ಅರಣ್ಯ ಇಲಾಖೆಯ ಪುತ್ತೂರು ಉಪ ವಲಯ ಅರಣ್ಯಾಧಿಕಾರಿ ಸಂಜೀವ ಕಾಣಿಯೂರು ಬಿಲ್ಲವ ಜಾತಿಯ ಹೆಣ್ಣು ಮಕ್ಕಳ ಬಗ್ಗೆ ಮತ್ತು ಹಿಂದು ಯುವಕರ ಬಗ್ಗೆ ಅಶ್ಲೀಲ, ಮಾನಹಾನಿ ಮಾಡುವ ಮತ್ತು ಸಮಾಜದಲ್ಲಿ ವರ್ಗ ಸಂಘರ್ಷಕ್ಕೆ ಎಡೆ ಮಾಡಿಕೊಡುವಂತಹ ಮತ್ತು ಸಮಾಜದ ಶಾಂತಿಗೆ ಧಕ್ಕೆ ಉಂಟಾಗುವ ರೀತಿಯಲ್ಲಿ ಮಾತನಾಡಿರುವ ಕುರಿತು ಮೂಡುಬಿದಿರೆ ಪೊಲೀಸರಿಗೆ ಹಿಂದೂ ಜಾಗರಣ ವೇದಿಕೆ ದೂರು ನೀಡಿದೆ.
ಅಶ್ಲೀಲವಾಗಿ ಮಾನಕ್ಕೆ ಧಕ್ಕೆ ಆಗುವ ರೀತಿಯಲ್ಲಿ ಮತ್ತು ಇಡೀ ಬಿಲ್ಲವ ಹೆಣ್ಣು ಮಕ್ಕಳ ಚಾರಿತ್ರ್ಯವಧೆ ಮಾಡುವ ರೀತಿಯಲ್ಲಿ ಅಶ್ಲೀಲವಾಗಿ ಮಾತನಾಡುವ ಆಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದ್ದು, ಹಿಂದು ಯುವಕರು ಭಜನೆಯ ನೆಪದಲ್ಲಿ ಹಿಂದು ಹೆಣ್ಣು ಮಕ್ಕಳನ್ನು ಅನೈತಿಕತೆಗೆ ಬಳಸುತ್ತಿದ್ದಾರೆ ಎಂದು ಕೆಟ್ಟದಾಗಿ ಆಧಾರ ರಹಿತವಾಗಿ ಮಾತನಾಡಿರುವುದಕ್ಕೆ ವೇದಿಕೆ ಆಕ್ರೋಶ ವ್ಯಕ್ತ ಪಡಿಸಿದೆ.
ಅಶಾಂತಿಯನ್ನು ಉಂಟು ಮಾಡುವ ಮತ್ತು ಸಮಾಜದಲ್ಲಿ ವರ್ಗ ಸಂಘರ್ಷ ಮತ್ತು ಜಾತಿ ಸಂಘರ್ಷ ಉಂಟು ಮಾಡಿ ಸಮಾಜದ ಶಾಂತಿಗೆ ಧಕ್ಕೆ ಉಂಟು ಮಾಡುವ ದುರುದ್ದೇಶದಿಂದ ಬಿಲ್ಲವ ಜಾತಿಯ ಹೆಣ್ಣು ಮಕ್ಕಳ ಬಗ್ಗೆ ಮತ್ತು ಹಿಂದೂ ಯುವಕರ ಬಗ್ಗೆ ಅಶ್ಲೀಲ ಶಬ್ದದಲ್ಲಿ ನಿಂದಿಸಿ ಸಮಾಜದ ಶಾಂತಿಗೆ ಧಕ್ಕೆ ಉಂಟು ಮಾಡಿರುವ ಸರಕಾರಿ ನೌಕರಿ ಹೊಂದಿರುವ ಈ ವ್ಯಕ್ತಿಯ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಮೂಡುಬಿದಿರೆ ಪೊಲೀಸ್ ಅಧಿಕಾರಿ ಸಂದೇಶ್ ಪಿ ಜಿ. ಅವರಿಗೆ ದೂರು ನೀಡಲಾಗಿದೆ.
ಜಿಲ್ಲಾ ಸಹ ಸಂಯೋಜಕ ಸಮಿತ್ ರಾಜ್ ದರೆಗುಡ್ಡೆ, ಜಿಲ್ಲಾ ಪ್ರಮುಖರಾದ ಸಂದೀಪ್ ಸುವರ್ಣ ಕೆಲ್ಲಪುತ್ತಿಗೆ, ಸಂದೀಪ್ ಹೆಗ್ಡೆ, ಹಾಗೂ ತಾಲುಕು ಸಹ ಸಂಯೋಜಕರಾದ ಶರತ್ ಮಿಜಾರ್, ತಾಲೂಕು ಪ್ರಮುಖರಾದ ಅನುಜ್ ಭಂಡಾರಿ, ಯತೀಶ್ ಮಿಜಾರ್, ಶಿವರಾಜ್ ಆಚಾರ್ಯ, ಪ್ರದೀಪ್ ಕೋಟ್ಯಾನ್, ಪ್ರವೀಣ್ ಮಿಜಾರ್ ಈ ಸಂದರ್ಭದಲ್ಲಿದ್ದರು.