ಕಾರ್ಕಳ : ಕಾರ್ಕಳ ತಾಲೂಕಿನ ಅತ್ತೂರು ಗ್ರಾಮದಲ್ಲಿರುವ ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ಲೋಕೋಪಯೋಗಿ ಇಲಾಖೆಗೆ ಸೇರಿದ ಜಾಗದಲ್ಲಿ ಅತ್ತೂರು ಸಂತ ಲಾರೆನ್ಸರ ಚರ್ಚ್ ಮಂಡಳಿಯವರು ಅಕ್ರಮವಾಗಿ ಭಾರಿ ಗಾತ್ರದ ಸ್ವಾಗತ ಗೋಪುರವನ್ನು ಕಟ್ಟಿದ್ದು, ಇದು ಸರ್ವೋಚ್ಚ ನ್ಯಾಯಾಲಯದ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದ್ದು ಇದರಲ್ಲಿ ಸರಕಾರಿ ಇಂಜಿನಿಯರ್ಗಳು ಕೂಡ ಶಾಮೀಲಾಗಿದ್ದಾರೆ ಎಂದು ಹಿಂದೂ ಹಿತರಕ್ಷಣಾ ಸಮಿತಿ ಆರೋಪಿಸಿದೆ.
ಈ ಅಕ್ರಮ ದ್ವಾರವನ್ನು ತೆರವುಗೊಳಿಸಲು ಸಮಿತಿಯು ಜಿಲ್ಲಾಡಳಿತಕ್ಕೆ ಹತ್ತು ದಿನಗಳ ಗಡುವನ್ನು ನೀಡುತ್ತಿದೆ. ತಪ್ಪಿದ್ದಲ್ಲಿ ಜಿಲ್ಲೆಯಾದ್ಯಂತ ಹಿಂದೂ ಸಮಾಜವನ್ನು ಸಂಘಟಿಸಿ ಇದರ ವಿರುದ್ಧ ಹೋರಾಟ ಕೈಗೊತ್ತಿಕೊಳ್ಳಲಾಗುವುದು ಎಂದು ಕಾರ್ಕಳ ಹಿಂದೂ ಹಿತರಕ್ಷಣಾ ವೇದಿಕೆ ಎಚ್ಚರಿಸಿದೆ.
ಕಳೆದ ಒಂದು ವಾರದ ಹಿಂದೆ ರಾತ್ರೋರಾತ್ರಿ ಚರ್ಚ್ ಮಂಡಳಿ ಈ ಕಬ್ಬಿಣದ ದ್ವಾರವನ್ನು ರಸ್ತೆಗೆ ಅಡ್ಡಲಾಗಿ ಕಟ್ಟಿದ್ದು ಇದು ವಾಹನ ಸವಾರರ ಸುರಕ್ಷತೆಗೆ ಮುಂದೊoದು ದಿನ ಸವಾಲಾಗುವ ಸಾಧ್ಯತೆಯಿದೆ. ಸಾರ್ವಜನಿಕರಿಂದ ಎರಡು ಆಕ್ಷೇಪಣಾ ಅರ್ಜಿಗಳು ಸಲ್ಲಿಕೆಯಾದ ಬಳಿಕವೂ ಲೋಕೋಪಯೋಗಿ ಅಧಿಕಾರಿಗಳು ಈ ಅಕ್ರಮ ದ್ವಾರ ನಿರ್ಮಾಣಕ್ಕೆ ಗುಪ್ತ ಸಹಕಾರ ನೀಡಿರುವುದನ್ನು ಗಮನಿಸಿದಾಗ ಇದರಲ್ಲಿ ಭ್ರಷ್ಟಾಚಾರ ನಡೆದಿರುವ ಸಾಧ್ಯತೆ ಕಂಡು ಬರುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಇರುವ ಎಲ್ಲಾ ಧಾರ್ಮಿಕ ನಿರ್ಮಾಣಗಳನ್ನು ತೆರವುಗೊಳಿಸಬೇಕು ಎಂದು ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶ ಇದ್ದು, ಈ ಆದೇಶಕ್ಕೆ ಗೌರವ ನೀಡಿ ರಾಜ್ಯಾದ್ಯಂತ ಇರುವ ಹಿಂದೂ ಧಾರ್ಮಿಕ ಕೇಂದ್ರಗಳು ತಮ್ಮ ತಮ್ಮ ಸ್ವಾಗತ ಗೋಪುರ ದೈವದ ಗುಡಿ, ನಾಗನಕಟ್ಟೆಗಳನ್ನು ತೆರವು ಮಾಡಿವೆ.
