ಉಳ್ಳಾಲ : ಇಲ್ಲಿನ ನಾಟೆಕಲ್ ಮಂಜನಾಡಿ ಎಂಬಲ್ಲಿನ ಮನೆಯೊಂದರಲ್ಲಿ ಶನಿವಾರ ಮಧ್ಯರಾತ್ರಿ ಭಾರೀ ಸ್ಪೋಟವುಂಟಾಗಿ ಮಲಗಿದ್ದ ತಾಯಿ ಹಾಗೂ ಮೂವರು ಪುತ್ರಿಯರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿರುವ ತಾಯಿ ಹಾಗೂ ಪುತ್ರಿಯರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆಗೆ ನೀಡಲಾಗುತ್ತಿದೆ.
ಮಂಜನಾಡಿಯ ಖಂಡಿಗ ನಿವಾಸಿ ವಿದೇಶದಲ್ಲಿರುವ ಮುತ್ತಲಿಬ್ ಎಂಬವರ ಮನೆಯಲ್ಲಿ ಈ ಸ್ಫೋಟ ಸಂಭವಿಸಿದೆ. ಮುತ್ತಲಿಬ್ ಪತ್ನಿ ಖುಬ್ರಾ ಮತ್ತು ಮೂವರು ಪುತ್ರಿಯರಾದ ಮೆಅದಿಯಾ, ಮಝಿಯಾ, ಮಾಯಿದಾ ಮನೆಯಲ್ಲಿ ಒಂದೇ ಕೋಣೆಯಲ್ಲಿ ಮಲಗಿದ್ದರು. ಮಧ್ಯರಾತ್ರಿ ಮನೆಯೊಳಗಡೆ ಭಾರೀ ಸ್ಪೋಟಗೊಂಡ ಶಬ್ಧ ಕೇಳಿ ಬಂದಿದೆ. ಸ್ಫೋಟದ ತೀವ್ರತೆಗೆ ಆರ್ಸಿಸಿ ಮನೆಯ ಮೇಲ್ಭಾಗದಲ್ಲಿನ ಸಿಮೆಂಟ್ ಶೀಟ್ ಮೇಲ್ಛಾವಣಿ ಸಂಪೂರ್ಣ ಹಾರಿ ಹೋಗಿದೆ. ತಾಯಿ ಮಕ್ಕಳು ಮಲಗಿದ್ದ ಕೊಠಡಿ, ಮಂಚ, ಕಿಟಕಿ ಸಂಪೂರ್ಣ ಛಿದ್ರಗೊಂಡು ಸುಟ್ಟು ಕರಕಲಾಗಿದೆ.
ಗಾಯದ ನಡುವೆಯೂ ಓರ್ವಳು ಮನೆ ಬಾಗಿಲು ತೆಗೆದಿದ್ದಾಳೆ. ತಕ್ಷಣ ನೆರವಿಗೆ ಧಾವಿಸಿದ ಸ್ಥಳೀಯರು ಬೆಂಕಿ ನಂದಿಸಿ, ಗಂಭೀರ ಸ್ಥಿತಿಯಲ್ಲಿದ್ದ ತಾಯಿ ಹಾಗೂ ಮೂವರು ಮಕ್ಕಳನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಮನೆಯೊಳಗಿದ್ದ ಅಡುಗೆ ಅನಿಲ ತುಂಬಿದ್ದ ಸಿಲಿಂಡರ್ ಸ್ಪೋಟಿಸಿ ಘಟನೆ ನಡೆದಿದೆ ಎನ್ನಲಾಗಿದೆ. ಘಟನೆಯಲ್ಲಿ ಸಿಲಿಂಡರ್ ಮನೆಯೊಳಗಿಂದ ಹೊರಗಡೆಗೆ ಎಸೆಯಲ್ಪಟ್ಟಿದೆ. ಘಟನಾ ಸ್ಥಳಕ್ಕೆ ಉಳ್ಳಾಲ ತಾಲೂಕು ತಹಶೀಲ್ದಾರ್ ಪುಟ್ಟರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.