ಮಂಗಳೂರು : ಇಂದಿನ ಕೆಲ ಮಕ್ಕಳು ಲೋಕದ ಪರಿವೇ ಮೊಬೈಲ್ ಗುಂಗಿನಲ್ಲಿಯೇ ಮುಳುಗುತ್ತಿದ್ದರೆ, ಇನ್ನು ಕೆಲವರು ಶಾಲೆಯ ಪಠ್ಯದ ಹೊರತು ಬೇರೆ ವಿಚಾರಗಳ ಕಡೆಗೆ ಕಣ್ಣುಹಾಯಿಸುವುದೇ ಇಲ್ಲ. ಆದರೆ ಇಲ್ಲೊಬ್ಬ ಪುಟ್ಟಬಾಲೆ ಮನೆಮನೆಗೆ, ಕೇರಿಕೇರಿಗೆ ಹೋಗಿ ಡೆಂಗ್ಯು, ಪರಿಸರಸ್ನೇಹಿ ಗಣಪನ ಜಾಗೃತಿಯಲ್ಲಿ ತೊಡಗಿದ್ದಾಳೆ. ಈಕೆಯ ಈ ಸಾಧನೆಗೆ ಸ್ವತಃ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರು ಶ್ಲಾಘನೆ ವ್ಯಕ್ತಪಡಿಸಿ ಸನ್ಮಾನಿಸಿದ್ದಾರೆ.
ಸನ್ನಿಧಿ ಕಶೆಕೋಡಿ ಎಂಬ ಪುಟ್ಟಬಾಲಕಿಯೇ ಈ ರೀತಿ ಜಾಗೃತಿ ಮೂಡಿಸುತ್ತಿರುವಾಕೆ. ಇವಳು ಮಾಣಿ ಪೆರಾಜೆಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ. ಮಳೆಗಾಲ ಬಂದರೆ ಸಾಕು ಈಕೆ ಮಂಗಳೂರಿನ ಸುತ್ತಮುತ್ತಲಿನ ಪರಿಸರದ ಅಂಗಡಿಗಳಿಗೆ, ಮನೆಗಳಿಗೆ ತೆರಳಿ ಡೆಂಗ್ಯು ಭೀತಿಯ ಬಗ್ಗೆ ಜಾಗೃತಿ ಮೂಡಿಸುತ್ತಾಳೆ. ಅಲ್ಲದೆ ಗಣೇಶ ಚತುರ್ಥಿ ಸಂದರ್ಭ ಎಲ್ಲರೂ ಪರಿಸರಸ್ನೇಹಿ ಗಣಪತಿಯನ್ನೇ ತಂದು ಪೂಜಿಸಬೇಕು. ಇದರಿಂದ ಗಣಪತಿ ವಿಸರ್ಜನೆ ವೇಳೆ ಜಲಮೂಲಗಳು ಕಲುಷಿತಗೊಳ್ಳುವುದಿಲ್ಲ ಎಂದು ದೊಡ್ಡವರಿಗೇ ಪಾಠ ಮಾಡುತ್ತಾಳೆ.
ಈಕೆಯ ಈ ಸಾಧನೆಗೆ ಶ್ಲಾಘನೆ ವ್ಯಕ್ತಪಡಿಸಿರುವ ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ಬೆಂಗಳೂರಿನ ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಅಭಿನಂದಿಸಿ ಗೌರವಿಸಿದ್ದಾರೆ. ಈ ಸಂದರ್ಭ ಸನ್ನಿಧಿ ಕಶೆಕೋಡಿ ‘ವಿಧಾನಸಭಾ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡುತ್ತಿದ್ದೀರಿ. ಮುಂದೆ ನೀವು ರಾಷ್ಟ್ರಮಟ್ಟದಲ್ಲೂ ಹೆಸರು ಮಾಡಬೇಕು. ನಮ್ಮ ಊರಿನ ಕೀರ್ತಿ ಪತಾಕೆ ಹಾರಿಸಬೇಕು” ಎಂದು ಹೇಳಿದಳು. ಇದಕ್ಕೆ ವಿಧಾನಸಭಾಧ್ಯಕ್ಷರು “ನೀನು ಕೂಡ ದೇಶದಲ್ಲಿ ಉತ್ತಮ ಹೆಸರು ಮಾಡುತ್ತಿ” ಎಂದು ಹಾರೈಸಿದರು.