2009ರಲ್ಲಿ ಜಿಲ್ಲಾಧಿಕಾರಿಯವರ ನಿರ್ದೇಶನದ ಮೇರೆಗೆ ಕಾರ್ಕಳದಲ್ಲಿ ಸುಮಾರು 13 ಹಿಂದೂ ಧಾರ್ಮಿಕ ನಿರ್ಮಾಣಗಳನ್ನು ತೆರವುಗೊಳಿಸಲಾಗಿತ್ತು. ಬೈಲೂರು ಸಮೀಪ ಇದ್ದ ಒಂದು ದರ್ಗಾವನ್ನು ಕೂಡ ತೆರವು ಮಾಡಲಾಗಿತ್ತು. ಆ ಬಳಿಕ ಸರಕಾರಿ ಜಾಗದಲ್ಲಿ ದ್ವಾರ, ಸ್ವಾಗತ ಗೋಪುರ ಇನ್ನಿತರ ಧಾರ್ಮಿಕ ಕಟ್ಟೆಗಳನ್ನು ಕಟ್ಟಿಕೊಳ್ಳಲು ಅವಕಾಶ ನೀಡಲಾಗುತ್ತಿಲ್ಲ. ಆದರೆ ಈ ಚರ್ಚ್ ಆಡಳಿತ ಮಂಡಳಿಗೆ ಮಾತ್ರ ವಿಶೇಷವಾಗಿ ಅನುಮತಿ ದೊರೆತಿದೆ. ಇದರ ಹಿಂದೆ ಅಧಿಕಾರಿಗಳು ಭ್ರಷ್ಟಾಚಾರ ನಡೆಸಿರುವ ಬಗ್ಗೆ ಶಂಕೆ ಇದ್ದು ಈ ಬಗ್ಗೆ ಲೋಕಾಯುಕ್ತ ಇಲಾಖೆಗೆ ನಾವು ದೂರು ಸಲ್ಲಿಸಲಿದ್ದೇವೆ. ಲೋಕೋಪಯೋಗಿ ಇಲಾಖೆಗೆ ಸೇರಿದ ಸ್ಥಳದಲ್ಲಿ ಕಟ್ಟಲಾಗಿರುವ ಈ ದ್ವಾರವನ್ನು ತೆರವುಗೊಳಿಸುವ ಹೊಣೆಗಾರಿಕೆ ಜಿಲ್ಲಾಧಿಕಾರಿ ಅವರದ್ದಾಗಿದ್ದು ಅವರು ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು. ಮತ್ತು ಚರ್ಚ್ ಜೊತೆ ಈ ಅಕ್ರಮದಲ್ಲಿ ಭಾಗಿಯಾಗಿರುವ ಲೋಕೋಪಯೋಗಿ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ತಪ್ಪಿದ್ದಲ್ಲಿ ಜಿಲ್ಲಾಧಿಕಾರಿ ಅವರ ವಿರುದ್ಧ ಬೃಹತ್ ಜನಾಂದೋಲನ ಮತ್ತು ಪ್ರತಿಭಟನಾ ಸಭೆಯನ್ನು ನಡೆಸಲಾಗುವುದು ಮತ್ತು ಸರ್ವೋಚ್ಚ ನ್ಯಾಯಾಲಯದ ಆದೇಶ ಉಲ್ಲಂಘನೆಯಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿಯೂ ಈ ಬಗ್ಗೆ ನಾವು ದಾವೆ ಹೂಡಲಿದ್ದೇವೆ ಎಂದು ಹೇಳಿದ್ದಾರೆ.
ಹಿಂದೂ ಹಿತರಕ್ಷಣಾ ವೇದಿಕೆಯು ಕಳೆದ ಹಲವು ವರ್ಷಗಳಿಂದ ಅತ್ತೂರು ಸಂತಲಾರೆನ್ಸ್ ಚರ್ಚ್ ನಡೆಸಿರುವ ಭೂ ಅತಿಕ್ರಮಣದ ಬಗ್ಗೆ ಹೋರಾಟ ನಡೆಸುತ್ತಿದೆ. ಚರ್ಚ್ ಸುಮಾರು 22 ಎಕರೆ ಸರಕಾರಿ ಕಂದಾಯ ಮತ್ತು ಅರಣ್ಯ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದು,ಇದರ ವಿರುದ್ಧ ಹೈಕೋರ್ಟ್ನಲ್ಲಿ ನಮ್ಮ ಕಾನೂನು ಹೋರಾಟ ನಡೆಯುತ್ತಿದೆ. ಕಾನೂನು ಉಲ್ಲಂಘಿಸಿ ಕಟ್ಟಡ ನಿರ್ಮಾಣ, ಸರಕಾರಿ ಭೂಮಿಯ ದುರುಪಯೋಗ, ಅರಣ್ಯ ನಾಶ, ಬೋಗಸ್ ದಾಖಲೆ ಸೃಷ್ಟಿಸಿ ಭೂಕಬಳಿಕೆ ಸೇರಿದಂತೆ ಹಲವಾರು ಕಾನೂನು ಬಾಹಿರ ಕೃತ್ಯಗಳನ್ನು ಈ ಚರ್ಚ್ ಆಡಳಿತ ಮಂಡಳಿ ಈಗಾಗಲೇ ನಡೆಸಿದೆ. ಹಿಂದೂ ಹಿತರಕ್ಷಣಾ ವೇದಿಕೆಯು ಈ ಅಕ್ರಮ ದ್ವಾರವನ್ನು ತೆರವುಗೊಳಿಸಲು ಜಿಲ್ಲಾಡಳಿತಕ್ಕೆ ಹತ್ತು ದಿನಗಳ ಗಡುವನ್ನು ನೀಡುತ್ತಿದೆ. ತಪ್ಪಿದ್ದಲ್ಲಿ ಜಿಲ್ಲೆಯಾದ್ಯಂತ ಹಿಂದೂ ಸಮಾಜವನ್ನು ಸಂಘಟಿಸಿ ಇದರ ವಿರುದ್ಧ ಹೋರಾಟ ಕೈಗೊತ್ತಿಕೊಳ್ಳಲಾಗುವುದು ಎಂದು ಕಾರ್ಕಳ ಹಿಂದೂ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಎಚ್ಚರಿಸಿದ್ದಾರೆ.