ಮಂಗಳೂರು : ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಉನ್ನತ ಮಟ್ಟದ ತನಿಖೆಯಾಗಬೇಕು. ಕೇಂದ್ರ ಸರಕಾರವೇ ಖುದ್ದು ಎನ್ಐಎ ತನಿಖೆಗೆ ವಹಿಸಬೇಕು ಎಂದು ಹಿಂದೂ ಮಹಾಸಭಾ ಕರ್ನಾಟಕ ಆಗ್ರಹಿಸಿದೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿಂದೂ ಮಹಾಸಭಾ ಸಂಸ್ಥಾಪಕ ರಾಜೇಶ್ ಪವಿತ್ರನ್, ಪ್ರಕರಣದಲ್ಲಿ 20ಕ್ಕೂ ಅಧಿಕ ಮಂದಿ ಭಾಗವಹಿಸಿರುವ ಸಾಕ್ಷ್ಯಧಾರವಿದ್ದರೂ, ಪೊಲೀಸರು 8 ಜನರನ್ನು ಮಾತ್ರ ಬಂಧಿಸಿದ್ದಾರೆ. ಪ್ರಕರಣಕ್ಕೆ ಯಾರು ಕುಮ್ಮಕ್ಕು ಕೊಟ್ಟಿದ್ದಾರೆ, ರಾಜಕೀಯ ಕೈವಾಡ ಇದೆಯೇ, ಬಿಜೆಪಿ – ಕಾಂಗ್ರೆಸ್ ಮುಖಂಡರ ಕೈವಾಡ ಇದೆಯೇ ಎನ್ನುವುದನ್ನೂ ತನಿಖೆ ನಡೆಸಿ ಪತ್ತೆ ಹಚ್ಚಬೇಕು. ಸುಹಾಸ್ಗೆ ರೌಡಿಶೀಟರ್ ಪಟ್ಟಕಟ್ಟಿದ ಬಿಜೆಪಿಯವರೇ ಇಂದು ಶೋಕಾಚರಣೆ ಮಾಡುವ ಮೂಲಕ ಮುಂದಿನ ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಹಿಂದೂ ಕಾರ್ಯಕರ್ತರ ಸಾವನ್ನು ರಾಜಕೀಯವಾಗಿ ಯಾವುದೇ ಪಕ್ಷಗಳು ಬಳಸುವುದನ್ನು ಹಿಂದೂ ಮಹಾಸಭಾ ಖಂಡಿಸುತ್ತದೆ ಎಂದರು.
ಫಾಜಿಲ್ ಕುಟುಂಬಕ್ಕೆ ಸರಕಾರ ನೆರವು ನೀಡಿದಂತೆ ಸುಹಾಸ್ ಶೆಟ್ಟಿ ಅವರ ಕುಟುಂಬಕ್ಕೂ ಸರಕಾರ ನೆರವು ನೀಡಬೇಕು. ಇದುವರೆಗೂ ನಡೆದ ಹಿಂದೂ ಕಾರ್ಯಕರ್ತರ ಕೊಲೆ ಪ್ರಕರಣಗಳನ್ನು ಮರು ತನಿಖೆಗೆ ಒಳಪಡಿಸಬೇಕು. ಬಿಜೆಪಿಯನ್ನು ಹಿಂದುತ್ವದ ಪರವಾಗಿರುವ ಪಕ್ಷ ಎನ್ನಲಾಗದು. ಇನ್ನು ಕಾಂಗ್ರೆಸ್ ಎಂದೂ ಹಿಂದೂಗಳ ಪರ ನಿಂತಿಲ್ಲ. ಹಾಗಾಗಿ ಹಿಂದೂಗಳ ಪರವಾಗಿರುವ ಪಕ್ಷ ರಚನೆಯ ಕುರಿತು ಸಿದ್ಧತೆ ಮಾಡುತ್ತೇವೆ. ಕಾಂಗ್ರೆಸ್ ಮತ್ತು ಬಿಜೆಪಿಗೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತೇವೆ ಎಂದರು. ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ಡಾ| ಎಲ್.ಕೆ.ಸುವರ್ಣ, ರಾಜ್ಯ ಖಜಾಂಚಿ ಲೊಕೇಶ್ ಉಳ್ಳಾಲ್ ಮತ್ತಿತರರು ಉಪಸ್ಥಿತರಿದ್ದರು.