ಉಡುಪಿ : ಕೇಂದ್ರ ಸರಕಾರ, ಕರ್ನಾಟಕ ರಾಜ್ಯಕ್ಕೆ ಹಿಂದಿನ ವರ್ಷಗಳ ವಸತಿ ಯೋಜನೆಯ ಅನುಷ್ಠಾನಕ್ಕಾಗಿ ಗ್ರಾಮೀಣ ವಸತಿ ಯೋಜನೆಗೆ 400 ಕೋಟಿ ರೂ. ಹಾಗೂ ನಗರ ವಸತಿ ಯೋಜನೆಗೆ 75 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ತಮ್ಮ ಕಚೇರಿಯಲ್ಲಿ ನಡೆಸಿದ ಉಡುಪಿ ಜಿಲ್ಲೆಯ ನಗರ ಸ್ಥಳೀಯಾಡಳಿತದ ಪುರಸಭೆ, ಪಟ್ಟಣ ಪಂಚಾಯತ್ ಮತ್ತು ನಗರಸಭೆ ಅಧಿಕಾರಿಗಳ ಸಭೆಯಲ್ಲಿ ಅವರು ಈ ವಿಷಯ ಪ್ರಕಟಿಸಿದರು.
ನಗರಾಡಳಿತ ಸಂಸ್ಥೆಗಳ ವಾಜಪೇಯಿ ವಸತಿ ಯೋಜನೆ ಮತ್ತು ಅಂಬೇಡ್ಕರ್ ವಸತಿ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದ ಕೋಟ, ಸಾದ್ಯವಾದಷ್ಟು ಬೇಗ ವಸತಿ ಯೋಜನೆಯಲ್ಲಿ ಪ್ರಗತಿಯನ್ನು ಸಾಧಿಸಿ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡಲು ಸೂಚಿಸಿದರು.
ಉಡುಪಿ ಜಿಲ್ಲೆಯಲ್ಲಿರುವ ಉಡುಪಿ ನಗರಸಭೆ, ಕುಂದಾಪುರ ಪುರಸಭೆ, ಕಾರ್ಕಳ ಪುರಸಭೆ, ಬೈಂದೂರು ಪಟ್ಟಣ ಪಂಚಾಯತ್, ಸಾಲಿಗ್ರಾಮ ಪಟ್ಟಣ ಪಂಚಾಯತ್ನ ಮುಖ್ಯಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಮಾಹಿತಿಗಳನ್ನು ಪಡೆದ ಅವರು ಈವರೆಗೆ ಶೇ.80ರಷ್ಟು ಮಾತ್ರ ಬಡವರ ವಸತಿ ಯೋಜನೆಯು ಅನುಷ್ಠಾನವಾಗಿದ್ದು, ಉಳಿಕೆ ಮನೆಗಳ ಪ್ರಗತಿಯನ್ನು ಕೂಡಲೆ ಪರಿಶೀಲಿಸಿ, ಪೂರ್ಣ ಪ್ರಮಾಣದಲ್ಲಿ ಬಡವರ ವಸತಿ ಯೋಜನೆಯನ್ನು ಅನುಷ್ಠಾನ ಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಿದರು.