ಉಡುಪಿ : ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದ ಹತಾಶೆಯಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ನಡೆದುಕೊಳ್ಳುತ್ತಿರುವ ಮಾಜಿ ಶಾಸಕರು ಕೆಲ ಹಿಂದೂ ವಿರೋಧಿ ಶಕ್ತಿಗಳ ಆಟಕ್ಕೆ ಗೊಂಬೆಯಂತೆ ಕುಣಿಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಖಂಡ ಹಿಂದೂರಾಷ್ಟ್ರದ ಕಲ್ಪನೆಗೆ ಮಗ್ಗಲ ಮುಳ್ಳಾಗಿರುವ ಗೋ ಭಕ್ಷಕರನ್ನು ದೇವಸ್ಥಾನದ ಪ್ರಾಂಗಣದೊಳಕ್ಕೆ ಕರೆಸಿ ದೇವಸ್ಥಾನದ ಪಾವಿತ್ರ್ಯ ತೆಯನ್ನು ಅಶುದ್ದಿ ಗೊಳಿಸಿರುವಿರಿ. ಹಿಂದೂ ಸಮಾಜದ ಬೆಂಬಲದಿಂದಲೇ ಮೂರು ಬಾರಿ ವಿಧಾನಸಭೆ ಪ್ರವೇಶಿಸಿದ ತಾವು ಅಧಿಕಾರದಲಿದ್ದಾಗ ಹಿಂದೂ ಫೈರ್ ಬ್ರಾಂಡ್ ತರ ನಡೆದುಕೊಳ್ಳುತ್ತಿದ್ದ ತಾವು ಇತ್ತೀಚಿನ ದಿನಗಳ ನಿಮ್ಮ ಕಾರ್ಯವೈಖರಿ ಅನುಮಾನ ಹುಟ್ಟಿಸುವಂತಿದೆ. ಇನ್ನಾದರೂ ಬುದ್ಧಿಕಲಿತು ವೆಂಕಟರಮಣನ ಶಾಪಕ್ಕೆ ತುತ್ತಾಗದೆ ದೇವಸ್ಥಾನ ಶುದ್ಧೀಕರಿಸಿ ಹಿಂದೂ ಸಮಾಜದ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳಿ ಎಂದು ಶ್ರೀರಾಮಸೇನೆ ಉಡುಪಿ ಜಿಲ್ಲಾಧ್ಯಕ್ಷರಾದ ಸುದರ್ಶನ್ ಪೂಜಾರಿ ಆಗ್ರಹಿಸಿದ್ದಾರೆ.
Hindu Unity
ಪೇಜಾವರ ಶ್ರೀಗಳ ಬಗ್ಗೆ ಅವಹೇಳಕಾರಿ ಹೇಳಿಕೆ; ಬಿ.ಕೆ. ಹರಿಪ್ರಸಾದ್ ವಿರುದ್ಧ ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಖಂಡನೆ
ಉಡುಪಿ : ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಕುರಿತು ಅವಹೇಳಕಾರಿ ಹೇಳಿಕೆ ನೀಡಿರುವ ಕಾಂಗ್ರೆಸ್ ಮುಖಂಡ ಬಿ.ಕೆ ಹರಿಪ್ರಸಾದ್ ವಿರುದ್ಧ ಉಡುಪಿ ಜಿಲ್ಲಾ ಸಮಸ್ತ ವಿಪ್ರ ಭಾಂದವರು ಖಂಡನೆ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸಂದೀಪ್ ಕುಮಾರ್ ಮಂಜ ಮಾತನಾಡಿ, ಪೇಜಾವರ ಶ್ರೀಗಳ ಬಗ್ಗೆ ಮಾತನಾಡಲು ಹರಿಪ್ರಸಾದ್ಗೆ ಎಳ್ಳಷ್ಟು ಯೋಗ್ಯತೆ ಇಲ್ಲ. ಪೇಜಾವರ ಶ್ರೀಗಳು ವಿದ್ವತ್ತು, ಧರ್ಮ ನಿಷ್ಠೆ, ಸಮಾಜದ ಬಗ್ಗೆ ಇರುವ ಕಳಕಳಿ ಹೊಂದಿದ ಸ್ವಾಮೀಜಿ. ಅವರು ಯಾವತ್ತೂ ಒಂದು ಜಾತಿಯ ಬಗ್ಗೆ ಮಾತನಾಡಿದವರಲ್ಲ. ಸಮಸ್ತ ಹಿಂದೂ ಸಮಾಜದ ಒಳಿತಿಗಾಗಿ ಶ್ರಮಿಸುತ್ತಿರುವ ಸ್ವಾಮೀಜಿ. ನೂರಾರು ಬಡ ಕುಟುಂಬಗಳಿಗೆ ಭಕ್ತರ ಸಹಕಾರದೊಂದಿಗೆ ಮನೆ ಕಟ್ಟಿಸಿಕೊಟ್ಟಿದ್ದಾರೆ. ಇದೆಲ್ಲವೂ ಜಾತಿ ಲಾಬಿ ನಡೆಸುವ ವ್ಯಕ್ತಿಗಳಿಗೆ ಕಾಣುವುದಿಲ್ಲ ಎಂದು ವಾಗ್ದಾಳಿ ನಡೆಸಿದರು. ಇಡೀ ಸನಾತನ ಹಿಂದೂ ಧರ್ಮದ ಒಬ್ಬ ಮಹಾನ್ ಶಕ್ತಿಯುತ ಸ್ವಾಮೀಜಿಯ ಬಗ್ಗೆ ಹರಿಪ್ರಸಾದ್ ಆಡಿರುವ ಅವಹೇಳನ ಮಾತು ಅಕ್ಷಮ್ಯವಾದದು. ಹೀಗಾಗಿ ಅವರು ಕರ್ನಾಟಕ ರಾಜ್ಯದ ಸಮಸ್ತ ಜನತೆಯ ಮುಂದೆ ಪೇಜಾವರ ಶ್ರೀಗಳ ಬೇಷರತ್ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ನೇತೃತ್ವದಲ್ಲಿ ವಿಪ್ರ ಬಾಂಧವರು ಉಗ್ರ ಹೋರಾಟ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಸಂಚಾಲಕ ಶ್ರೀಕಾಂತ್ ಉಪಾಧ್ಯಾಯ, ಉಪಾಧ್ಯಕ್ಷ ಶ್ರೀನಿವಾಸ್ ಬಲ್ಲಾಳ್, ಜೊತೆ ಕಾರ್ಯದರ್ಶಿ ನಾಗರಾಜ ಉಪಾಧ್ಯಾಯ, ಉಡುಪಿ ತಾಲೂಕು ಅಧ್ಯಕ್ಷ ಮಂಜುನಾಥ್ ಉಪಾಧ್ಯಾಯ, ರಾಮದಾಸ್ ಉಡುಪ ಇದ್ದರು.
ಉಡುಪಿ : ‘ನ ಹಿಂದೂ ಪತಿತೋ ಭವೇತ್’ ಎನ್ನುವ ಘೋಷಣೆ ಹೊರಟ ಉಡುಪಿಯ ಪಾವನ ಮಣ್ಣಿನಲ್ಲಿ ಹಿಂದೂ ಸಮಾಜದ ಅವಿಭಾಜ್ಯ ಅಂಗವಾಗಿರುವ ದಲಿತ ಬಂಧುಗಳ ಬಗ್ಗೆ ಮತ್ತು ರಾಷ್ಟ್ರಪುರುಷ ಅಂಬೇಡ್ಕರ್ ಬಗ್ಗೆ ಅವಶಬ್ದಗಳನ್ನು ನುಡಿದ ಉಮೇಶ್ ಸೂಡರ ಸಮಾಜ ಒಡೆಯುವ ಮತ್ತು ರಾಷ್ಟ್ರ ನಾಯಕರ ಬಗ್ಗೆ ಆಡಿರುವ ಮಾತುಗಳನ್ನು ಹಿಂದು ಜಾಗರಣ ವೇದಿಕೆ ಖಂಡಿಸುತ್ತದೆ. ಮತ್ತು ತಕ್ಷಣದಿಂದ ಹಿಂದು ಜಾಗರಣ ವೇದಿಕೆಯ ಎಲ್ಲಾ ಜವಾಬ್ದಾರಿಯಿಂದ ಉಮೇಶ್ ಸೂಡರನ್ನು ಮುಕ್ತಗೊಳಿಸಲಾಗಿದೆ. ಅವರ ಮಾತುಗಳಿಗೆ ಸಂಪೂರ್ಣವಾಗಿ ಅವರೇ ಹೊಣೆಯಾಗಿದ್ದು ಅವರ ಮಾತುಗಳಿಗೂ ಮತ್ತು ಹಿಂದು ಜಾಗರಣ ವೇದಿಕೆಯ ನಿಲುವಿಗೂ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.
