ಉಡುಪಿ : ಕ್ರೈಸ್ತ ಸಮುದಾಯದ ಪವಿತ್ರ ದಿನವಾದ ಶುಭ ಶುಕ್ರವಾರವನ್ನು (ಗುಡ್ ಫ್ರೈಡೆ) ಜಿಲ್ಲೆಯಾದ್ಯಂತ ಉಪವಾಸ, ಧ್ಯಾನ ಹಾಗೂ ಪ್ರಾರ್ಥನೆಯೊಂದಿಗೆ ಆಚರಿಸಲಾಯಿತು.
ಧರ್ಮಪ್ರಾಂತ್ಯದ ಪ್ರಧಾನ ದೇವಾಲಯ ಮಿಲಾಗ್ರಿಸ್ ಕ್ಯಾಥೆಡ್ರಲ್ ಚರ್ಚ್ ನಲ್ಲಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ|ಡಾ| ಜೆರಾಲ್ಡ್ ಐಸಾಕ್ ಲೋಬೊ ಪ್ರಾರ್ಥನಾ ವಿಧಿಯನ್ನು ನೆರವೇರಿಸಿದರು.
ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಗುಡ್ ಫ್ರೈಡೆ ಸಂದೇಶ ನೀಡಿ, ಶುಭ ಶುಕ್ರವಾರ ಯೇಸು ಇಡೀ ಮನುಕುಲದ ವಿಮೋಚನೆಗಾಗಿ ತನ್ನಾತ್ಮವನ್ನು ಪಿತನ ಕೈಗೊಪ್ಪಿಸಿದ ದಿನ. ಕ್ರಿಸ್ತನ ತ್ಯಾಗದ ಮಹತ್ವವನ್ನು ಧ್ಯಾನಿಸುವ ಪವಿತ್ರ ದಿನ. ಶುಭ ಶುಕ್ರವಾರ ನಿಮ್ಮ ಬದುಕಿನಲ್ಲಿ ಪ್ರೀತಿಯ, ಕ್ಷಮೆಯ ಮತ್ತು ತ್ಯಾಗದ ಅರ್ಥವನ್ನು ಅರಿಯಲು ಸಹಾಯ ಮಾಡುತ್ತದೆ. ಈದಿನ ಯೇಸು ಮಾನವನ ಮೇಲಿರುವ ಅವನ ಅನಂತ ಪ್ರೀತಿಯನ್ನು ತೋರಿಸಲು ಶಿಲುಬೆಯ ಮೇಲೆ ತನ್ನ ಪ್ರಾಣವನ್ನೇ ಅರ್ಪಿಸಿದ ಶುಭದಿನ.
ಪ್ರಭು ಕ್ರಿಸ್ತರು ಶಿಲುಬೆಗೆ ಜಡಿಯಲ್ಪಟ್ಟಾಗ ಅದು ಮನುಕುಲಕ್ಕಾಗಿ ಮಾಡಿದ ಪ್ರೀತಿಯ ಉಡುಗೊರೆಯಾಯಿತು. ನಮ್ಮೆಲ್ಲರ ಪಾಪಾಗಳಿಗೆ ಕ್ಷಮೆಯಂತೆ ಅವನ ತ್ಯಾಗವು ನಮ್ಮ ಬದುಕಿಗೆ ದಾರಿ ದೀಪವಾಯಿತು. ನಮ್ಮೆಲ್ಲರ ಪಾಪಾಗಳಿಗೆ ಕ್ಷಮೆಯಂತೆ ಅವನ ತ್ಯಾಗವು ನಮ್ಮ ಬದುಕಿಗೆ ದಾರಿದೀಪವಾಯಿತು. ಪ್ರೀತಿಯ ಅಗಾಧತೆಯನ್ನು ತೋರಿಸುವ ಸರ್ವೋಚ್ಚ ತ್ಯಾಗದ ಸಂಕೇತವಾಯಿತು.
ಇಂದಿನ ವೈಷಮ್ಯದಿಂದ ಕೂಡಿದ ಜಗತ್ತಿನಲ್ಲಿ ಕ್ರಿಸ್ತನ ಬಲಿದಾನವು ನಮಗೆ ಸಹಾನುಭೂತಿ, ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳೆಡೆಗೆ ಮನವನ್ನು ನಮಗೆ ಪ್ರೀತಿ ಮತ್ತುಕ್ಷಮೆಯ ಮೂಲಕ ನಿಜವಾದ ಶಾಂತಿಯನ್ನು ಪಡೆಯಬಹುದು. ಕ್ರಿಸ್ತನ ತ್ಯಾಗ, ನಮ್ಮ ಜೀವನದಲ್ಲಿ ದಾರಿತೋರಿಸುವ ಬೆಳಕಾಗಲಿ. ಪ್ರೀತಿ, ಕ್ಷಮೆ, ಪರೋಪಕಾರದ ಮೂಲಕ ನವ ಸಮಾಜವನ್ನು ಕಟ್ಟೋಣ. ಒಬ್ಬರೊಗೊಬ್ಬರು ಪ್ರೀತಿ ನೀಡುವ, ವೈರಿಗಳಿಗೆ ಕ್ಷಮೆ ನೀಡುವ, ಮತ್ತು ನೋವಿನ ಸಡುವೆಯೂ ಶಾಂತಿಯನ್ನು ಕಟ್ಟುವ ಸಂಕಲ್ಪದೊಂದಿಗೆ ಜೀವಿಸೋಣ ಎಂದರು.
ಚರ್ಚ್ಗಳಲ್ಲಿ ಕ್ರೈಸ್ತರು ಉಪವಾಸ, ಧ್ಯಾನ, ಪ್ರಾರ್ಥನೆ ಸಲ್ಲಿಸಿದರು. ಯೇಸುವಿನ ಮರಣದ ಹಿನ್ನೆಲೆಯಲ್ಲಿ ಎಲ್ಲೆಡೆ ಮೌನ ಅವರಿಸಿತ್ತು. ಕೆಲವು ಚರ್ಚ್ ಗಳಲ್ಲಿ ಯೇಸು ಕ್ರಿಸ್ತರ ಬಂಧನ, ಶಿಲುಬೆಯ ಮೇಲೆ ಮರಣವನ್ನಪ್ಪುವ ಘಟನಾವಳಿಗಳನ್ನು ಪ್ರಸ್ತುತಪಡಿಸಲಾಯಿತು. ಧರ್ಮಗುರುಗಳು ರಕ್ತವರ್ಣದ ಪೂಜಾ ಬಟ್ಟೆ ಧರಿಸಿ ಯೇಸು ಕ್ರಿಸ್ತನ ಕೊನೆಯ ಘಳಿಗೆಗಳ ವತ್ತಾಂತ ಓದಿದರು. ಬಳಿಕ ಶಿಲುಬೆಯನ್ನು ಮೆರವಣಿಗೆಯಲ್ಲಿ ತರಲಾಯಿತು. ತ್ಯಾಗದ ಉಳಿಕೆಯ ಹಣವನ್ನು ಬಡವರಿಗೆ ಹಂಚಲಾಯಿತು.