ಪರ್ಕಳ : ಉಡುಪಿಯ ಮಣಿಪಾಲ ಸಮೀಪದ ಪರ್ಕಳದಲ್ಲಿ ಗ್ರಾನೈಟ್ ತುಂಬಿದ ಲಾರಿಯೊಂದು ಹಿಮ್ಮುಖವಾಗಿ ಚಲಿಸಿ ಗ್ಯಾರೇಜಿನಲ್ಲಿ ಇದ್ದ ಹಲವು ವಾಹನಗಳ ಮೇಲೆ ಬಿದ್ದಿದೆ. ಇದೇ ವೇಳೆ ಹಿಂಬದಿಯಲ್ಲಿದ್ದ ಸ್ಥಳೀಯರೊಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಕೆಳಪರ್ಕದಲ್ಲಿ ಸಂಭವಿಸಿದೆ.
ಕೆಳಪರ್ಕಳ ರಾಷ್ಟ್ರೀಯ ಹೆದ್ದಾರಿಯ ಬಳಿ ನಿಯಂತ್ರಣ ಕಳೆದುಕೊಂಡ ಗ್ರಾನೈಟ್ ತುಂಬಿದ ಲಾರಿ, ಗಣಪತಿ ನಾಯಕ್ ಎಂಬವರ ಗ್ಯಾರೇಜಿಗೆ ನುಗ್ಗಿದೆ. ಈ ವೇಳೆ ದುರಸ್ತಿಗೆ ಬಂದಿದ್ದ ನಾಲ್ಕೈದು ವಾಹನಗಳು ಲಾರಿಯಡಿಗೆ ಬಿದ್ದಿವೆ. ಇದೇವೇಳೆ ಸ್ಥಳೀಯರಾದ ಸರ್ವೋತ್ತಮ ಅಮೀನ್ ಎಂಬವರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಲಾರಿ ಬೆಂಗಳೂರಿನಿಂದ ಪರ್ಕಳ ಸಮೀಪದ ಹೆರ್ಗದಲ್ಲಿರುವ ಮನೆಗೆ ಗ್ರಾನೈಟ್ ತುಂಬಿಕೊಂಡು ಬಂದಿತ್ತು. ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಏರುದಿಣ್ಣೆ ಹತ್ತಲಾಗದೆ ಲಾರಿ ಹಿಂದಕ್ಕೆ ಚಲಿಸಿದ ಪರಿಣಾಮ ಈ ಅವಾಂತರ ಸಂಭವಿಸಿದೆ. ಈ ರಸ್ತೆಯಲ್ಲಿ ಈ ಹಿಂದೆ ಕೂಡ ಹಲವು ವಾಹನಗಳು ಏರು ರಸ್ತೆ ಹತ್ತಲಾಗದೆ ಹಿಮ್ಮುಖವಾಗಿ ಚಲಿಸಿ ಅಪಘಾತಗಳು ಸಂಭವಿಸಿದ್ದವು. ತಕ್ಷಣ ಸಂಬಂಧಪಟ್ಟವರು ಇತ್ತ ಕಡೆ ಗಮನ ಹರಿಸಿ, ಈ ರಸ್ತೆಗೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರಾದ ಗಣೇಶರಾಜ್ ಸರಳಬೆಟ್ಟು ಒತ್ತಾಯಿಸಿದ್ದಾರೆ.