ಜಾಗೃತ, ಸಂಘಟಿತ ಹಿಂದೂ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಕಳೆದ 35-40 ವರ್ಷಗಳಿಂದ ಕೆಲಸ ಮಾಡುತ್ತಿರುವ ಹಿಂದು ಜಾಗರಣ ವೇದಿಕೆಯಲ್ಲಿ ಎಲ್ಲ ಜಾತಿ, ಸಮುದಾಯದ ಹಿಂದೂಗಳು ಒಂದಾಗಿ ಯುವಕರಲ್ಲಿ ರಾಷ್ಟ್ರಭಕ್ತಿ, ಧರ್ಮನಿಷ್ಠ ಬೆಳಸುವ ಕಾರ್ಯದಲ್ಲಿ ನಿರತರಾಗಿದ್ದು ಇಂತಹ ಅಪಸವ್ಯಗಳನ್ನು ಎಂದಿಗೂ ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸುತ್ತೇವೆ ಎಂದು ಹಿಂದು ಜಾಗರಣ ವೇದಿಕೆ ಉಡುಪಿ ಜಿಲ್ಲಾ ಸಂಯೋಜಕ ಶಂಕರ್ ಕೋಟ ತಿಳಿಸಿದ್ದಾರೆ.
ತ್ಯಾಗ, ಬಲಿದಾನ, ಮೂಲಕ ವಿಶ್ವ ಹಿಂದೂ ಪರಿಷದ್ ವಿಶ್ವದ ಹಿಂದೂಗಳ ಧ್ವನಿ ಹಾಗೂ ಪ್ರತಿನಿಧಿಯಾಗಿದೆ : ಶರತ್ಕೃಷ್ಣ ಪಡ್ವೆಟ್ನಾಯ
ಉಜಿರೆ : ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ರಥಬೀದಿಯಲ್ಲಿ ನಡೆದ ಬೃಹತ್ ಹಿಂದೂ ಸಮಾವೇಶದಲ್ಲಿ ಉಜಿರೆಯ ಶ್ರೀ ಜನಾರ್ದನಸ್ವಾಮಿ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಶರತ್ಕೃಷ್ಣ ಪಡ್ವೆಟ್ನಾಯರವರು ಮಾತನಾಡುತ್ತಾ ತ್ಯಾಗ, ಬಲಿದಾನ, ಪ್ರತಿಭಟನೆ ಮೂಲಕ ವಿಶ್ವ ಹಿಂದೂ ಪರಿಷದ್ ವಿಶ್ವದ ಹಿಂದೂಗಳ ಧ್ವನಿ ಹಾಗೂ ಪ್ರತಿನಿಧಿಯಾಗಿದೆ. ಹಿರಿಯ ಕಾರ್ಯಕರ್ತರ ಶ್ರಮದ ಫಲದಿಂದ ಸಂಘಟನೆ ಶಕ್ತಿಯುತವಾಗಿ ಬೆಳೆದಿದೆ. ದೇಶದಲ್ಲಿ ಹಿಂದೂಗಳಿಗೆ ಆಗುತ್ತಿರುವ ಅನ್ಯಾಯ ತಡೆಗಟ್ಟಬೇಕು. ಧರ್ಮ ಉಳಿದರೆ ಮಾತ್ರ ದೇಶ ಉಳಿಯುತ್ತದೆ ಎಂದು ಹೇಳಿದರು.
ದಿಕ್ಸೂಚಿ ಭಾಷಣ ಮಾಡಿದ ಮಂಗಳೂರು ವಿಭಾಗದ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಹಿಂದೂ ಸಮಾಜದ ಮೇಲೆ ನಡೆಯುವ ರಾಜಕೀಯ ಮತ್ತು ಸಾಮಾಜಿಕ ದಾಳಿಯನ್ನು ಖಂಡಿಸಬೇಕು. ಜಾತಿ ವಿಚಾರದಲ್ಲಿ ಹಿಂದೂ ಸಮಾಜ ವಿಂಗಡಣೆಯಾಗಬಾರದು ಎಂದು ಹೇಳಿದರು.
ಸಮಾರಂಭವನ್ನು ಉದ್ಘಾಟಿಸಿದ ಉತ್ಸವ ಸಮಿತಿ ಅಧ್ಯಕ್ಷ ಡಾ. ಎಂ. ಎಂ. ದಯಾಕರ್ ಮಾತನಾಡಿ, ನಮ್ಮೊಳಗಿನ ಶಕ್ತಿ ಇನ್ನಷ್ಟು ಬಲಗೊಂಡು ನ್ಯಾಯಮಾರ್ಗದಲ್ಲಿ ಹೋರಾಟ ನಡೆಸಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ 60 ಹಿರಿಯ ಕಾರ್ಯಕರ್ತರನ್ನು ಗೌರವಿಸಲಾಯಿತು.
ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ನವೀನ್ ನೆರಿಯಾ, ಡಾ. ಭಾರತಿ, ಜಿ.ಕೆ., ಎಕ್ಸೆಲ್ ಕಾಲೇಜಿನ ಆಡಳಿತ ನಿರ್ದೇಶಕ ಸುಮಂತ್ ಕುಮಾರ್ ಜೈನ್, ಮೊದಲಾದವರು ಉಪಸ್ಥಿತರಿದ್ದರು. ಸಂಪತ್ ಸುವರ್ಣ ಸ್ವಾಗತಿಸಿ ಮೋಹನ್ ಬೆಳ್ತಂಗಡಿ ವಂದಿಸಿದರು.
ವಿಶ್ವ ಹಿಂದೂ ಪರಿಷತ್ ಷಷ್ಠಿಪೂರ್ತಿ ಸಂಭ್ರಮ – ಹಿಂದೂ ಸಮಾವೇಶ, ಸಮ್ಮೇಳನ ಸಹಿತ ವಿವಿಧ ಕಾರ್ಯಕ್ರಮಗಳ ಆಯೋಜನೆ
ಮಂಗಳೂರು : “ಭಾರತೀಯ ಧರ್ಮ, ಸಂಸ್ಕೃತಿ ಹಿಂದೂ ಜೀವನ ಮೌಲ್ಯಗಳು, ನಂಬಿಕೆ ಮತ್ತು ಸ್ವಾಭಿಮಾನವನ್ನು ರಕ್ಷಿಸಲು ಪ್ರಾರಂಭಗೊಂಡ ವಿಶ್ವದ ಅತೀ ದೊಡ್ಡ ಸಂಘಟನೆ ವಿಶ್ವ ಹಿಂದೂ ಪರಿಷತ್. 1964 ಆಗಸ್ಟ್ 29ರಂದು ಮುಂಬೈಯ ಸಾಂದೀಪಿನಿ ಆಶ್ರಮದಲ್ಲಿ ಪ್ರಾರಂಭಗೊಂಡ ವಿಶ್ವ ಹಿಂದೂ ಪರಿಷತ್ತಿಗೆ ಈ ವರ್ಷ ಷಷ್ಠಿಪೂರ್ತಿ ಸಂಭ್ರಮ. ಕಳೆದ 60 ವರ್ಷಗಳಲ್ಲಿ ಜಗತ್ತಿನ ಹಿಂದುಗಳನ್ನು ಸಂಘಟಿಸುವ ಕಾರ್ಯದೊಂದಿಗೆ ಹಿಂದೂ ಧರ್ಮದ ಆಚರಣೆ, ಪ್ರಚಾರ, ರಕ್ಷಣೆಯ ಉದ್ದೇಶವನ್ನು ಇಟ್ಟುಕೊಂಡು, ಕೆಲಸಕಾರ್ಯಗಳನ್ನು ಮಾಡುತ್ತ ಬಂದಿದೆ“ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ಹೇಳಿದರು.
”ಭಾರತ ಮಾತ್ರವಲ್ಲದೆ ಅಮೇರಿಕ, ಕೆನಡಾ, ಆಫ್ರಿಕಾ, ಇಂಗ್ಲೆಂಡ್, ಹಂಗೇರಿ, ಜರ್ಮನಿ, ಫ್ರಾನ್ಸ್, ಕಿನ್ಯ, ಫಿಜಿ, ಶ್ರೀಲಂಕಾ, ಇಂಡೋನೇಷ್ಯಾ, ಮಾರಿಷಸ್, ಥಾಯ್ಲಾಂಡ್, ಮಲೇಷಿಯಾ, ಜಪಾನ್ ಸೇರಿದಂತೆ 50 ಕ್ಕೂ ಹೆಚ್ಚು ದೇಶಗಳಲ್ಲಿ ವಿಶ್ವ ಹಿಂದೂ ಪರಿಷತ್ತಿನ ಕಾರ್ಯ ನಡೆಯುತ್ತಿದೆ. ಮೊದಲನೆಯ ರಾಷ್ಟ್ರೀಯ ಅಧ್ಯಕ್ಷರಾದ ಮೈಸೂರಿನ ಮಹಾರಾಜರಾದ ಜಯಚಾಮರಾಜ ಒಡೆಯರ್ ಇವರ ನೇತೃತ್ವದೊಂದಿಗೆ ದೇಶದಲ್ಲಿ ವಿವಿಧ ಮತಪಂಥಗಳ ಪೂಜ್ಯ ಸಾಧು ಸಂತರು, ಧರ್ಮಾಚಾರ್ಯರು, ಧಾರ್ಮಿಕ ರಾಷ್ಟ್ರೀಯ ಚಿಂತಕರು, ವಿದ್ವಾಂಸರು ಒಳಗೊಂಡ ಮಾರ್ಗದರ್ಶಕ ಮಂಡಳಿಯ ಮಾರ್ಗದರ್ಶನದ ಮೂಲಕ ಪ್ರಾರಂಭಗೊಂಡ ವಿಶ್ವ ಹಿಂದೂ ಪರಿಷದ್ ಹಲವಾರು ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡು ಅದನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ, ಇದೀಗ ನಮ್ಮ ದೇಶದ ಸುಮಾರು 90 ಸಾವಿರಕ್ಕೂ ಹೆಚ್ಚು ಸ್ಥಾನಗಳಲ್ಲಿ ವಿಶ್ವ ಹಿಂದೂ ಪರಿಷತ್ ಸಮಿತಿಗಳ ಮೂಲಕ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿದೆ. ಗೋವುಗಳ ರಕ್ಷಣೆಯ ಜೊತೆಗೆ ಪಾಲನೆಯನ್ನು ಮಾಡಿಕೊಂಡು ಬರುತ್ತಿದೆ. ಅಯೋಧ್ಯೆ ಶ್ರೀರಾಮ ಜನ್ಮಭೂಮಿ ಆಂದೋಲನ, ಅಮರನಾಥ, ರಾಮಸೇತು, ತಿರುಪತಿ ಉಳಿಸಿ ಆಂದೋಲನ, ಕರ್ನಾಟಕದ ಪವಿತ್ರ ಕ್ಷೇತ್ರ ದತ್ತಪೀಠದ ಮುಕ್ತಿಗೋಸ್ಕರ ಹೋರಾಟವನ್ನು ಕೈಗೆತ್ತಿಕೊಂಡು ಶ್ರದ್ಧಾಕೇಂದ್ರಗಳನ್ನು ಉಳಿಸುವುದರಲ್ಲಿ ಯಶಸ್ವಿಯಾಗಿದೆ. ಬಜರಂಗದಳ, ದುರ್ಗಾವಾಹಿನಿ ಮುಖಾಂತರ ಯುವಕ ಯುವತಿಯರಲ್ಲಿ ರಾಷ್ಟ್ರ ಭಕ್ತಿಯನ್ನು ಮೂಡಿಸಿ, ಅವರನ್ನು ರಾಷ್ಟ್ರರಕ್ಷಣೆಯ ಕಾರ್ಯದಲ್ಲಿ ಕೈಜೋಡಿಸುವಂತೆ ಮಾಡಿದೆ. ಮಾತೃಶಕ್ತಿ ಮೂಲಕ ಮಹಿಳಾಕಾರ್ಯ, ಬಾಲಸಂಸ್ಕಾರ, ಸತ್ಸಂಗಗಳ ಮೂಲಕ ಸಂಸ್ಕಾರ ಕೇಂದ್ರಗಳು ಪ್ರಾರಂಭಗೊಂಡಿದೆ“ ಎಂದವರು ಹೇಳಿದರು.
ಬಳಿಕ ಮಾತಾಡಿದ ವಿಭಾಗ ಸಹ ಕಾರ್ಯದರ್ಶಿ ಶಿವಾನಂದ ಮೆಂಡನ್ ಅವರು, ”ಷಷ್ಠಿಪೂರ್ತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಆಗಸ್ಟ್ 25ರಿಂದ ಸೆಪ್ಟೆಂಬರ್ 1ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ 21 ಪ್ರಖಂಡಗಳಲ್ಲಿ ಹಿಂದೂ ಸಮಾವೇಶ, ಸಮ್ಮೇಳನ, ಶೋಭಾಯಾತ್ರೆ ಮೆರವಣಿಗೆ, ಕ್ರೀಡಾಕೂಟಗಳು, ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಹಿಂದೂ ಬಾಂಧವರು ಪಾಲ್ಗೊಳ್ಳುವ ನಿರೀಕ್ಷೆಯಿದೆ“ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾಧ್ಯಕ್ಷ ಹೆಚ್.ಕೆ.ಪುರುಷೋತ್ತಮ್, ಜಿಲ್ಲಾ ಉಪಾಧ್ಯಕ್ಷ ಮನೋಹರ್ ಸುವರ್ಣ, ಜಿಲ್ಲಾ ಕಾರ್ಯದರ್ಶಿ ರವಿ ಅಸೈಗೋಳಿ, ಪುನೀತ್ ಅತ್ತಾವರ, ಭುಜಂಗ ಕುಲಾಲ್, ಗುರುಪ್ರಸಾದ್ ಉಳ್ಳಾಲ್, ರವಿ ಕಡೆಗೋಳಿ ಮತ್ತಿತರರು ಉಪಸ್ಥಿತರಿದ್ದರು.
