ಉಡುಪಿ : ಕಂಚಿನಡ್ಕದಲ್ಲಿ ಸ್ಥಾಪಿಸಲುದ್ದೇಶಿಸಿದ್ದ ಟೋಲ್ಗೇಟ್ಗೆ ಸಚಿವ ಸತೀಶ್ ಜಾರಕಹೊಳಿ ಅವರು ತಾತ್ಕಾಲಿಕ ತಡೆ ವಿಧಿಸಿದ್ದಾರೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದ್ದಾರೆ.
ಉಡುಪಿ ಪ್ರೆಸ್ಕ್ಲಬ್ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟೋಲ್ಗೇಟ್ಗೆ ಸಂಬಂಧಿಸಿದಂತೆ ಎಲ್ಲಾ ಪ್ರಕ್ರಿಯೆಗಳು ಈಗ ಸ್ಥಗಿತಗೊಂಡಿದೆ. ಕಾನೂನು ಸೇರಿದಂತೆ ವಿವಿಧ ಸಮಸ್ಯೆಗಳಿರುವುದರಿಂದ ನಿಧಾನವಾಗಿ ಅದನ್ನು ರದ್ದುಪಡಿಸುವ ಭರವಸೆಯನ್ನು ಸಚಿವರು ನೀಡಿದ್ದಾರೆ ಎಂದರು.
ರಾಜ್ಯದ ಇನ್ನೂ ನಾಲ್ಕು ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಪ್ರಕ್ರಿಯೆ ಯಾವುದೇ ಸಮಸ್ಯೆ ಇಲ್ಲದೇ ನಡೆಯುತ್ತಿದೆ. ಈಗ ಇದನ್ನು ಒಮ್ಮಿಂದೊಮ್ಮೆಗೆ ರದ್ದುಪಡಿಸಿದರೆ ಉಳಿದ ಕಡೆಗಳಲ್ಲಿ ಸಮಸ್ಯೆಗಳು ಎದುರಾಗಬಹುದು. ಅಲ್ಲದೇ ಗುತ್ತಿಗೆದಾರರೊಂದಿಗೆ ಮೊದಲೇ ಒಪ್ಪಂದವಾಗಿರುವುದರಿಂದ ಅವರು ನ್ಯಾಯಾಲಯದ ಮೆಟ್ಟಲು ಏರಲು ಸಾಧ್ಯವಿದೆ ಎಂದರು.
ಈ ಟೋಲ್ಗೇಟ್ ಬಿಜೆಪಿ ಸರಕಾರದ ಕೊಡುಗೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಹೆದ್ದಾರಿಯನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಖಾಸಗಿಯವರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದರಲ್ಲಿ ಅವರಿಗೆ ಟೋಲ್ ಸಂಗ್ರಹಿಸುವ ಅವಕಾಶವನ್ನೂ ನೀಡಲಾಗಿತ್ತು ಎಂದು ಸೊರಕೆ ಬಹಿರಂಗ ಪಡಿಸಿದರು.