ಉಡುಪಿ : ನಾಗರ ಪಂಚಮಿ ಹಬ್ಬ ಸಮೀಪಿಸುತ್ತಲೇ ಶಂಕರಪುರ ಮಲ್ಲಿಗೆ ದರ ದಿಢೀರ್ ಗಗನಕ್ಕೇರಿದೆ. 2 ವಾರಗಳ ಹಿಂದೆ ಜುಲೈ 22ರಂದು 1 ಅಟ್ಟೆಗೆ (4 ಚೆಂಡು) 280 ರೂ. ಇದ್ದ ದರ ಆಗಸ್ಟ್ 7ರಂದು 2,100ಕ್ಕೆ ತಲುಪಿದೆ.
ಜುಲೈ ಪೂರ್ತಿ ಹೆಚ್ಚಿನ ಮಲ್ಲಿಗೆ ಬೆಳೆಗಾರರ ಕೃಷಿ ಹಾನಿಯಾಗಿದೆ. ಮಳೆಗಾಲದಲ್ಲಿ ಬಿಸಿಲು ಕಡಿಮೆಯಾಗಿ ನೀರು ಹೆಚ್ಚಾಗಿರುವ ಪರಿಣಾಮ ವಿವಿಧ ಕೀಟ, ರೋಗಾಣುಗಳ ಪ್ರಭಾವದಿಂದ ಗಿಡಗಳ ಬೇರುಗಳು ಕೊಳೆತು ಎಲೆ ಉದುರುವುದು, ಗಿಡದ ಗಂಟಿಗಳು ಸಾಯುವುದರ ಜತೆಗೆ ಪೂರ್ತಿ ಗಿಡವೇ ನಾಶವಾಗುವಂತಹ ಘಟನೆಗಳೂ ಜಿಲ್ಲೆಯಲ್ಲಿ ನಡೆದಿವೆ. ದಿನಕ್ಕೆ 100 ಚೆಂಡುಗಳಷ್ಟು ಮಲ್ಲಿಗೆ ಮಾರಾಟ ಮಾಡಿಕೊಂಡಿದ್ದೆವು. ಆದರೆ ಈಗ ಒಂದು ಚೆಂಡು ಮಲ್ಲಿಗೆ ಹೊಂದಿಸಲೂ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಕೃಷಿಕರು.ಇನ್ನು
ದುಬಾರಿ ದರ ಕೊಟ್ಟರೂ ಮಾರುಕಟ್ಟೆಯಲ್ಲಿ ಮಲ್ಲಿಗೆ ಸಿಗದ ಪರಿಸ್ಥಿತಿ ಇದೆ. ಭಟ್ಕಳ ಮಲ್ಲಿಗೆ ಹಾಗೂ ಶಂಕರಪುರ ಮಲ್ಲಿಗೆಯ ದರವೂ ಒಂದೇ ರೀತಿ ಇದೆ. ಎರಡೂ ಭಾಗದಿಂದ ಬರುವ ಮಲ್ಲಿಗೆ ಪ್ರಮಾಣ ಬಹಳಷ್ಟು ಇಳಿಕೆಯಾಗಿದೆ.
ಸರಿಯಾಗಿ ಬಿಸಿಲು ಇಲ್ಲದೆ ಮಲ್ಲಿಗೆ ಕೃಷಿ ಸೊರಗಿದೆ. ಕನಿಷ್ಠ ಒಂದು ವಾರವಾದರೂ ಬಿಸಿಲು ಬಂದರೆ ಮಲ್ಲಿಗೆ ಕೀಳಲು ಸಾಧ್ಯವಾಗುತ್ತದೆ. ಕೆಲವು ಭಾಗಗಳಲ್ಲಿ ಅಪಾರ ಪ್ರಮಾಣದಲ್ಲಿ ಈ ಕೃಷಿಯೇ ನಾಶವಾಗಿದೆ. ಇದೂ ಕೂಡ ದರ ಏರಿಕೆಗೆ ಮುಖ್ಯ ಕಾರಣ. ಇನ್ನು ನಾಗರಪಂಚಮಿಗೆ ಹೇರಳ ಪ್ರಮಾಣದಲ್ಲಿ ಬೇಕಾಗುವ ಸಿಯಾಳ ದರವೂ ದುಬಾರಿಯಾಗಿದೆ.