ಉಡುಪಿ: ಶೀರೂರು ಮಠ ಉಡುಪಿ ಹಾಗೂ ಹಿಂದೂ ಯುವಸೇನೆ ಉಡುಪಿ ಜಿಲ್ಲೆ ಇದರ ವತಿಯಿಂದ ಕೀರ್ತಿಶೇಷ ಲಕ್ಷ್ಮೀವರ ತೀರ್ಥ ಶ್ರೀಪಾದರ 6ನೇ ಆರಾಧಾನ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಸ್ಥಳೀಯ ಮತ್ತು ರಾಜ್ಯಮಟ್ಟದ ಕುಣಿತ ಭಜನಾ ಸ್ಪರ್ಧೆ, ಮುದ್ದುಕೃಷ್ಣ ಸ್ಪರ್ಧೆ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾ ಪ್ರೋತ್ಸಾಹ ಧನ ವಿತರಣಾ ಸಮಾರಂಭವನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ಪಾಲ್ ಸುವರ್ಣ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯಶ್ಪಾಲ್ ಸುವರ್ಣ ಪರಮ ಪೂಜ್ಯ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು ಧಾರ್ಮಿಕ ಕಾರ್ಯಕ್ರಮಗಳ ಜೊತೆ ಜೊತೆಗೆ ಸಮಾಜ ಸೇವೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ವಿಶೇಷ ಪ್ರೋತ್ಸಾಹ ನೀಡುತ್ತಾ ಹಿಂದುತ್ವದ ಪ್ರಬಲ ಪ್ರತಿಪಾದಕರಾಗಿ ಸಂಘಟನೆಯ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡುವ ಮೂಲಕ ಹಿಂದೂ ಸಮಾಜಕ್ಕೆ ಪ್ರೇರಕ ಶಕ್ತಿಯಾಗಿದ್ದರು ಎಂದರು.
ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಶ್ರೀಗಳ ಸಮಾಜಮುಖಿ ಸೇವಾ ಚಿಂತನೆ ನಮಗೆಲ್ಲ ಸದಾ ಆದರ್ಶವಾಗಿರಲಿದೆ ಎಂದರು. ಸಮಾರಂಭದಲ್ಲಿ ಹಿಂದೂ ಯುವ ಸೇನೆ ಜಿಲ್ಲಾಧ್ಯಕ್ಷರಾದ ಅಜಿತ್ ಕೊಡವೂರು, ಶೀರೂರು ಮಠದ ದಿವಾನರಾದ ಉದಯ ಕುಮಾರ್ ಸರಳತ್ತಾಯ, ಹಿಂದೂ ಯುವಸೇನೆಯ ಪ್ರಮುಖರಾದ ಶೇಖರ್ ಶೆಟ್ಟಿ ಹಿರಿಯಡ್ಕ, ಕಾರ್ಯದರ್ಶಿ ಅರುಣ್, ಉಡುಪಿ ನಗರ ಅಧ್ಯಕ್ಷ ಸುನೀಲ್ ನೇಜಾರ್, ಪ್ರದೀಪ್ ಶೆಟ್ಟಿ ಶೀರೂರು, ರೋಹಿತ್ ಶೆಟ್ಟಿ ಬೆಳ್ಳರ್ಪಾಡಿ, ಸುರೇಶ್ ಸಾಲ್ಯಾನ್, ಮೋಹನ್ ಭಟ್, ಬೆಳ್ಳರ್ಪಾಡಿ ಘಟಕದ ಅಧ್ಯಕ್ಷರಾದ ಸದಾಶಿವ ಪೂಜಾರಿ, ಪವನ್ ಹೆರ್ಗ, ನವೀನ್ ಪುತ್ರನ್, ಉದಯ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯ ಕಳವಳಕಾರಿ – ಪೇಜಾವರ ಶ್ರೀ
