ಮಂಗಳೂರು : ಅಶಕ್ತರಿಗೆ, ಸಂಕಷ್ಟದಲ್ಲಿ ಇರುವವರಿಗೆ ನೆರವಾಗುವುದು ಅತ್ಯಂತ ಶ್ರೇಷ್ಠ ಕಾರ್ಯವಾಗಿದೆ. ಕಾಲು ಕಳಕೊಂಡವರಿಗೆ ಕೃತಕ ಕಾಲು ಒದಗಿಸುವುದರಿಂದ ಹೊಸ ಬದುಕು ನೀಡಿದಂತಾಗುತ್ತದೆ ಎಂದು ವೆನ್ಲಾಕ್ ಆಸ್ಪತ್ರೆಯ ಡಿಎಂಒ ಡಾ.ಶಿವಪ್ರಕಾಶ್ ಹೇಳಿದರು.
ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ನಗರದ ವೆನ್ಲಾಕ್ ಆಸ್ಪತ್ರೆಯ ಲಯನ್ಸ್ ಲಿಂಬ್ ಸೆಂಟರ್ನಲ್ಲಿ ಕೊಣಾಜೆಯ ಅಬ್ದುಲ್ ರವೂಫ್ ಅವರಿಗೆ ಉಚಿತ ಕೃತಕ ಕಾಲು ವಿತರಿಸಿ ಮಾತನಾಡಿದ ಅವರು ಪತ್ರಕರ್ತರ ಸಂಘಟನೆ ಇಂತಹ ಮಾನವೀಯ ಕಾರ್ಯದಲ್ಲಿ ತೊಡಗಿರುವುದು ಸಮಾಜಕ್ಕೆ ಪ್ರೇರಣೆಯಾಗಿದೆ ಎಂದರು.
ವೆನ್ಲಾಕ್ ಆಸ್ಪತ್ರೆಯ ಆರ್ಥೊ ಸರ್ಜನ್ ಡಾ.ಕೆ.ಆರ್.ಕಾಮತ್ ಮಾತನಾಡಿ ‘ಕೃತಕ ಕಾಲುಗಳಿಗೆ ಜನತೆಯಿಂದ ಬೇಡಿಕೆ ಇದ್ದು, ಉಚಿತವಾಗಿ ಒದಗಿಸಲು ದಾನಿಗಳ ಅವಶ್ಯಕತೆ ಇದೆ’ ಎಂದರು.
ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ
ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಲಯನ್ಸ್ ಲಿಂಬ್ ಸೆಂಟರ್ನ ಮ್ಯಾನೇಜರ್ ಕೆ.ಸುರೇಶ್ ಶೆಟ್ಟಿ, ನಿವೃತ್ತ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಪ್ರೆಸ್ ಕ್ಲಬ್ ಕಾರ್ಯದರ್ಶಿ ಪುಷ್ಪರಾಜ್ ಬಿ.ಎನ್., ಕಾರ್ಯಕಾರಿ ಸಮಿತಿ ಸದಸ್ಯರಾದ ರಾಜೇಶ್ ಶೆಟ್ಟಿ ದಡ್ಡಂಗಡಿ, ಬಿ.ಎಸ್.ಜೀವನ್, ವೆನ್ಲಾಕ್ ರಕ್ಷಾ ಸಮಿತಿ ಸದಸ್ಯ ಸಲೀಂ ಮಕ್ಕಾ, ಲಯನ್ಸ್ ಲಿಂಬ್ ಸೆಂಟರ್ನ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರೆಸ್ ಕ್ಲಬ್ ಉಪಾಧ್ಯಕ್ಷ ಮುಹಮ್ಮದ್ ಆರಿಫ್ ಪಡುಬಿದ್ರಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು.