ಉಡುಪಿ : ಅಪೌಷ್ಠಿಕ ಮಕ್ಕಳ ಕುರಿತಂತೆ ತಾಯಂದಿರು ವಿಶೇಷ ಮುತುವರ್ಜಿ ವಹಿಸಬೇಕು. ಗರ್ಭಿಣಿಯರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸದೇ ಇದ್ದಲ್ಲಿ ಮಕ್ಕಳಲ್ಲಿ ಅಪೌಷ್ಠಿಕತೆ ಕಂಡುಬರುವ ಸಾಧ್ಯತೆ ಇದ್ದು, ತಾಯಂದಿರು ಪೌಷ್ಠಿಕತೆ ಕುರಿತಂತೆ ವಿಶೇಷ ಗಮನ ನೀಡಿ ಮಗುವಿಗೆ ಸರಿಯಾದ ರೀತಿಯಲ್ಲಿ ಎದೆಹಾಲು ಹಾಗೂ ಆರೋಗ್ಯಯುತ ಆಹಾರವನ್ನು ನೀಡುವುದರಿಂದ ಅಪೌಷ್ಠಿಕತೆಯನ್ನು ನಿವಾರಿಸಬಹುದು ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಹೇಳಿದ್ದಾರೆ.
ಶುಕ್ರವಾರ ನಗರದ ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಹಾಗೂ ಹಾಜಿ ಅಬ್ದುಲ್ಲಾ ಮೆಮೋರಿಯಲ್ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಸ್ಪತ್ರೆ ಉಡುಪಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ನವಜಾತ ಶಿಶು ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನವಜಾತ ಶಿಶುವಿನ ಅವಧಿಯು ಮಕ್ಕಳ ಜೀವನದಲ್ಲಿ ಅತ್ಯಂತ ನಿರ್ಣಾಯಕವಾಗಿದ್ದು, ಮಗುವಿಗೆ ಎದೆಹಾಲು, ಪೌಷ್ಠಿಕ ಆಹಾರ, ಒಂದು ವರ್ಷದ ಅವಧಿಯೊಳಗೆ ನೀಡುವುದರೊಂದಿಗೆ ಉತ್ತಮವಾಗಿ ಆರೈಕೆ ಮಾಡಿದಲ್ಲಿ ಮಗುವಿನ ಭವಿಷ್ಯದ ಬೆಳವಣಿಗೆ ಸಹ ಉತ್ತಮವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಅಭಿಪ್ರಾಯಪಟ್ಟರು.
ಮಗು ಜನಿಸಿದ ಆರಂಭಿಕ ಹಂತದಲ್ಲಿ ಹೆಚ್ಚಿನ ಕಾಳಜಿ ಅತ್ಯವಶ್ಯಕವಾಗಿದ್ದು, ಹುಟ್ಟಿನಿಂದ ಮಕ್ಕಳಿಗೆ ನೀಡಬೇಕಾದ ಲಸಿಕೆಯ ಕುರಿತು ಯಾವುದೇ ನಿರ್ಲಕ್ಷ್ಯ ತೋರದೆ ಸಮಯಕ್ಕೆ ಸರಿಯಾಗಿ ಲಸಿಕೆಯನ್ನು ನೀಡುವುದರ ಜೊತೆಗೆ ಮನೆಯ ವಾತಾವರಣ ಹಾಗೂ ಸುತ್ತಮುತ್ತಲಿನ ಪ್ರದೇಶದ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.