ಉಡುಪಿ : ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಕಂಡು ತುಂಬ ಖೇದವಾಗಿದೆ. ಇಡೀ ಹಿಂದೂ ಸಮಾಜ ಜಾಗೃತವಾಗಬೇಕು ಮತ್ತು ವಿಶ್ವಶಾಂತಿಗಾಗಿ ದೇವರಿಗೆ ಮೊರೆಯಿಡುವುದಷ್ಟೆ ನಮ್ಮ ಮುಂದಿರುವ ಆಯ್ಕೆ ಎಂದು ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ವಿಡಿಯೋ ಮೂಲಕ ಕಳವಳ ವ್ಯಕ್ತಪಡಿಸಿರುವ ಶ್ರೀಪಾದರು, ನಮ್ಮ ದೇಶದಲ್ಲಿರುವ ಎಲ್ಲ ಹಿಂದೂಗಳು ಕೂಡ ಅತ್ಯಂತ ಕಳವಳ ಪಡಬೇಕಾದ ಸ್ಥಿತಿಯಿದು. ಇವತ್ತು ಪಕ್ಕದ ದೇಶದಲ್ಲಿ ಅಷ್ಟೆ ಅಲ್ಲದೆ ಸ್ವದೇಶದಲ್ಲೂ ಹಿಂದೂಗಳ ಮೇಲಿನ ಆಕ್ರಮಣ ಅತಿಯಾಗಿದೆ. ಅದರ ವಿರುದ್ಧ ಸೊಲ್ಲೆತ್ತುವವರನ್ನು ಕೂಡ ದಮನಿಸುವ ಪ್ರವೃತ್ತಿಯನ್ನು ಕಾಣುತ್ತಿದ್ದೇವೆ.ಈ ನೆಲೆಯಲ್ಲಿ ಸಮಾಜದ ಎಲ್ಲರೂ ಜಾಗೃತರಾಬೇಕು. ಸರಕಾರವನ್ನು ಕೂಡ ಆಶ್ರಯಿಸುವ ಹಂತದಲ್ಲಿಲ್ಲ. ದೇವರಿಗೆ ಶರಣಾಗಿ ಸಮಾಜ, ದೇಶ, ವಿಶ್ವದಲ್ಲಿ ಶಾಂತಿ, ಸುಭಿಕ್ಷೆ ನೆಲೆಸುವಂತೆ ಬೇಡೋಣ ಎಂದು ಅವರು ಕರೆ ಕೊಟ್ಟಿದ್ದಾರೆ.
ಉಡುಪಿ : ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ನಗರದಲ್ಲಿ ಬೃಹತ್ ಮಾನವ ಸರಪಣಿ ನಡೆಸಲಾಯಿತು.
ಹಿಂದೂ ಹಿತ ರಕ್ಷಣಾ ಸಮಿತಿ ನೇತೃತ್ವದಲ್ಲಿ ಮಾನವ ಸರಪಣಿ ಮೂಲಕ ಪ್ರತಿಭಟನೆ ದಾಖಲಿಸಲಾಯಿತು. ಮಾನವ ಸರಪಣಿ ನಿರ್ಮಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಹಿಂದೂ ಕಾರ್ಯಕರ್ತರು, ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ಅಂತರಾಷ್ಟ್ರೀಯ ಮೌನದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಬಾಂಗ್ಲಾದಲ್ಲಿ ನಡೆಯುತ್ತಿರುವ ದೌರ್ಜನ್ಯವನ್ನು ರಾಷ್ಟೀಯವಾದಿ ಭಾರತೀಯರು ಒಕ್ಕೊರಲಿನಿಂದ ಖಂಡಿಸಬೇಕು. ಹಿಂದೂ ದೇವಸ್ಥಾನ, ಆರಾಧನಾ ಕೇಂದ್ರಗಳ ಮೇಲೆ ದಾಳಿ ಖಂಡನೀಯ ಎಂದು ಪ್ರತಿಭಟನಕಾರರು ಆಕ್ರೋಶ ಹೊರಹಾಕಿದರು. ಉಡುಪಿ-ಮಣಿಪಾಲ ರಸ್ತೆಯಲ್ಲಿ ನಡೆದ ಮಾನವ ಸರಪಣಿಯಲ್ಲಿ ಹಿಂದೂ ಸಂಘಟನೆಗಳ ಜೊತೆಗೆ ಬಿಜೆಪಿ ಕಾರ್ಯಕರ್ತರು ಭಾಗಿಯಾದರು. ಕೈಯಲ್ಲಿ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು.
ಪಡುಬಿದ್ರಿ : ರಾಜಕೀಯ ಒಲೈಕೆಗಾಗಿ ನಮ್ಮ ರಾಷ್ಟ್ರವನ್ನು ತ್ರಿಖಂಡ ಮಾಡಲಾಗಿದ್ದು, ಅದನ್ನು ಮತ್ತೆ ಅಖಂಡ ಮಾಡಲು ನಮ್ಮ ಹಿಂದೂ ಸಮಾಜ ಒಂದಾಗುವ ಅನಿವರ್ಯತೆ ಇದೆ ಎಂದು ಹಿಂದೂ ಸಂಘಟನಾ ಮುಖಂಡ ದಿನೇಶ್ ಮೆಂಡನ್ ಹೇಳಿದ್ದಾರೆ.
