ಉಡುಪಿ : ಭಾರತದಲ್ಲಿ ಪ್ರತಿ ಮೂರು ನಿಮಿಷಕ್ಕೆ ಒಬ್ಬರು ರಸ್ತೆ ಅಪಘಾತದಿಂದ ಮರಣ ಹೊಂದುತ್ತಿದ್ದಾರೆ. ವರ್ಷಕ್ಕೆ ಸುಮಾರು 1.69ಲಕ್ಷ ಜನ ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ. ಭಾರತದ ಆರ್ಥಿಕ ವ್ಯವಸ್ಥೆಗೆ ಅಪಘಾತ ಪ್ರಕರಣಗಳು ಬಹಳ ದೊಡ್ಡ ಮಾರಕವಾಗಿ ಪರಿಣಮಿಸಿವೆ. ಆದುದರಿಂದ ಅಪಘಾತ ಪ್ರಕರಣಗಳು ಕೊರೋನಾಗಿಂತಲೂ ಮಹಾಮಾರಿಯಾಗಿದೆ ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ.ಸಿದ್ಧಲಿಂಗಪ್ಪ ಹೇಳಿದ್ದಾರೆ.
ಲಯನ್ಸ್ ಇಂಟರ್ನ್ಯಾಶನಲ್ ಜಿಲ್ಲಾ 317ಸಿ ಲಿಯೋ ಜಿಲ್ಲಾ 317ಸಿ ಹಾಗೂ ಉಡುಪಿ ಎಂಜಿಎಂ ಪದವಿ ಪೂರ್ವ ಕಾಲೇಜಿನ ಸಹಯೋಗದೊಂದಿಗೆ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಸೋಮವಾರ ಆಯೋಜಿಸಲಾದ ರಸ್ತೆ ಸುರಕ್ಷತೆ ಮತ್ತು ಸಂಚಾರ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಅಪಘಾತದಲ್ಲಿ ಯಜಮಾನ ಮೃತಪಟ್ಟರೆ ಆ ಕುಟುಂಬದ ಶೇ.75ರಷ್ಟು ಆರ್ಥಿಕ ವ್ಯವಸ್ಥೆ ಕುಸಿದು ಹೋಗುತ್ತದೆ. ಆದುದರಿಂದ ಪ್ರತಿಯೊಬ್ಬರು ರಸ್ತೆ ನಿಯಮಗಳನ್ನು ಅರಿತುಕೊಳ್ಳಬೇಕು, ತಮ್ಮ ಬಳಿ ಎಲ್ಲ ದಾಖಲೆಗಳನ್ನು ಇಟ್ಟುಕೊಳ್ಳಬೇಕು ಮತ್ತು ತಾಳ್ಮೆಯಿಂದ ವಾಹನ ಚಲಾಯಿಸಬೇಕು. ಆಗ ಮಾತ್ರ ರಸ್ತೆ ಅಪಘಾತ ಪ್ರಕರಣಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.
63ಲಕ್ಷ ಕಿ.ಮೀ. ಉದ್ದದ ರಸ್ತೆ ಹೊಂದಿರುವ ಭಾರತ ಜಗತ್ತಿನಲ್ಲಿ ಎರಡನೇ ಸ್ಥಾನದಲ್ಲಿದೆ. ಅಪಘಾತ ಪ್ರಕರಣಗಳಲ್ಲಿ ಭಾರತ ಮೊದಲನೇ ಸ್ಥಾನದಲ್ಲಿದೆ. ಇದಕ್ಕೆ ಜನಸಂಖ್ಯೆ ಹಾಗೂ ವಾಹನ ಸಂಖ್ಯೆಗಳು ಜಾಸ್ತಿಯಾಗುತ್ತಿರುವುದು ಕಾರಣವಾಗಿದೆ. ಭಾರತದಲ್ಲಿ ತಮಿಳುನಾಡು ಅತೀ ಹೆಚ್ಚು ಅಪಘಾತಗಳು ಸಂಭವಿಸುವ ರಾಜ್ಯವಾಗಿದೆ. ಇದರಲ್ಲಿ ಕರ್ನಾಟಕ ಐದನೇ ಸ್ಥಾನದಲ್ಲಿದೆ ಎಂದು ಅವರು ತಿಳಿಸಿದರು.