ಉಡುಪಿ : ಉಡುಪಿ ಭಾಗದ ಯುವ ಜನತೆಯ ಬಹುದಶಕದ ಬೇಡಿಕೆಯಾಗಿರುವ ಉಡುಪಿಯಲ್ಲಿ ಐಟಿ ಬಿಟಿ ಪಾರ್ಕ್ ಯೋಜನೆ ಮಂಜೂರು ಮಾಡುವಂತೆ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆಯವರನ್ನು ಭೇಟಿಯಾಗಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮನವಿ ಮಾಡಿದರು.
ಶಿಕ್ಷಣ ಕಾಶಿ ಎಂದು ಪ್ರಸಿದ್ಧಿ ಹೊಂದಿರುವ ಉಡುಪಿ ಜಿಲ್ಲೆಯು ಶೈಕ್ಷಣಿಕವಾಗಿ ನಿರಂತರ ಉತ್ತಮ ಫಲಿತಾಂಶದೊಂದಿಗೆ ಗಮನಾರ್ಹ ಸಾಧನೆ ಮಾಡಿಕೊಂಡು ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದೆ.
ಉಡುಪಿ ಜಿಲ್ಲೆಯು ಭೂ, ಜಲ, ರೈಲ್ವೇ ಮತ್ತು ವಾಯು ಸಾರಿಗೆಯ ಸಂಪರ್ಕದೊಂದಿಗೆ ನಾಲ್ಕು ವಿಧದ ಅತ್ಯುತ್ತಮ ಸಾರಿಗೆ ಸಂಪರ್ಕ ಹೊಂದಿದ ಜಿಲ್ಲೆಯಾಗಿದೆ. ಪ್ರವಾಸೋದ್ಯಮ, ಮೀನುಗಾರಿಕೆ ಧಾರ್ಮಿಕ ಕೇಂದ್ರ, ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್ ವ್ಯವಸ್ಥೆ, ಸಹಕಾರ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದೆ.
ಪ್ರತಿ ವರ್ಷವೂ ಸಾವಿರಾರು ವಿದ್ಯಾರ್ಥಿಗಳು ಇಂಜಿನಿಯರಿಂಗ್ ಪೂರ್ಣಗೊಳಿಸಿ, ತೇರ್ಗಡೆ ಹೊಂದುತ್ತಿದ್ದು, ಜಿಲ್ಲೆಯಲ್ಲಿ ವಿದ್ಯಾಭ್ಯಾಸಕ್ಕೆ ಸೂಕ್ತವಾದ ಉದ್ಯೋಗ ಅವಕಾಶ ದೊರಕದೆ, ಉದ್ಯೋಗ ಅರಸಿ ಹೊರ ಜಿಲ್ಲೆ ಯಾ ರಾಜ್ಯಗಳಿಗೆ ವಲಸೆ ಹೋಗುವ ಪರಿಸ್ಥಿತಿಯಿದೆ. ಜಿಲ್ಲೆಯ ಪ್ರತಿಭಾವಂತ ಪದವೀಧರರಿಗೆ ಸ್ಥಳೀಯವಾಗಿ ಉದ್ಯೋಗದ ಅವಕಾಶ ಕಲ್ಪಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ.
ಜಿಲ್ಲೆಯಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿ, ಉದ್ಯೋಗ ಅರಸಿ ಹೊರ ಊರುಗಳಿಗೆ ವಲಸೆ ಹೋಗುವ ಪದವೀಧರರಿಗೆ ಜಿಲ್ಲೆಯಲ್ಲಿಯೇ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಉಡುಪಿಯಲ್ಲಿ ಮಾಹಿತಿ ತಂತ್ರಜ್ಞಾನ-ಜೈವಿಕ ತಂತ್ರಜ್ಞಾನ ಉದ್ಯಾನವನ (ಐಟಿ-ಬಿಟಿ ಪಾರ್ಕ್) ಯೋಜನೆ ಸರಕಾರದ ವತಿಯಿಂದ ಅಥವಾ ಖಾಸಗಿ ಸಹಭಾಗಿತ್ವದೊಂದಿಗೆ ಅನುಷ್ಠಾನಗೊಳಿಸಲು ವಿಶೇಷ ಮುತುವರ್ಜಿ ವಹಿಸಿ ಕ್ರಮ ವಹಿಸುವಂತೆ ಸಚಿವರಿಗೆ ಯಶ್ಪಾಲ್ ಸುವರ್ಣ ಮನವಿ ಮಾಡಿದ್ದಾರೆ.