ಅವರು ವಿಶ್ವಹಿಂದೂ ಪರಿಷದ್ ಭಜರಂಗದಳ, ಕಾಪು ಪ್ರಖಂಡ ಪಡುಬಿದ್ರಿ ವಲಯ ಆಯೋಜಿಸಿದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ನಡೆದ ಪಂಜಿನ ಮೆರವಣಿಗೆ ಬಳಿಕ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಕನ್ನಾಂಗಾರು ಬ್ರಹ್ಮ ಬೈದರ್ಕಳ ಗರೋಡಿಯಿಂದ ಆರಂಭಗೊಂಡ ಪಂಜಿನ ಮೆರವಣಿಗೆಯಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡಿದ್ದರು ಅದರಲ್ಲೂ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಯುವತಿಯರು ಭಾಗವಹಿಸಿದ್ದರು.
ವಿವಿಧ ರೀತಿಯ ಹಿಂದೂಪರ ಘೋಷಣೆಯನ್ನು ಕೂಗುತ್ತಾ ಮೈಲುದ್ಧ ಸಾಲಿನಲ್ಲಿ ಪಂಜಿನ ಮೆರವಣಿಗೆ ಸಾಗಿ ಬಂದಿದ್ದು, ಈ ಸಂದರ್ಭ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪಡುಬಿದ್ರಿ ಎಸ್ಸೈ ಎಂ.ಎಸ್. ಪ್ರಸನ್ನ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಈ ಸಂದರ್ಭ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಮೆಂಡನ್, ಹಿಂದೂ ಮುಖಂಡರಾದ ದೇವಿಪ್ರಸಾದ್ ಶೆಟ್ಟಿ, ಸುಜೀತ್ ಶೆಟ್ಟಿ, ಗಣೇಶ್ ಗುಜರನ್, ಆನಂದ್, ಮಾಜಿ ಪಂ. ಸದಸ್ಯರಾದ ಶಶಿಕಾಂತ್ ಪಡುಬಿದ್ರಿ, ರೇಷ್ಮಾ ಉದಯ ಶೆಟ್ಟಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಮಿಥುನ್ ಆರ್ ಹೆಗ್ಡೆ, ಉದಯ ಶೆಟ್ಟಿ ಇನ್ನಾ, ಮೋಹನ್ ದಾಸ್ ಫಣಿಯೂರು, ಸಂದೇಶ್ ಶೆಟ್ಟಿ, ಅಜಿತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಬಾಂಗ್ಲಾದೇಶದಲ್ಲಿ ಇಸ್ಲಾಮಿಕ್ ಜಿಹಾದಿಗಳಿಂದ ನಡೆಯುತ್ತಿರುವ ಹಿಂದೂ ನರಮೇಧವನ್ನು ಖಂಡಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ
ಕಾರ್ಕಳ : ಅಭಿನವ ಭಾರತ ವತಿಯಿಂದ ಬಾಂಗ್ಲಾದೇಶದಲ್ಲಿ ಇಸ್ಲಾಮಿಕ್ ಜಿಹಾದಿಗಳಿಂದ ನಡೆಯುತ್ತಿರುವ ಹಿಂದೂ ನರಮೇಧವನ್ನು ಖಂಡಿಸಿ ಪ್ರತಿಭಟನೆ ನಡೆಯಲಿದೆ.
ಇಂದು ಸಂಜೆ 5 ಗಂಟೆಗೆ ಕಾರ್ಕಳ ಅನಂತಶಯನ ದೇವಸ್ಥಾನದಿಂದ ಪ್ರಾರಂಭವಾಗಿ ಕಾರ್ಕಳ ಬಸ್ ನಿಲ್ದಾಣದ ತನಕ ಮೆರವಣಿಗೆ ಸಾಗಲಿದೆ.
ಬಾಂಗ್ಲಾದೇಶದ ಹಿಂದೂ ದೇವಸ್ಥಾನಗಳ ಮೇಲೆ ಮತ್ತು ಬಾಂಗ್ಲಾ ಹಿಂದೂಗಳ ಮೇಲೆ ಆಗುತ್ತಿರುವ ಅತಿಕ್ರೂರ ದಾಳಿಯನ್ನು ಖಂಡಿಸಲು ಕಾರ್ಕಳದ ಸಮಸ್ತ ಹಿಂದೂ ಸಮಾಜದ ಮುಂದಾಳುತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಅಭಿನವ ಭಾರತ ಆಯೋಜನೆ ಮಾಡಿದೆ.