದರು.
ಪಡುಬಿದ್ರಿ : ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ 2023-24ನೇ ಸಾಲಿನಲ್ಲಿ ನಡೆದ 24 ಕಂಬಳ ಕೂಟಗಳಿಗೆ ಸರಕಾರದಿಂದ ಬರಬೇಕಿದ್ದ ತಲಾ 5 ಲಕ್ಷ ರೂ. ಅನುದಾನ ಇದುವರೆಗೂ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಉಭಯ ಜಿಲ್ಲೆಗಳ ಎಲ್ಲ ಕಂಬಳದ ವ್ಯವಸ್ಥಾಪಕರು ಹಾಗೂ ಜಿಲ್ಲಾ ಸಮಿತಿಯ ತುರ್ತು ಸಮಾಲೋಚನೆ ಸಭೆಯನ್ನು ಜೂ. 16ರ ಅಪರಾಹ್ನ 3 ಗಂಟೆಗೆ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಕರೆಯಲಾಗಿದೆ.
ಅನುದಾನಕ್ಕಾಗಿ ಜಿಲ್ಲಾ ಕಂಬಳ ಸಮಿತಿಯು ಸರಕಾರಕ್ಕೆ ಮನವಿ ಸಲ್ಲಿಸಿದ್ದರೂ ಸರಕಾರ ಅದನ್ನು ಪರಿಗಣಿಸಿಲ್ಲ. ಆದ್ದರಿಂದ ನಮ್ಮ ಮುಂದಿನ ನಡೆಯ ಬಗ್ಗೆ ಚರ್ಚಿಸಲು ದ.ಕ., ಉಡುಪಿ, ಕಾಸರಗೋಡು ಜಿಲ್ಲೆಗಳ ಎಲ್ಲ ಜೋಡುಕರೆ ಕಂಬಳ ವ್ಯವಸ್ಥಾಪಕರು ಪಾಲ್ಗೊಳ್ಳಬೇಕು ಎಂದು ಕಂಬಳ ಸಮಿತಿಗಳ ಪದಾಧಿಕಾರಿಗಳು ತಿಳಿಸಿದ್ದಾರೆ.