ಉಡುಪಿ : ಉಡುಪಿ ಜಿಲ್ಲೆಯಂತಹ ಶ್ರೀಮಂತ ಜಾನಪದ ಸಂಸ್ಕೃತಿಯನ್ನು ಹೊಂದಿರುವ ನಾಡಿನಲ್ಲಿ ಜಾನಪದ, ಸಾಂಸ್ಕೃತಿಕ ತಂಡಗಳಿಗೆ ಉತ್ತಮ ಭವಿಷ್ಯವಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರು ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷರೂ ಆಗಿರುವ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಅವರು ಬುಧವಾರ ಮಣಿಪಾಲದ ವಿ.ಪಿ.ನಗರದ ತಸ್ವ ಕಟ್ಟಡದ 2ನೇ ಮಹಡಿಯಲ್ಲಿ ಯುವ ಜಾನಪದ ಕಲಾವಿದ ಹೇಮಂತ್ ಅವರು ಹುಟ್ಟುಹಾಕಿರುವ ‘ಕಲಾಮಯಂ’ ಸಂಘಟನೆಯ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷನಾಗಿ ಕಳೆದ ಹಲವಾರು ವರ್ಷಗಳಿಂದ ಜಿಲ್ಲೆಯ ವಿವಿಧ ಜಾನಪದ ತಂಡಗಳಿಗೆ ಪ್ರದರ್ಶನ ನೀಡಲು ‘ಜಾನಪದೋತ್ಸವ’ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಯಶಸ್ವಿಯಾಗಿ ಸಂಘಟಿಸಲಾಗಿದೆ. ತಲ್ಲೂರು ಫ್ಯಾಮಿಲಿ ಟ್ರಸ್ಟ್ ಮೂಲಕ ಜಾನಪದ ಪ್ರಶಸ್ತಿಯನ್ನೂ ಜಾನಪದ ಕಲಾವಿದರಿಗೆ, ಸಂಘಟಕರಿಗೆ ನೀಡಲಾಗುತ್ತಿದೆ. ಪ್ರಸ್ತುತ ಪ್ರತಿಭಾನ್ವಿತ ಯುವ ಕಲಾವಿದರನ್ನು ಒಳಗೊಂಡಿರುವ ಈ ಕಲಾಮಯಂ ಸಂಸ್ಥೆ ಅತ್ಯಲ್ಪ ಸಮಯದಲ್ಲಿಯೇ ನಾಡಿನ ಜಾನಪದ ಆಸಕ್ತರ ಮನೆಗೆದ್ದಿರುವುದು ದೊಡ್ಡ ಸಾಧನೆಯೇ ಆಗಿದೆ ಎಂದು ಅವರು ತಿಳಿಸಿದರು.
ಈ ತಂಡ ಕರ್ನಾಟಕ ಜಾನಪದ ಪರಿಷತ್ತು ಪ್ರಾಯೋಜಿತ ಹಲವಾರು ಕಾರ್ಯಕ್ರಮಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ರೇಕ್ಷಕರ ಮನ ಗೆದ್ದಿದೆ. ಆದ್ದರಿಂದ ಯಾವುದೇ ಜಾನಪದ ಕಲೆಗಳಾಗಿರಲಿ, ಅವುಗಳ ಬಗ್ಗೆ ಕೀಳರಿಮೆ ಇಲ್ಲದೆ ಕಲಾವಿದರು ಸಂಘಟಿತರಾಗಿ ಬೆಳೆದರೆ, ನಾಡಿನ ಜಾನಪದೀಯ ಕಲೆಗಳ ಉಳವಿಗೂ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಕಲಾಮಯಂ ತಂಡ ಭವಿಷ್ಯದಲ್ಲಿ ಉನ್ನತಿಯನ್ನು ಸಾಧಿಸಲಿ ಎಂದು ಅವರು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಲಾಮಯಂ ಸಂಘಟನೆಯ ಸಂಸ್ಥಾಪಕ ಹೇಮಂತ್, ಮುಖ್ಯ ಅತಿಥಿಗಳಾಗಿ ಪ್ರಕಾಶ್ ಮೂಡಿತ್ತಾಯ ಸುಳ್ಯ, ವಿದುಷಿ ಅದಿತಿ ಭಟ್, ವಿದುಷಿ ಶ್ರೀಕಲ್ಯಾಣಿ, ಬಿ.ಆನಂದ ಶೆಟ್ಟಿಗಾರ್ ಉಪಸ್ಥಿತರಿದ್ದರು.